ಹಣವಂತೆಯ ಹಣೆಬರಹ ನೋಡಿ: BMW ಕಾರಲ್ಲಿ ಬಂದು ಹೂಕುಂಡ ಕದ್ದ ಮಹಿಳೆ

By Anusha Kb  |  First Published Oct 29, 2024, 1:52 PM IST

ನೋಯ್ಡಾದಲ್ಲಿ ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರೆಸಿಡೆನ್ಸಿ ಸೊಸೈಟಿ ಮುಂದಿನ ಹೂಕುಂಡಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಐಷಾರಾಮಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬಳು ರೆಸಿಡೆನ್ಸಿ ಸೊಸೈಟಿ ಮುಂದಿದ್ದ ಹೂಕುಂಡಗಳನ್ನು ಕದ್ದುತೆಗೆದುಕೊಂಡು ಹೋದಂತಹ ವಿಚಿತ್ರ ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್‌ 18ರಲ್ಲಿ ಬರುವ ವಸತಿ ಸಮುಚ್ಚಯದ ಬಳಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದಲ್ಲದೇ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಣವಂತ ಮಹಿಳೆಯ ಈ ಕೀಳು ಬುದ್ಧಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೈರಲ್ ವೀಡಿಯೋದಲ್ಲಿ ಕಾಣಿಸುವಂತೆ ಆಕ್ಟೋಬರ್ 25ರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕಡುಗೆಂಪು ಬಣ್ಣದ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆ ರಸ್ತೆಬದಿ ತನ್ನ ಕಾರನ್ನು ನಿಲ್ಲಿಸಿದ್ದಾಳೆ. ಈ ಮಹಿಳೆಯ ಕಳ್ಳತನದ ಕೃತ್ಯಕ್ಕೆ ವ್ಯಕ್ತಿಯೊರ್ವ ನೆರವಾಗಿರುವುದು ಕೂಡ ವೀಡಿಯೋದಲ್ಲಿ ಸೆರೆಯಾಗಿದೆ. ಆಕೆ ಹೂಕುಂಡವನ್ನು ಎತ್ತಿಕೊಂಡು ಬರುತ್ತಿದ್ದಂತೆ ಈತ ಕಾರಿನ ಡೋರ್ ತೆರೆದು ಹಿಡಿದುಕೊಂಡು ಆಕೆಯ ಕೃತ್ಯಕ್ಕೆ ನೆರವಾಗಿದ್ದಾನೆ. ಇದಾಗಿ ಕ್ಷಣದಲ್ಲೇ ಇಬ್ಬರೂ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.

Tap to resize

Latest Videos

ಸಚಿನ್ ಗುಪ್ತಾ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ನೋಯ್ಡಾದಲ್ಲಿ ಬಿಎಂಡಬ್ಲ್ಯು ಕಾರಿನಲ್ಲಿ ಬಂದ ಮಹಿಳೆಯೊಬ್ಬರು ರಸ್ತೆಬದಿ ಇಟ್ಟಿದ್ದ ಹೂಕುಂಡಗಳನ್ನು ಎತ್ತಿಕೊಂಡು ಹೋಗಿದ್ದಾಳೆ ಎಂದು ಬರೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಸಮಯದಲ್ಲೇ ವೈರಲ್ ಆಗಿದ್ದು, ವೀಡಿಯೋ ನೋಡಿದವರು ಮಹಿಳೆಯ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈಕೆಗೆ ಐಷಾರಾಮಿ ಕಾರು ಖರೀದಿಸಲು ಹಣವಿದೆ. ಆದರೆ ಹೂಕುಂಡ ಖರೀದಿಸಲು ಹಣವಿಲ್ಲ, ಅವರ ಸ್ಥಾನಮಾನವನ್ನು ಕೂಡ ಅವರು ಮರೆತು ಬಿಟ್ಟದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಣದಿಂದ ಘನತೆಯನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಕದ್ದು ಕದ್ದೇ ಇವರು ಈ ಬಿಎಂಡಬ್ಲ್ಯು ಕಾರು ಖರೀದಿಸಿರಬಹುದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಮತ್ತೆ ಕೆಲವರು ಆಕೆ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಮಹಿಳೆ ಮೇಲೆ ದೂರು ದಾಖಲಾದ ಬಗ್ಗೆ ಯಾವುದೇ ವರದಿಯಾಗಿಲ್ಲ. 

नोएडा, यूपी में एक मोहतरमा रात के 12 बजे BMW कार से उतरी। सड़क किनारे रखा गमला उठाकर ले गईं। pic.twitter.com/RI9WMWjAvJ

— Sachin Gupta (@SachinGuptaUP)

 

click me!