ಒಟ್ಟೊಟ್ಟಿಗೆ ಎರಡೆರಡು ಟಾರ್ಗೆಟ್: ದೇವರಂತೆ ಕಾಪಾಡಿದ ಹೆಲ್ಮೆಟ್, viral video

By Anusha KbFirst Published Sep 16, 2022, 3:01 PM IST
Highlights

ಅಪಘಾತದ ಭಯಾನಕ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಂದೇ ಕ್ಷಣ ಎದುರಾದ ಅನಾಹುತದಿಂದ ಬೈಕ್ ಸವಾರ ಪವಾಡ ಸದೃಶವಾಗಿ ಪಾರಾಗಿದ್ದಾನೆ.

ನವದೆಹಲಿ: ರಸ್ತೆ ಅಪಘಾತದ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನಾವು ಈಗಾಗಲೇ ಸಾಕಷ್ಟು ನೋಡಿದ್ದೇವೆ. ಅನೇಕ ಸಂದರ್ಭಗಳಲ್ಲಿ ಜನ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಅಪಘಾತದ ವೇಳೆ ಹೆಲ್ಮೆಟ್ ಧರಿಸಿದ್ದರೆ ಜೀವ ಉಳಿಯುತ್ತಿತ್ತೇನೋ ಅಥವಾ ಇಷ್ಟೊಂದು ತೀವ್ರವಾದ ಗಾಯ ಆಗಿದ್ದಿರಲಾರದು ಎಂಬಂತಹ ಉದ್ಗಾರಗಳು ಅಪಘಾತಕ್ಕೊಳಗಾದವರ ಬಂಧುಗಳು, ಸಂಬಂಧಿಗಳ ಬಾಯಿಂದ ಬಂದಿರುತ್ತದೆ. ಪೊಲೀಸರು ಎಷ್ಟು ಬಾರಿ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಿದರೂ, ಸಾಕಷ್ಟು ದಂಡ ಹಾಕಿದರೂ ಅನೇಕರು ಹೆಲ್ಮೆಟ್ ಧರಿಸುವ ಬಗ್ಗೆ ಹೆಚ್ಚಿನ ಯೋಚನೆ ಮಾಡುವುದಿಲ್ಲ. 

ಈ ನಡುವೆ ಹೆಲ್ಮೆಟ್ (helmet) ಧರಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ಒಂದೇ ನಿಮಿಷದಲ್ಲಿ ಎರಡೆರಡು ಅನಾಹುತದಿಂದ ಪಾರಾದ ವಿಡಿಯೋವೊಂದನ್ನು ದೆಹಲಿ ಪೊಲೀಸರು ತಮ್ಮ ಟ್ವಿಟ್ಟರ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೆಲ್ಮೆಟ್ ಧರಿಸಿದವನಿಗೆ ದೇವರು ಸಹಾಯ ಮಾಡುತ್ತಾರೆ ಎಂದು ಅವರು ಈ ವಿಡಿಯೋ ಪೋಸ್ಟ್‌ ಮಾಡಿ ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ತನ್ನ ಬೈಕ್‌ನಲ್ಲಿ ಸಂಚರಿಸುತ್ತಿರುವಾಗ ಕಾರೊಂದು ಡಿಕ್ಕಿ (Car Accident) ಹೊಡೆದಿದೆ. ಈ ವೇಳೆ ಬೈಕ್ ಯುವಕನ ನಿಯಂತ್ರಣ ತಪ್ಪಿ ಸಮೀಪದ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದು ಒಂದೆಡೆ ಬಿದ್ದರೆ, ಇತ್ತ ಯುವಕ ರಸ್ತೆಯ ಮೇಲೆ ಎಸೆಯಲ್ಪಟ್ಟಿದ್ದಾನೆ. ಈ ವೇಳೆ ಈತ ಹೆಲ್ಮೆಟ್ ಧರಿಸಿದ್ದರಿಂದ ಯಾವುದೇ ಹಾನಿಯಾಗದೇ ಪವಾಡ ಸದೃಶವಾಗಿ ಎದ್ದು ಕುಳಿತಿದ್ದಾನೆ. ಆದರೆ ಎದ್ದು ಕುಳಿತು ಇನ್ನೇನು ಮೇಲೇಳಬೇಕು ಎನ್ನುವಷ್ಟರಲ್ಲಿ ಈತನ ಬೈಕ್ ಡಿಕ್ಕಿ ಹೊಡೆದಿದ್ದ ಕರೆಂಟ್ ಕಂಬ ಈತನ ಮೇಲೆಯೇ ಬೀಳುತ್ತದೆ. ಕ್ಷಣದಲ್ಲೇ ಎದುರಾದ ಎರಡೆರಡು ಭಯಾನಕ ಅನಾಹುತಗಳಿಂದ ಈತ ಪವಾಡ ಸದೃಶವಾಗಿ ಪಾರಾಗಿದ್ದಾನೆ.

