
ಚಂಡೀಗಢ (ಮಾ.7): 2002ರಲ್ಲಿ ನಡೆದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಭೀಕರ ಹತ್ಯೆ ಪ್ರಕರಣದಲ್ಲಿ ಡೇರಾಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ನನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶನಿವಾರ ಖಲಾಸೆಗೊಳಿಸಿದೆ. 2019ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ನೀಡಿದ್ದ ಜೀವಾವಧಿ ಶಿಕ್ಷೆಯ ತೀರ್ಪನ್ನು ಹೈಕೋರ್ಟ್ ಇದೀಗ ರದ್ದುಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ವಿಕ್ರಮ್ ಅಗರ್ವಾಲ್ ಅವರನ್ನೊಳಗೊಂಡ ಪೀಠವು ಶನಿವಾರ ಬೆಳಿಗ್ಗೆ ಈ ಆದೇಶ ಹೊರಡಿಸಿದೆ. ರಾಮ್ ರಹೀಮ್ ಮೇಲಿನ ಶಿಕ್ಷೆಯನ್ನು ರದ್ದುಗೊಳಿಸಲಾಗಿದ್ದರೂ, ಇದೇ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಇಬ್ಬರು ಇತರ ಆರೋಪಿಗಳ ಶಿಕ್ಷೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಖಲಾಸೆಗೆ ನಿಖರವಾದ ಕಾರಣಗಳೇನು ಎಂಬುದು ಇಂದು ಸಂಜೆ ಬಿಡುಗಡೆಯಾಗಲಿರುವ ಸವಿಸ್ತಾರವಾದ ತೀರ್ಪಿನ ಪ್ರತಿಯಿಂದ ತಿಳಿದುಬರಲಿದೆ.
2002ರ ಅಕ್ಟೋಬರ್ 24ರಂದು ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಮೇಲೆ ಅವರ ಮನೆಯ ಹೊರಗಡೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಡೇರಾ ಮುಖ್ಯಸ್ಥ ತನ್ನ ಆಶ್ರಮದ ಸಾಧ್ವಿಗಳ ಮೇಲೆ ಮಾಡುತ್ತಿದ್ದ ವ್ಯವಸ್ಥಿತ ಲೈಂಗಿಕ ಶೋಷಣೆಯ ಕುರಿತು ಛತ್ರಪತಿ ಅವರ ಪತ್ರಿಕೆಯು ಅನಾಮಧೇಯ ಪತ್ರವೊಂದನ್ನು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಅವರ ಮೇಲೆ ಈ ದಾಳಿ ನಡೆದಿತ್ತು. 2019ರಲ್ಲಿ ಪಂಚಕುಲದ ಸಿಬಿಐ ನ್ಯಾಯಾಲಯವು ರಾಮ್ ರಹೀಮ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ₹50,000 ದಂಡ ವಿಧಿಸಿತ್ತು.
ಈ ಕೊಲೆ ಪ್ರಕರಣದಲ್ಲಿ ಖಲಾಸೆ ಸಿಕ್ಕಿದ್ದರೂ ರಾಮ್ ರಹೀಮ್ ಸದ್ಯಕ್ಕೆ ಜೈಲಿನಿಂದ ಹೊರಬರಲು ಸಾಧ್ಯ ಆಗೋದಿಲ್ಲ. ಇಬ್ಬರು ಸಾಧ್ವಿಗಳ ಮೇಲೆ ಅ*ತ್ಯಾಚಾರ ಎಸಗಿದ ಪ್ರಕರಣದಲ್ಲಿ 2017ರಲ್ಲಿ ಈತನಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು, ಸದ್ಯ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದಾನೆ.
ಮೇ 2024ರಲ್ಲಿ ಮಾಜಿ ಡೇರಾಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣದಲ್ಲೂ ಹೈಕೋರ್ಟ್ ಈತನನ್ನು ಖಲಾಸೆ ಮಾಡಿತ್ತು. ಆದರೆ, 2015ರ ಪಂಜಾಬ್‌ನ ಧಾರ್ಮಿಕ ಗ್ರಂಥಗಳ ಅಪವಿತ್ರ (Sacrilege) ಪ್ರಕರಣಗಳಲ್ಲಿ ಈತ ಇನ್ನೂ ಆರೋಪಿಯಾಗಿದ್ದು, ತನಿಖೆ ನಡೆಯುತ್ತಿದೆ.
ರಾಮ್ ರಹೀಮ್‌ಗೆ ಜನವರಿ 5, 2026 ರಂದು 40 ದಿನಗಳ ಪರೋಲ್ ನೀಡಲಾಗಿತ್ತು. 2017ರಲ್ಲಿ ಶಿಕ್ಷೆಯಾದ ನಂತರ ಇದುವರೆಗೂ ಒಟ್ಟು 15 ಬಾರಿ ಪರೋಲ್ ಮೇಲೆ ಈತ ಹೊರಬಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