HBD Narendra Modi: ಜಗತ್ತನ್ನೇ ಭಾರತದತ್ತ ತಿರುಗಿಸಿದ ಗುಜರಾತಿನ ಸಾಮಾನ್ಯ ಕುಟುಂಬದಿಂದ ಬಂದ ಸಾಧಕ!

By Suvarna News  |  First Published Sep 16, 2022, 12:11 PM IST

Prime Minister Narendra Modi Birthday: ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಸವೆಸಿದ ಹಾದಿ ಹೂವಿನ ಹಾಸಿನದ್ದಲ್ಲ. ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮ ನಾಮ ಜಪಿಸುವಂತೆ ಮಾಡಿದ ಸಾಧಕ


ಗುಜರಾತಿನ ವಡ್‌ನಗರದ ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ದೇಶದ ಉನ್ನತ ಸ್ಥಾನವೇರುವ ಮುನ್ನ ಸವೆಸಿದ ಹಾದಿ ಹೂವಿನ ಹಾಸಿನದ್ದಲ್ಲ. ಇಡುವ ಪ್ರತಿ ಹೆಜ್ಜೆಯೂ ಸವಾಲಿನ ಮುಳ್ಳುಗಳ ಮೇಲೇ ಆಗಿತ್ತು. ಆದಾಗ್ಯೂ ಬಡತನ, ನೋವು, ಸಂಕಷ್ಟಗಳನ್ನೆಲ್ಲಾ ಮೆಟ್ಟಿನಿಂತು ಇಂದು ಇಡೀ ದೇಶ ತಮ್ಮ ನಾಮ ಜಪಿಸುವಂತೆ ಮಾಡಿದ್ದು ಅಂತಿಂಥ ಸಾಧನೆಯಲ್ಲ. ಇಡೀ ಜಗತ್ತು ಭಾರತದ ಕಡೆ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ ನರೇಂದ್ರ ಮೋದಿ ಅವರಲ್ಲಿದ್ದ ದೃಢ ನಿಶ್ಚಯ.

ನರೇಂದ್ರ ದಾಮೋದರ ದಾಸ್‌ ಮೋದಿ ಹುಟ್ಟಿದ್ದು ಮಹಾತ್ಮಾ ಗಾಂಧಿ​ ಜನಿಸಿದ ಗುಜರಾತ್‌ನಲ್ಲಿ. ಮೋದಿ ಪೂರ್ವಜರ ಮೂಲ ಬನಸ್ಕಾಂತ ಜಿಲ್ಲೆ. ಮೋದಿ ಅವರ ಮುತ್ತಜ್ಜ ಮಂಗನ್‌ಲಾಲ್‌ ರಾಂಚೋಡ್‌ ದಾಸ್‌, ಹೊಸ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಹುಟ್ಟೂರು ತೊರೆದು ಮೆಹ್ಸಾನಾ ಜಿಲ್ಲೆಯ ವಡ್‌ನಗರಕ್ಕೆ ಬಂದು ನೆಲೆಸಿ ದಿನಸಿ ಅಂಗಡಿ ತೆರೆದಿದ್ದರು. ಇವರ ಪುತ್ರ ಮೂಲ್‌ಚಂದ್‌. ಮೂಲ್‌ಚಂದ್‌ರ ಪುತ್ರ ದಾಮೋದರ್‌ ಮೋದಿ. ದಾಮೋದರ್‌ ಮೋದಿ ಮತ್ತು ಹೀರಾಬೆನ್‌ ದಂಪತಿಯ 6 ಮಕ್ಕಳ ಪೈಕಿ ನರೇಂದ್ರ ಮೋದಿ ಮೂರನೆಯವರು. ಮೋದಿ ಹುಟ್ಟಿದ್ದು 1950ರ ಸೆ.17ರಂದು.

