
ಇಂದೋರ್: ಹಲವು ರಾಜ್ಯಗಳಲ್ಲಿ ಬೈಕ್ ಅಥವಾ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ No Helmet No Petrol ನಿಯಮ ಜಾರಿಗೆ ತಂದಿದೆ. ಅದರಂತೆ ಹೆಲ್ಮೆಟ್ ಧರಿಸದ ಯಾವುದೇ ದ್ವಿಚಕ್ರ ವಾಹನ ಸವಾರರಿಗೂ ಪೆಟ್ರೋಲ್ ಅಥವಾ ಡಿಸೇಲ್ ಸೇರಿದಂತೆ ಯಾವುದೇ ಇಂಧನವನ್ನು ನೀಡುವುದಿಲ್ಲ. ಸರ್ಕಾರ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೆ ತಂದಿದೆ. ಆದರೆ ಜನ ಸುರಕ್ಷತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡು ಹೆಲ್ಮೆಟ್ ಇಲ್ಲದೆಯೂ ಇಂಧನ ಪಡೆಯುವುದಕ್ಕಾಗಿ ಹೆಲ್ಮೆಟ್ ಬಾಡಿಗೆಗೆ ಪಡೆಯುತ್ತಿರುವ ವಿಚಾರ ಮಧ್ಯಪ್ರದೇಶದ ಇಂದೋರ್‌ನಲ್ಲಿ ಬೆಳಕಿಗೆ ಬಂದಿದ್ದು, ಈ ದೃಶ್ಯ ಈಗ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೆಲ್ಮೆಟ್ ಇಲ್ಲದವರಿಗೆ ಪೆಟ್ರೋಲ್ ಬಂಕ್ ಬಳಿಯೇ ಬಾಡಿಗೆಗೆ ಸಿಗುತ್ತೆ ಹೆಲ್ಮೆಟ್
ನಮ್ಮ ಜನ ಯಾವುದೇ ನಿಯಮ ಜಾರಿಗೆ ತಂದರೂ ಅದನ್ನು ಬ್ರೇಕ್ ಮಾಡುವುದಕ್ಕೆ ಯಾವುದಾದರೊಂದು ತಂತ್ರವನ್ನು ಕಂಡು ಹಿಡಿಯುತ್ತಾರೆ. ಅದೇ ರೀತಿ ಈಗ ಸರ್ಕಾರದ No Helmet No Petrol ಪ್ರತಿಯಾಗಿ ಜನ ಹೆಲ್ಮೆಟ್ ಬಾಡಿಗೆ ಪಡೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ. ಜನರ ಈ ಬುದ್ಧಿಯ ಅರಿವಿರುವ ಬುದ್ಧಿವಂತರೊಬ್ಬರು ಸರ್ಕಾರದ No Helmet No Petrol ನಿಯಮವನ್ನೇ ಮುಂದಿಟ್ಟುಕೊಂಡು ಹೊಸ ಉದ್ಯಮ ಶುರು ಮಾಡಿದ್ದಾರೆ. ಅದೇ ಹೆಲ್ಮೆಟ್ ಬಾಡಿಗೆಗೆ ನೀಡುವುದು. ಮಧ್ಯಪ್ರದೇಶದ ಇಂದೋರ್‌ನ ಏರೋಡ್ರಮ್ ರಸ್ತೆಯ ಭಾರತೀಯ ಪೆಟ್ರೋಲ್ ಪಂಪ್ ಸಮೀಪ ಈ ವ್ಯವಹಾರ ಬೆಳಕಿಗೆ ಬಂದಿದೆ.
