
ಚಂಡೀಗಢದ ಖ್ಯಾತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮಂಜೀತ್ ಕೌರ್ (28) ಅವರ ಮೇಲೆ ನಡೆದ ಭೀಕರ ಹಲ್ಲೆ ಮತ್ತು ಕೊ*ಲೆ ಯತ್ನ ಪ್ರಕರಣ ಈಗ ದುರಂತ ಅಂತ್ಯ ಕಂಡಿದೆ. ಜುಲೈನಲ್ಲಿ ಕಿರಾತಕರಿಂದ ಸಜೀವ ದಹನ ಯತ್ನಕ್ಕೊಳಗಾಗಿದ್ದ ಮಂಜೀತ್, ಸುಮಾರು ಎರಡು ತಿಂಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಆಘಾತಕಾರಿ ವಿಷಯವೆಂದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು 7 ವಾರಗಳ ಗರ್ಭಿಣಿಯಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಜುಲೈ 3-4 ರ ಮಧ್ಯರಾತ್ರಿ ಈ ಘೋರ ಕೃತ್ಯ ನಡೆದಿದೆ. ಮಂಜೀತ್ ಕೌರ್ ಅವರನ್ನು ಚಂಡೀಗಢದ ಸೆಕ್ಟರ್ 34 ಕ್ಕೆ ಅವರ ಪರಿಚಯಸ್ಥರಾದ ಶುಭಿ ಮತ್ತು ಪಿಂಡಾ ಎಂಬುವವರು ಕರೆಸಿಕೊಂಡಿದ್ದರು. ಅಲ್ಲಿಂದ ಅವರನ್ನು ಬಲವಂತವಾಗಿ ಅಪಹರಿಸಿದ ಆರೋಪಿಗಳು, ಮಾರಿಂಡಾ ಬಳಿಯಿರುವ ದಟ್ಟ ಕಾಡಿಗೆ ಕರೆದೊಯ್ದಿದ್ದಾರೆ. ಅಲ್ಲಿ ಮಂಜೀತ್ ಅವರನ್ನು ಮರವೊಂದಕ್ಕೆ ಕಟ್ಟಿ ಹಾಕಿ, ಅಮಾನವೀಯವಾಗಿ ಥಳಿಸಿ, ನಂತರ ಮೈಮೇಲೆ ಬೆಂಕಿ ಹಚ್ಚಿ ಸಜೀವ ದಹನ ಮಾಡಲು ಯತ್ನಿಸಿದ್ದಾರೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಪರಿಚಯಸ್ಥ ಬೆಂಕಿಯನ್ನು ನಂದಿಸಿ ಮಂಜೀತ್ ಅವರನ್ನು ರಕ್ಷಿಸಿದ್ದರು.
ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದ ಮಂಜೀತ್ ಅವರನ್ನು ಮಾರಿಂಡಾ ಮತ್ತು ಮೊಹಾಲಿಯ ಆಸ್ಪತ್ರೆಗಳಿಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಚಂಡೀಗಢದ ಪ್ರತಿಷ್ಠಿತ ಪಿಜಿಐಎಂಇಆರ್ (PGIMER) ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಸುಮಾರು ಏಳು ವಾರಗಳ ಕಾಲ ನರಳಿದ ಅವರು ಆಗಸ್ಟ್ 26 ರಂದು ನಿಧನರಾದರು. ಅವರು ಗರ್ಭಿಣಿಯಾಗಿದ್ದರು ಎಂಬ ಸತ್ಯವು ಅವರ ಸಾವಿನ ನಂತರವಷ್ಟೇ ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಪೊಲೀಸರ ನಡೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಮಂಜೀತ್ ಕೌರ್ ಅವರು ಆಸ್ಪತ್ರೆಯಲ್ಲಿ ಪ್ರಜ್ಞೆ ಹೊಂದಿದ್ದಾಗ ತಮ್ಮ ಹೇಳಿಕೆ ದಾಖಲಿಸಲು ಬಯಸಿದ್ದರು. ಆಸ್ಪತ್ರೆಯ ಪೊಲೀಸ್ ಚೌಕಿಯು ಈ ಬಗ್ಗೆ ತನಿಖಾಧಿಕಾರಿಗಳಿಗೆ ಹಲವು ಬಾರಿ ಮಾಹಿತಿ ನೀಡಿದ್ದರೂ, ಪೊಲೀಸರು ಹೇಳಿಕೆ ದಾಖಲಿಸಿಕೊಳ್ಳಲು ಬರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮಂಜೀತ್ ಸಾವನ್ನಪ್ಪಿದ ನಂತರವಷ್ಟೇ ತನಿಖಾಧಿಕಾರಿಗಳು ಆಸ್ಪತ್ರೆಗೆ ಬಂದಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಂಜೀತ್ ಅವರ ತಾಯಿ ಕಾಂತಾ ದೇವಿ ನೀಡಿದ ದೂರಿನ ಮೇರೆಗೆ ಪೊಲೀಸರು ಶುಭಿ ಮತ್ತು ಪಿಂಡಾ ಎಂಬುವವರ ವಿರುದ್ಧ ಅಪಹರಣ ಮತ್ತು ಹತ್ಯೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