Tap to resize

Latest Videos

ಬಾಲ್ಯದಲ್ಲೇ ಚಹಾ ಮಾರಿ ಜೀವನ

ಗಾಣಿಗ ಸಮುದಾಯಕ್ಕೆ ಸೇರಿದ ಮೋದಿ ಅವರದ್ದು ಅಷ್ಟೇನೂ ಸ್ಥಿತಿವಂತ ಕುಟುಂಬವಲ್ಲ. ಮೋದಿಯವರ ತಂದೆ ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ಚಿಕ್ಕದೊಂದು ಟೀ ಸ್ಟಾಲ್‌ ಇಟ್ಟುಕೊಂಡಿದ್ದರು. ಅದರ ಆದಾಯ ಅಷ್ಟಕ್ಕಷ್ಟೇ. ಇಂಥ ಸ್ಥಿತಿಯಲ್ಲೇ ಪುಟ್ಟಮನೆಯಲ್ಲಿ ಪೋಷಕರು, ಸೋದರರ ಜೊತೆ ಮೋದಿ ವಾಸ್ತವ್ಯ. ಮೈತುಂಬಾ ಬಡತನವಿದ್ದ ಕಾರಣ ಶ್ರಮ ಎಂಬುದು ಮೋದಿಗೆ ಬಾಲ್ಯದಲ್ಲೇ ಮೈಗೂಡಿತ್ತು. ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತಿದ್ದರು. ರೈಲ್ವೆ ನಿಲ್ದಾಣಕ್ಕೆ ತೆರಳಿ ತಂದೆಗೆ ಚಹಾ ಅಂಗಡಿ ನಿರ್ವಹಣೆಯಲ್ಲೂ ಕೈಜೋಡಿಸುತ್ತಿದ್ದರು. ಮುಂದೆ ತಂದೆಗೆ ಈ ಕೆಲಸ ನಿರ್ವಹಿಸುವುದು ಸಾಧ್ಯವಾಗದೆ ಹೋದಾಗ ಸೋದರನ ಜೊತೆಗೂಡಿ ತಾವೇ ಚಹಾ ಅಂಗಡಿ ತೆರೆದು, ಕುಟುಂಬಕ್ಕೆ ನೆರವಾಗುವ ಯತ್ನ ಮಾಡಿದರು. ಈ ನಡುವೆ 8ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸಂಪರ್ಕಕ್ಕೆ ಅವರು ಬಂದರು.

ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ

ಬಾಲ ಮೋದಿಯ ಪ್ರಾಥಮಿಕ, ಪ್ರೌಢಶಿಕ್ಷಣ ವಡ್‌ನಗರದಲ್ಲೇ ಆಯಿತು. ಓದಿನಲ್ಲಿ ಮೋದಿ ಅವರದ್ದು ಹೇಳಿಕೊಳ್ಳುವ ಸಾಧನೆ ಇಲ್ಲದಿದ್ದರೂ, ಚರ್ಚೆ, ನಾಯಕತ್ವ ಸಾಮಾಜಿಕ ಕಳಕಳಿಯ ವಿಷಯದಲ್ಲಿ ಸದಾ ಮುಂಚೂಣಿ. ಶಾಲೆಯಲ್ಲಿ ನಾಟಕಗಳಲ್ಲಿ ಎಲ್ಲರಿಗಿಂತ ವಿಭಿನ್ನ ಪಾತ್ರದಲ್ಲಿ ನಟಿಸಿ ಎಲ್ಲರಿಂದಲೂ ಸೈ ಅನ್ನಿಸಿಕೊಳ್ಳುವ ಹುಮ್ಮಸ್ಸು ಸದಾ ತುಡಿಯುತ್ತಿರುತ್ತಿತ್ತು. ಮುಂದೆ ದೆಹಲಿ ವಿಶ್ವವಿದ್ಯಾಲಯದಿಂದ ದೂರಶಿಕ್ಷಣದ ಮೂಲಕ ಬಿಎ ಪದವಿ ಮತ್ತು ಅಹಮದಾಬಾದ್‌ನಲ್ಲಿರುವ ಗುಜರಾತ್‌ ವಿವಿಯ ಮೂಲಕ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

13ರ ವಯಸ್ಸಿನಲ್ಲೇ ಮದುವೆ

ಮೋದಿ ಅವರಿಗೆ 13 ವರ್ಷವಾಗಿದ್ದ ವೇಳೆ ಪೋಷಕರು ಬಲವಂತವಾಗಿ ಜಶೋದಾಬೆನ್‌ ಎಂಬ ಹುಡುಗಿ ವಿವಾಹ ನಿಶ್ಚಯ ಮಾಡಿದರು. ಮುಂದೆ 5 ವರ್ಷ ಕಳೆದ ಮೇಲೆ ಅಂದರೆ 1968ರಲ್ಲಿ, ಸಂಪ್ರದಾಯದಂತೆ ಬಾಲಕಿಯನ್ನು ಮೋದಿ ಮನೆಗೆ ಪತಿಯ ಜೊತೆ ಇರಲು ಕಳುಹಿಸಿಕೊಡಲಾಯಿತು. ಆದರೆ ವಿವಾಹಕ್ಕೆ ಮನಸ್ಸು ಹೊಂದಿರದ ಮೋದಿ, ಕೆಲ ದಿನಗಳಷ್ಟೇ ಪತ್ನಿಯ ಜೊತೆ ಕಾಲ ಕಳೆದು ಬಳಿಕ ಅಹಮದಾಬಾದ್‌ನಲ್ಲಿರುವ ಮಾವನ ಕ್ಯಾಂಟೀನ್‌ ಸೇರಿಕೊಳ್ಳಲು ತೆರಳಿದರು. ಮುಂದೆ ಜಶೋದಾಬೆನ್‌ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿ, ಸದ್ಯ ನಿವೃತ್ತಿ ಪಡೆದಿದ್ದಾರೆ.

