ಅಯೋಧ್ಯೇಲಿ ಭಾರೀ ಭದ್ರತೆ| ಭೂಮಿಪೂಜೆ ವೇಳೆ ಉಗ್ರ ದಾಳಿ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ| ಎಲ್ಲೆಡೆ ವಾಹನ ತಪಾಸಣೆ, 5ಕ್ಕಿಂತ ಹೆಚ್ಚು ಜನ ಸೇರದಂತೆ ಸೂಚನೆ| ಡ್ರೋನ್ ಕಣ್ಗಾವಲು| ಭದ್ರತೆಯಲ್ಲೂ ಕೊರೋನಾ ಶಿಷ್ಟಾಚಾರ ಪಾಲನೆ|
ಅಯೋಧ್ಯೆ(ಆ.03): ಆ.5ರಂದು ನಡೆಯಲಿರುವ ಐತಿಹಾಸಿಕ ರಾಮಮಂದಿರ ಭೂಮಿಪೂಜೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಅಯೋಧ್ಯೆಯಲ್ಲಿ ಭಾರೀ ಬಿಗಿಬಂದೋಬಸ್‌್ತ ಆಯೋಜಿಸಲಾಗಿದೆ. ಭೂಮಿಪೂಜೆಗೆ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮತ್ತು ಭೂಮಿಪೂಜೆ ವೇಳೆ ಪಾಕ್ ಮೂಲದ ಉಗ್ರರ ದಾಳಿಯ ಕುರಿತು ಮುನ್ನೆಚ್ಚರಿಕೆ ಇರುವ ಹಿನ್ನೆಲೆಯಲ್ಲಿ, ಶ್ರೀರಾಮನ ತವರೂರಲ್ಲಿ ಹಿಂದೆಂದೂ ಕಂಡುಕೇಳರಿಯದ ಭದ್ರತೆ ಒದಗಿಸಲಾಗಿದೆ.
ರಾಮ ಮಂದಿರಕ್ಕೆ ಹುತಾತ್ಮ ಯೋಧರ ಮನೆಯ ಮಣ್ಣು!
undefined
ಕಳೆದೊಂದು ವಾರದಿಂದಲೇ ನಗರಕ್ಕೆ ಬರುವ ಎಲ್ಲಾ ವಾಹನಗಳನ್ನು ಆಯಕಟ್ಟಿನ ಜಾಗಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಆಗಮಿಸುವ ರಸ್ತೆ ಮತ್ತು ಅದರ ಸುತ್ತಮತ್ತಲ ಪ್ರದೇಶಗಳ ಮೇಲೆ ಡ್ರೋನ್ ಮೂಲಕ ಕಣ್ಗಾವಲು ಇಡುವ ವ್ಯವಸ್ಥೆಯನ್ನೂ ಈಗಾಗಲೇ ಪೊಲೀಸರು ಜಾರಿಗೊಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸುತ್ತಲಿನ ಭದ್ರತೆಯನ್ನು ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ವಹಿಸಿಕೊಳ್ಳಲಿದೆ. ಹಲವು ದಿನಗಳಿಂದ ಐಸೋಲೇಷನ್‌ನಲ್ಲಿರುವ ಪೊಲೀಸರು ಕೂಡ ಮೋದಿ ಅವರಿಗೆ ಭದ್ರತೆ ಒದಗಿಸಲಿದ್ದಾರೆ. ಜೊತೆಗೆ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ವರದಿ ಬಂದಿರುವ 45 ವರ್ಷದೊಳಗಿನ ಪೊಲೀಸರು ಮಾತ್ರವೇ ಅಯೋಧ್ಯೆಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತಿದೆ.
ಇನ್ನು ಭೂಮಿಪೂಜೆ ನಡೆಯುವ ಸ್ಥಳದ ಸುತ್ತಮುತ್ತಲೂ ಆಯಕಟ್ಟಿನ ಮತ್ತು ಎತ್ತರದ ಕಟ್ಟಡಗಳ ಮೇಲೆ ಸ್ನಿಪ್ಪರ್‌ಗಳನ್ನು ನಿಯೋಜಿಸುವ ಮೂಲಕ, ಯಾವುದೇ ಸಂಭವನೀಯ ದಾಳಿ ತಡೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನಗರದಲ್ಲಿ ಒಟ್ಟಾರೆ 3500ಕ್ಕೂ ಹೆಚ್ಚು ಪೊಲೀಸರು, 40 ತುಕಡಿಯಷ್ಟುಪ್ರಾದೇಶಿಕ ಸೇನಾಪಡೆಯ ಸಿಬ್ಬಂದಿ ಮತ್ತು 10 ತುಕಡಿ ಆರ್‌ಎಎಫ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಕನ್ನಡ ನೆಲದ ಹಂಪಿಗೂ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನಿಗೂ ಅವಿನಾಭಾವ ಸಂಬಂಧವಿದೆ!
ಕೊರೋನಾ ಹಿನ್ನೆಲೆಯಲ್ಲಿ ರಾಮಮಂದಿರ ಶಂಕುಸ್ಥಾಪನೆ ವೇಳೆ ಅಯೋಧ್ಯೆಗೆ ಹೆಚ್ಚಿನ ಸಂಖ್ಯೆಯಲ್ಲಿ ಹೆಚ್ಚಿನ ಜನರು ಬರಬೇಡಿ ಎಂದು ಈಗಾಗಲೇ ರಾಮಜನ್ಮಭೂಮಿ ಟ್ರಸ್ಟ್ ಮನವಿ ಮಾಡಿದೆ. ಆದಾಗ್ಯೂ ಅಯೋಧ್ಯೆಗೆ ಬರುವ ಜನರು ಗುಂಪುಗೂಡದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. 5ಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ಸೂಚಿಸಿದ್ದಾರೆ. ಇದಲ್ಲದೆ ಇತರೆ ಊರಿನ ಜನರನ್ನು ಅಯೋಧ್ಯೆ ಪ್ರವೇಶಿದಂತೆ ನೋಡಿಕೊಳ್ಳಲಾಗುತ್ತಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.