God helps those who wear helmet ! pic.twitter.com/H2BiF21DDD

— Delhi Police (@DelhiPolice)

Latest Videos

ಅಪಘಾತಕ್ಕಿಂತಲೂ ಕರೆಂಟ್ ಕಂಬ ಬಿದ್ದಿದ್ದರಿಂದ ಈತನಿಗೆ ಗಂಭೀರ ಹಾನಿ ಸಂಭವಿಸುವುದರಲ್ಲಿತ್ತು. ಆದರೆ ಹೆಲ್ಮೆಟ್ ಧರಿಸಿದ್ದರಿಂದ ದೊಡ್ಡ ಅನಾಹುತದಿಂದ ಈತ ಪಾರಾಗಿದ್ದಾನೆ. ಈ ವಿಡಿಯೋ ಹೆಲ್ಮೆಟ್‌ನ ಮಹತ್ವ ತಿಳಿಸಿದಂತು ನಿಜ. ಈ ವಿಡಿಯೋ ನೋಡಿದ ನೋಡುಗರೊಬ್ಬರು ದಯವಿಟ್ಟು ಹೆಲ್ಮೆಟ್ ಧರಿಸಿ ನಿಮ್ಮನ್ನು ರಕ್ಷಿಸುವ ಜೊತೆ ದೇಶವನ್ನು ಕೂಡ ರಕ್ಷಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ವಿಶ್ವದಲ್ಲೇ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು (Developed Nation) ಪ್ರತಿಯೊಬ್ಬ ನಾಗರಿಕನೂ ಅಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಅನೇಕ ಬಳಕೆದಾರರು ಹೆಲ್ಮೆಟ್ ಧರಿಸುವ ಅಗತ್ಯವಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

ಎಕ್ಸ್‌ಪ್ರೆಸ್‌ ವೇನಲ್ಲಿ ನಿಂತಿದ್ದ ಡಬಲ್‌ ಡೆಕರ್‌ ಬಸ್‌ಗೆ ಗುದ್ದಿದ ಇನ್ನೊಂದು ಬಸ್‌, 8 ಸಾವು!

ಭಾರತದಲ್ಲಿ ಪ್ರತಿದಿನ ಸರಾಸರಿ 1214 ಅಪಘಾತಗಳು ಸಂಭವಿಸುತ್ತವೆ. ಅದರಲ್ಲಿ ಶೇ.25 ರಷ್ಟು ದ್ವಿಚಕ್ರವಾಹನ (two wheeler) ಸವಾರರು ಮೃತಪಟುತ್ತಾರೆ. ಈ ಮೃತರಲ್ಲಿ 20 ಮಂದಿ 14 ವರ್ಷಕ್ಕಿಂತಲೂ ಕಡಿಮೆ ಪ್ರಾಯದವರಾಗಿದ್ದಾರೆ. ದೇಶದಲ್ಲಿ ಪ್ರತಿದಿನ 377 ಜನ ರಸ್ತೆ ಅಪಘಾತದಲ್ಲಿ ಮೃತಪಡುತ್ತಾರೆ. ಇದು ಜಂಬೋ ಜೆಟ್ ಅಪಘಾತದಿಂದ ಸಂಭವಿಸುವ ಸಾವಿಗೆ ಸಮ ಎನ್ನಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಅರ್ಧ ಹೆಲ್ಮೆಟ್ ಬದಲು ಸಂಪೂರ್ಣ ಹೆಲ್ಮೆಟ್ ಧರಿಸುವುದರಿಂದ ಶೇ.64 ರಷ್ಟು ಜನರ ಸಾವನ್ನು ತಪ್ಪಿಸಬಹುದಾಗಿದೆ. ಜೊತೆಗೆ ಶೇ.74 ರಷ್ಟು ಮಿದುಳಿಗೆ ಆಗುವ ಗಾಯವನ್ನು ತಡೆಯಬಹುದಾಗಿದೆ. 

ಚಿತ್ತೂರು ಅಪಘಾತದಲ್ಲಿ ಇಬ್ಬರು ಪೊಲೀಸರು ಬಲಿ; ಭಾವುಕರಾದ ಡಿಸಿಪಿ ಭೀಮಾಶಂಕರ್ ಗುಳೇದ್

click me!