ಸಂಘ, ಸಂಘಟನೆಯೇ ಬದುಕು

ಇತ್ತ ನರೇಂದ್ರ ಮೋದಿ ಪತ್ನಿಯನ್ನೂ ತೊರೆದು, ಶಾಲೆಯನ್ನೂ ಅರ್ಧದಲ್ಲೇ ತ್ಯಜಿಸಿ, ಸಂಸಾರವನ್ನು ದೂರವಿಟ್ಟು, ಸಂಘದ ಕೆಲಸಗಳಲ್ಲಿ ಪೂರ್ಣಕಾಲಿಕವಾಗಿ ತೊಡಗಿಕೊಂಡರು. ಎರಡು ವರ್ಷ ಇಡೀ ದೇಶದ ಧಾರ್ಮಿಕ ತಾಣಗಳನ್ನು ಸುತ್ತಾಡಿದರು. ಉತ್ತರ, ಈಶಾನ್ಯ, ಪೂರ್ವ ಭಾರತದ ವಿವಿಧ ರಾಜ್ಯಗಳಲ್ಲಿ ಸಂಚರಿಸಿದರು. ಇಂಥದ್ದೊಂದು ಸಂಚಾರದ ವೇಳೆ ಮೋದಿ ಅವರನ್ನು ಬಹುವಾಗಿ ಸೆಳೆದಿದ್ದು ಮತ್ತು ಅವರ ಮೇಲೆ ಗಂಭೀರ ಪ್ರಭಾವ ಬೀರಿದ್ದು ಕೋಲ್ಕತಾದಲ್ಲಿ ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ಬೇಲೂರು ಮಠ ಮತ್ತು ಅಲ್ಲಿನ ಕೆಲ ಕಾಲದ ವಾಸ್ತವ್ಯ. ತದನಂತರದಲ್ಲಿ ಅಲ್ಮೋರಾದಲ್ಲಿನ ರಾಮಕೃಷ್ಣ ಆಶ್ರಮದ ಭೇಟಿ, ರಾಜಕೋಟ್‌ನ ರಾಮಕೃಷ್ಣ ಮಿಷನ್‌ಗಳು ಮೋದಿ ಅವರ ಮೇಲೆ ಅಪಾರ ಪ್ರಭಾವ ಬೀರಿದವು. ಆದರೆ ಯಾವುದೇ ಮಠದಲ್ಲೂ ಹೆಚ್ಚಿನ ಕಾಲ ಉಳಿಯಲು ಅವಕಾಶ ನೀಡದ ಕಾರಣ ಮನನೊಂದ ಮೋದಿ ಮತ್ತೆ ತವರಿಗೆ ಮರಳಿದರು.

