
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜ್ಯಸಭೆಯತ್ತ ಮುಖಮಾಡುತ್ತಿರುವ ನಡುವೆಯೇ, ಅವರಿಂದ ತೆರವಾಗಲಿರುವ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಯಾರನ್ನು ನೇಮಿಸಲಿದೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಎನ್‌ಡಿಎ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯವಿರುವ ಮತ್ತು ರಾಜ್ಯ, ರಾಷ್ಟ್ರ ಎರಡೂ ರಾಜಕೀಯದಲ್ಲಿ ಪ್ರಭಾವಿಯೆನಿಸಿರುವ ನಾಲ್ವರು ನಾಯಕರ ಹೆಸರು ಬಿಜೆಪಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಈ ಪೈಕಿ ಪ್ರಮುಖವಾಗಿ ಕೇಳಿಬರುತ್ತಿರುವ ಹೆಸರು ಸಾಮ್ರಾಟ್ ಚೌಧರಿ. ಪ್ರಸ್ತುತ ಬಿಹಾರದ ಉಪಮುಖ್ಯಮಂತ್ರಿಯಾಗಿರುವ ಚೌಧರಿ, ಪ್ರಭಾವಿ ಒಬಿಸಿ ನಾಯಕ. ರಾಜ್ಯ ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ಮುಖವೂ ಹೌದು. 2ನೆಯದಾಗಿ, ಕೇಂದ್ರ ಸಚಿವ ನಿತ್ಯಾನಂದ ರೈ. ದೀರ್ಘಕಾಲ ಬಿಜೆಪಿಯ ಸಂಘಟನಾತ್ಮಕ ಅನುಭವ ಹೊಂದಿರುವ ಇವರು ದೆಹಲಿಯಲ್ಲೂ ಬಲಿಷ್ಠ ಸಂಪರ್ಕ ಹೊಂದಿದ್ದಾರೆ. 3ನೆಯದಾಗಿ, ಸಂಸದ ಹಾಗೂ ಮಾಜಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಹೆಸರು ಕೇಳಿಬರುತ್ತಿದೆ. ಇವರು ಸಂಘಟನೆ, ಸಂಸತ್ತು ಹಾಗೂ ಆಡಳಿತಾತ್ಮಕ ವಿಷಯಗಳಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕೊನೆಯದಾಗಿ ವಿಜಯ್ ಸಿನ್ಹಾ ಹೆಸರು ಕೇಳಿಬರುತ್ತಿದೆ. ಇವರು ಬಿಹಾರ ವಿಧಾನಸಭೆಯ ಸ್ಪೀಕರ್ ಆಗಿದ್ದವರು. ತಮ್ಮದೇ ಆದ ವರ್ಚಸ್ಸು ಮತ್ತು ಖ್ಯಾತಿ ಗಳಿಸಿದ್ದಾರೆ.
‘ಈ 4 ಹೆಸರುಗಳ ಪರಿಗಣನೆಯಲ್ಲಿವೆ. ಅಂತಿಮ ನಿರ್ಧಾರವನ್ನು ಪಕ್ಷದ ಉನ್ನತ ನಾಯಕರು ತೆಗೆದುಕೊಳ್ಳುತ್ತಾರೆ. ಎಲ್ಲಾ ಎನ್‌ಡಿಎ ಪಾಲುದಾರರ ನಡುವೆ ಸಮತೋಲನ ಕಾಯ್ದುಕೊಂಡು ಹೋಗುವ ನಾಯಕನನ್ನು ಪಕ್ಷ ಬಯಸುತ್ತದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶ್ರೀನಗರ: 2002-2011ರ ಅವಧಿಯಲ್ಲಿ ಜಮ್ಮುಕಾಶ್ಮೀರ ಕ್ರಿಕೆಟ್ ಮಂಡಳಿಯಲ್ಲಿ ಆಗಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಸೇರಿದಂತೆ ಹಲವರ ವಿರುದ್ಧ ಆರೋಪಪಟ್ಟಿ ದಾಖಲಿಸುವಂತೆ ಸ್ಥಳೀಯ ಕೋರ್ಟ್ ಆದೇಶಿಸಿದೆ. ಇದರ ವಿಚಾರಣೆಯನ್ನು ಮಾ.12ಕ್ಕೆ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ನೀಡಿದ ಅಮೆರಿಕ; 30 ದಿನ ಮಾತ್ರ!
ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಶ್ರೀನಗರದ ಜಿಲ್ಲಾ ನ್ಯಾಯಾಲಯ, ಫಾರೂಕ್ ಹಾಗೂ 5 ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯ ಲಭ್ಯವಿರುವ ಕಾರಣ, ಆರ್‌ಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಕೆಗೆ ಆದೇಶಿಸಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ನಡೆಸಿದ್ದು, ಅದರಲ್ಲಿ ರಾಜ್ಯ ಕ್ರಿಕೆಟ್ ಮಂಡಳಿಯ 113 ಕೋಟಿ ರು. ಹಣವನ್ನು ದುರುಪಯೋಗ ಪಡಿಸಿಕೊಂಡದ್ದು ಪತ್ತೆಯಾಗಿತ್ತು.
ಇದನ್ನೂ ಓದಿ: ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ; ನೋಟಿಸ್ ಜಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