14 ವರ್ಷದ ಬಾಲಕನೋರ್ವ ನೀರಿನ ರಭಸಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಹಲವು ಗಂಟೆಗಳ ಬಳಿಕ ಬಾಲಕನ ಶವ ಸಿಕ್ಕಿದೆ. ಈ ಘಟನೆಯಿಂದ ಬಾಲಕ ವಾಸವಿದ್ದ ಏರಿಯಾದಲ್ಲಿ ಸೂತಕದ ಛಾಯೆ ಆವರಿಸಿದೆ.
ಜೈಪುರ: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮನೆಯಿಂದ ಹೊರ ಹೋಗಿದ್ದ 14 ವರ್ಷದ ಬಾಲಕ ನೆರೆಗೆ ಸಿಲುಕಿ ಮೃತನಾಗಿದ್ದಾನೆ. ಜೈಪುರದ ಬಗರೂ ಎಂಬಲ್ಲಿ ಘಟನೆ ನಡೆದಿದ್ದು, ಬಾಲಕ ಮನೆಯಿಂದ ಹೊರಡುವ ಮುನ್ನ 10 ನಿಮಿಷದಲ್ಲಿ ಹಿಂದಿರುಗಿ ಬರೋದಾಗಿ ಹೇಳಿದ್ದನು. ಮನೆಯಿಂದ ಅನತಿ ದೂರದಲ್ಲಿಯೇ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಗೆಳೆಯರ ಜೊತೆ ಹೊರ ಹೋಗಿದ್ದ ಬಾಲಕ ನಡುರಸ್ತೆಯಲ್ಲಿಯೇ ಮಾಯವಾಗಿದ್ದನು. ಸುಮಾರು ಏಳು ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಬಾಲಕನ ಶವ ಪತ್ತೆಯಾಗಿದೆ.
14 ವರ್ಷದ ಪಿಯೂಷ್ ಮೃತ ಬಾಲಕ. ಬಗರೂ ವ್ಯಾಪ್ತಿಯ ಛಿಪೋಂ ಬಡಾವಣೆಯಲ್ಲಿ ವಾಸವಾಗಿದ್ದ ಬಾಲಕ ಮಳೆ ನಡುವೆಯೂ ಗೆಳಯರ ಜೊತೆ ಹೊರಗೆ ಹೋಗಿದ್ದನು. ಭಾರೀ ಮಳೆಯಿಂದ ಮನೆಯ ಪರಿಸರದಲ್ಲಿ ನೀರು ನಿಂತಿತ್ತು. ಮನೆಯ ಸಮೀಪದಲ್ಲಿಯೇ ಗೆಳೆಯರ ಹೆಗಲ ಮೇಲೆ ಕೈ ಹಾಕಿಕೊಂಡು ಹೊರಟಿದ್ದ ಪಿಯೂಷ್ ನಡುರಸ್ತೆಯಲ್ಲಿ ಬಿದ್ದಿದ್ದಾನೆ. ಮಳೆಯ ನೀರು ರಭಸವಾಗಿ ಹರಿಯುತ್ತಿದ್ದ ಕಾರಣ ನೋಡ ನೋಡುತ್ತಿದ್ದಂತೆ ಬಾಲಕ ಮಾಯವಾಗಿದ್ದಾನೆ. ಮಕ್ಕಳು ಸಹಾಯಕ್ಕೆ ಕಿರುಚಿಕೊಂಡರೂ ಯಾವುದೇ ಪ್ರಯೋಜನ ಆಗಿಲ್ಲ. ಕೂಡಲೇ ಸ್ಥಳೀಯರು ಪೊಲೀಸ್ ಮತ್ತು ಪಿಯೂಷ್ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದಾಗ ರಸ್ತೆಯಲ್ಲಿ ಸುಮಾರು 5 ಅಡಿ ಆಳ ಮತ್ತು 3 ಅಡಿ ಅಗಲವಾದ ಗುಂಡಿ ಇತ್ತು. ಇದೇ ಗುಂಡಿಗೆ ಒಳಚರಂಡಿ ವ್ಯವಸ್ಥೆಯ ಸಂಪರ್ಕ ಇತ್ತು. ಹಾಗಾಗಿ ಈ ಒಳಚರಂಡಿಯಲ್ಲಿಯೇ ಬಾಲಕ ಕೊಚ್ಚಿ ಹೋಗಿರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಒಳಚರಂಡಿಯ ಮೇಲಿನ ಮುಚ್ಚಳ ತೆಗೆದಿದ್ದರಿಂದಲೇ ಬಾಲಕನ ಸಾವು ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಪಿಯೂಷ್ ಶವ ಆತನ ಮನೆಯಿಂದ ಸುಮಾರು ಎರಡೂವರೆ ಕಿಲೋಮೀಟರ್ ದೂರದ ಕಾಲುವೆಯಲ್ಲಿ ಪತ್ತೆಯಾಗಿದೆ. ಎನ್‌ಡಿಆರ್‌ಎಫ್ ತಂಡದಿಂದ ಶೋಧಕಾರ್ಯ ನಡೆಸಿದಾಗ ಸಂಜೆ 4 ಗಂಟೆಗೆ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮೂವರು ಮಕ್ಕಳಲ್ಲಿ ಪಿಯೂಷ್ ಒಬ್ಬನೇ ಮಗನಾಗಿದ್ದನು. ಮನೆಯಿಂದ ಹೊರಡುವ ಮುನ್ನ ಹತ್ತೇ ನಿಮಿಷದಲ್ಲಿ ಬರೋದಾಗಿ ಹೇಳಿದ್ದ ಪಿಯೂಷ್ ಹೆಣವಾಗಿ ಮನೆಗೆ ಹಿಂದಿರುಗಿದ್ದಾನೆ.