ಆರ್‌ಎಸ್‌ಎಸ್‌ ಪ್ರಚಾರಕ

ಶಿಸ್ತು, ಸಂಯಮ, ದೇಶಭಕ್ತಿ, ದೇಶಪ್ರೇಮ, ಸೇವೆಯ ಪ್ರತೀಕದಂತಿರುವ ಮೋದಿಯವರನ್ನು ಇಂಥದ್ದೊಂದು ಹಿರಿಮೆಗೆ ಪಾತ್ರ ಮಾಡುವಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಾತ್ರ ದೊಡ್ಡದು. ಶಿಸ್ತು ಮೋದಿಗೆ ಹೊಸತಲ್ಲವಾದರೂ ಅದು ಪರಿಪಕ್ವಗೊಂಡಿದ್ದು ಆರ್‌ಎಸ್‌ಎಸ್‌ ಗರಡಿಯಲ್ಲಿ. ಬಾಲ್ಯದಿಂದಲೇ ಆರ್‌ಎಸ್‌ಎಸ್‌ ಕಡೆಗೆ ಆಕರ್ಷಿತರಾಗಿದ್ದ ಮೋದಿ, ತಮ್ಮೂರಿನಲ್ಲಿ ಎಲ್ಲೇ ಸಂಘಟನೆಯ ಕಾರ್ಯಕ್ರಮ ನಡೆದರೂ ಅಲ್ಲಿಗೆ ತಪ್ಪದೇ ಹೋಗುತ್ತಿದ್ದರು. ಇಂಥ ಹೊತ್ತಿನಲ್ಲೇ ವಡ್‌ ನಗರದಲ್ಲಿ ವಕೀಲ್‌ ಸಾಹೇಬ್‌ ಎಂದೇ ಖ್ಯಾತರಾಗಿದ್ದ ಲಕ್ಷ್ಮಣ್‌ರಾವ್‌ ಇನಾಂದಾರ್‌ ಕಣ್ಣಿಗೆ ಮೋದಿ ಬಿದ್ದರು. ಅವರು ಮೋದಿಯನ್ನು ಬಾಲ ಸ್ವಯಂ ಸೇವಕರಾಗಿ ಸೇರಿಸಿಕೊಂಡರು. ಆಗಿನ್ನೂ ಮೋದಿಗೆ ಕೇವಲ 8 ವರ್ಷ. ಮುಂದೆ ಹಲವು ವರ್ಷಗಳ ಕಾಲ ಹೀಗೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮೋದಿ 1970ರಲ್ಲಿ ಅಂದರೆ ತಮ್ಮ 20ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಪ್ರಚಾರಕರಾಗಿ ಸೇವೆ ಸಲ್ಲಿಸಲು ಆರಂಭಿಸಿದರು. ಅದೇ ವರ್ಷ ವಡ್‌ ನಗರದಲ್ಲಿ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಅನ್ನು ಮೋದಿ ಆರಂಭಿಸಿದರು. ಆರೆಸ್ಸೆಸ್‌ನಲ್ಲಿದ್ದಾಗ ಮೋದಿ ಅವರು ಹಲವಾರು ಮಹತ್ವದ ಕಾರ್ಯಗಳನ್ನು ಕೈಗೊಂಡರು. ಪ್ರಮುಖವಾಗಿ 1974ರಲ್ಲಿ ನವನಿರ್ಮಾಣ ಭ್ರಷ್ಟಾಚಾರ ವಿರೋ​ಧಿ ಚಳವಳಿ ಹಾಗೂ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಿತ್ತುಕೊಂಡ 19 ತಿಂಗಳ (ಜೂನ್‌ 1975 ರಿಂದ ಜನವರಿ 1977) ತುರ್ತುಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸರ್ವಾ​ಧಿಕಾರಿ ಧೋರಣೆಯನ್ನು ವಿರೋಧಿಸಿ ಭೂಗತರಾಗಿಯೇ ಉಳಿದ ಮೋದಿಯವರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದರು.

ಇದನ್ನೂ ಓದಿ: ಈ ಸಾರಿ ಮೈಸೂರು ದಸರಾಗೆ ಬರ್ತಾರಾ ಪ್ರಧಾನಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಕರುನಾಡು?

