* ಅಮೆರಿಕ, ಕೆನಡಾದಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಬಿಸಿಗಾಳಿ
* ಉತ್ತರ ಭಾರತದಲ್ಲೂ ಬಿಸಿಗಾಳಿ ಆತಂಕ
* ಎರಡು ದಿನಗಳ ಕಾಲ ಭಾರಿ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ
ನವದೆಹಲಿ(ಜು.02): ಅಮೆರಿಕ, ಕೆನಡಾದಲ್ಲಿ ಭಾರಿ ಅನಾಹುತ ಸೃಷ್ಟಿಸಿರುವ ಬಿಸಿಗಾಳಿ, ಇತ್ತ ಭಾರತದಲ್ಲೂ ತನ್ನ ಪ್ರಭಾವವನ್ನು ತೋರಿದೆ. ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಬಿಸಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜುಲೈ 2 ಮತ್ತು 3ರಂದು ದೆಹಲಿ, ಪಂಜಾಬ್, ಹರ್ಯಾಣ, ಉತ್ತರ ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಚಂಡೀಗಢದ ಬಹುತೇಕ ಪ್ರದೇಶಗಳಲ್ಲಿ ಹಾಗೂ ಇತರೆ ರಾಜ್ಯಗಳ ಆಯ್ದ ಭಾಗಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ. ಬಿಸಿಗಾಳಿ ಬೀಸಲಿದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಕೆನಡಾದಲ್ಲಿ ದಿಢೀರ್ ಬಿಸಿ ಗಾಳಿಗೆ 500 ಸಾವು: ಕಂಡು ಕೇಳರಿಯದ ವಿದ್ಯಮಾನ!
ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಇನ್ನು ದೆಹಲಿಯಲ್ಲಿ ಬುಧವಾರ 43 ಡಿ.ಸೆ.ಯಷ್ಟುಉಷ್ಣಾಂಶ ದಾಖಲಾಗಿತ್ತು. ಇದು ಈ ವರ್ಷ ದೆಹಲಿಯಲ್ಲಿ ದಾಖಲಾದ ಗರಿಷ್ಠ ಪ್ರಮಾಣ. ಜೊತೆಗೆ ಸಾಮಾನ್ಯ ಸರಾಸರಿಗಿಂತ 7 ಡಿ.ಸೆ.ನಷ್ಟುಹೆಚ್ಚಿತ್ತು.
ದೇಶದ ಪಶ್ಚಿಮ ಭಾಗ, ನೈಋುತ್ಯ ಭಾಗ ಮತ್ತು ಪಾಕಿಸ್ತಾನ ಕಡೆಯಿಂದ ತೇವರಹಿತ ಗಾಳಿ ಬೀಸುತ್ತಿರುವುದೇ ಹೀಗೆ ಉಷ್ಣಾಂಶ ಏರಿಕೆಗೆ ಕಾರಣ. ಪರಿಣಾಮ 2 ದಿನ ಭಾರೀ ಬಿಸಿ ಗಾಳಿ ಇರಲಿದೆ. ಜೊತೆಗೆ ಮುಂದಿನ ಒಂದು ವಾರಗಳ ಕಾಲ ಸಾಮಾನ್ಯ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.