ಒಂದು ಹೆಲ್ಮೆಟ್‌ಗೆ 10ರಿಂದ 20 ರೂ ಬಾಡಿಗೆ
ಉದ್ದೇಶಪೂರ್ವಕವಾಗಿಯೋ ಅಥವಾ ಮರೆತು ಹೋಗಿಯೋ ಹೆಲ್ಮೆಟ್ ಹಾಕದೇ ಬಂದವರು ಇಲ್ಲಿ ಹೆಲ್ಮೆಟ್ ಬಾಡಿಗೆ ಪಡೆದು ಸಮೀಪದ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೋಗುತ್ತಾರೆ. ಕೇವಲ 5 ನಿಮಿಷಕ್ಕೆ ಇಲ್ಲಿ ಒಂದು ಹೆಲ್ಮೆಟ್‌ಗೆ 10ರಿಂದ 20 ರೂಪಾಯಿ ದರ ನಿಗದಿ ಮಾಡಲಾಗುತ್ತದೆ. ಬೈಕ್ ಸವಾರರಿಗೆ ಸುಲಭವಾಗಿ ಪೆಟ್ರೋಲ್ ಪಡೆಯುವುದಕ್ಕೆ ಇದು ಸಾಕಾಗುತ್ತದೆ. ಹೀಗೆ ಹೆಲ್ಮೆಟ್ ವಾಪಸ್ ಪಡೆದ ನಂತರ ಬೇರೆಯವರಿಗೆ ಈ ಹೆಲ್ಮೆಟನ್ನು ನೀಡಲಾಗುತ್ತದೆ. ಒಟ್ಟಿನಲ್ಲಿ ಸರ್ಕಾರದ ಈ ಹೊಸ ನಿಯಮದಿಂದ ಇಲ್ಲಿ ಹೊಸ ಉದ್ಯಮವೇ ಆರಂಭವಾಗಿದೆ.
ಈ ಹೊಸ ಉದ್ಯಮದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಪೆಟ್ರೋಲ್ ಪಂಪ್‌ನ ಪಕ್ಕದಲ್ಲಿ ಯುವಕನೋರ್ವ ಹೆಲ್ಮೆಟ್‌ಗಾಗಿ ಕಾಯುತ್ತಾ ನಿಂತಿದ್ದು, ಅಲ್ಲಿಗೆ ಬರುವ ಮತ್ತೊಬ್ಬ ಯುವಕ ಅಲ್ಲಿ ನಿಂತಿದ್ದವನಿಗೆ ಹೆಲ್ಮೆಟ್ ನೀಡಿ ಹಣ ಪಡೆಯುತ್ತಾನೆ.
ಅಕಾಲಿಕ ಮರಣ ತಪ್ಪಿಸಲು ಈ ನಿಯಮ ಜಾರಿಗೆ ತಂದ ಸರ್ಕಾರ:
ಗಮನಾರ್ಹವಾಗಿ, ಇಂದೋರ್ ಸ್ಥಳೀಯಾಡಳಿತವು ಆಗಸ್ಟ್ 1, 2025 ರಿಂದ ಜನರ ಸುರಕ್ಷತೆಗಾಗಿ ಹೊಸ ಸಂಚಾರ ನಿಯಮವನ್ನು ಜಾರಿಗೆ ತಂದಿದೆ. ಜಿಲ್ಲಾಧಿಕಾರಿ ಆಶೀಶ್ ಸಿಂಗ್ ಅವರ ಆದೇಶದಂತೆ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಸವಾರಿ ಮಾಡುವ ಯಾರಿಗೂ ಇಂಧನ ಒದಗಿಸದಂತೆ ಪೆಟ್ರೋಲ್ ಬಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಮತ್ತು ಅಕಾಲಿಕ ಮರಣಗಳನ್ನು ತಪ್ಪಿಸಲು ಈ ನಿಯಮವನ್ನು ಉದ್ದೇಶಿಸಲಾಗಿತ್ತು, ಆದರೂ ಕೆಲ ಜನರು ಇದನ್ನು ಸುಲಭವಾಗಿ ಹಣ ಗಳಿಸುವ ವ್ಯವಹಾರವಾಗಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