ಭೂಗತರಾಗಿ ವೇಷ ಮರೆಸಿಕೊಂಡು ಹೋರಾಟ

ಎಬಿವಿಪಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಹೊತ್ತಿನಲ್ಲೇ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ಕೆಲ ದಿನಗಳಲ್ಲೇ ಆರ್‌ಎಸ್‌ಎಸ್‌ ಸಂಘಟನೆ ಮೇಲೆ ನಿಷೇಧ ಹೇರಲಾಯಿತು. ಎಬಿವಿಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋದಿ ಅವರ ಮೇಲೂ ಸರ್ಕಾರದ ಕಣ್ಣು ಬಿದ್ದಿತ್ತು. ಹೀಗಾಗಿ ಅವರ ಬಂಧನಕ್ಕೂ ಬಲೆ ಬೀಸಲಾಗಿತ್ತು. ಇದರ ಸುಳಿವು ಸಿಗುತ್ತಲೇ ಮೋದಿ ಭೂಗತರಾದರು. ಈ ವೇಳೆ ಮೋದಿ ಅವರನ್ನು ರಾಜ್ಯದಲ್ಲಿ ತುರ್ತುಪರಿಸ್ಥಿತಿ ವಿರೋಧಿ​ಸುವ ಹೋರಾಟ ಕುರಿತ ‘ಗುಜರಾತ್‌ ಲೋಕ ಸಂಘರ್ಷ ಸಮಿತಿ’ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಯಿತು. ಪರಿಣಾಮ ಮೋದಿ, ಅ​ಧಿಕಾರಿಗಳು ಮತ್ತು ಪೊಲೀಸರ ಕಣ್ಣುತಪ್ಪಿಸಲು ವೇಷ ಮರೆಸಿಕೊಂಡು ತಿರುಗಾಡತೊಡಗಿದರು. ಜೊತೆಗೆ ತುರ್ತುಪರಿಸ್ಥಿತಿ ವಿರೋ​ಧಿ ಕರಪತ್ರ ಮುದ್ರಿಸಿ ವಿತರಿಸುವುದು, ಅವುಗಳನ್ನು ದೆಹಲಿಗೆ ತಲುಪಿಸಿ, ಅಲ್ಲಿ ಪ್ರತಿಭಟನೆ ಮತ್ತು ಹೋರಾಟ ಸಂಘಟಿಸುವ ಕೆಲಸಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿ, ಸಂಘದ ಹಿರಿಯ ನಾಯಕರ ಪ್ರಶಂಸೆಗೆ ಪಾತ್ರರಾದರು. ತುರ್ತು ಪರಿಸ್ಥಿತಿ ಹೋರಾಟ ಕುರಿತ ತಮ್ಮ ಅನುಭವಗಳ ಬಗ್ಗೆ ಮೋದಿ ‘ಸಂಘರ್ಷ ಮಾ ಗುಜರಾತ್‌’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಅಡ್ವಾಣಿ ರಥಯಾತ್ರೆಯ ಸಂಘಟಕ

1985ರ ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿ ತೊಡಗಿಕೊಂಡರು. 1987ರಲ್ಲಿ ನಡೆದ ಅಹ್ಮದಾಬಾದ್‌ ಮುನ್ಸಿಪಲ್‌ ಚುನಾವಣೆಯಲ್ಲಿ ಪಕ್ಷದ ಪ್ರಚಾರ ಉಸ್ತುವಾರಿ ಹೊತ್ತಿದ್ದ ಮೋದಿ ಬಿಜೆಪಿ ಅಧಿಕಾರಕ್ಕೆ ಏರುವಂತೆ ಮಾಡುವಲ್ಲಿ ಯಶಸ್ವಿಯಾದರು. ಪಕ್ಷದ ನಿಷ್ಠಾವಂತ ಕಾರ‍್ಯಕರ್ತರಾದ ಅವರಿಗೆ ಉನ್ನತ ಹುದ್ದೆಗಳು ಸಿಗುತ್ತಾ ಹೋದವು. 1987ರಲ್ಲಿ ಗುಜರಾತ್‌ ಸಂಘಟನಾ ಕಾರ‍್ಯದರ್ಶಿ ಹುದ್ದೆ ಲಭಿಸಿತು. 1990ರಲ್ಲಿ ಮೋದಿ ಅವರನ್ನು ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರನ್ನಾಗಿ ಮಾಡಲಾಯಿತು. ಅದೇ ವರ್ಷ ಎಲ್‌.ಕೆ.ಆಡ್ವಾಣಿಯವರ ಜೊತೆಗೆ ‘ರಾಮ ರಥಯಾತ್ರೆ’ಯಲ್ಲಿ ಸಂಚರಿಸಿದರು. ಇದು ಮೋದಿ ಅವರಿಗೆ ಬಹುದೊಡ್ಡ ಖ್ಯಾತಿ ತಂದುಕೊಟ್ಟಿತು.\

ಇದನ್ನೂ ಓದಿ: LG ಮೆಡಿಕಲ್ ಕಾಲೇಜು ಇನ್ಮುಂದೆ ಪ್ರಧಾನಿ Narendra Modi ಕಾಲೇಜು, ಮರುನಾಮಕರಣದ ಹಿಂದಿದೆ ರೋಚಕ ಕಾರಣ!

ಸತತ 13 ವರ್ಷ ಗುಜರಾತ್‌ ಸಿಎಂ

1998ರ ಚುನಾವಣೆ ಬಳಿಕ ಕೇಶುಭಾಯಿ ಪಟೇಲ್‌ ಗುಜರಾತ್‌ ಮುಖ್ಯಮಂತ್ರಿಯಾದರು. ಆದರೆ ಭ್ರಷ್ಟಾಚಾರ ಆರೋಪದಿಂದಾಗಿ 2001ರಲ್ಲಿ ಕೇಶುಭಾಯಿ ಪಟೇಲ್‌ ಪದಚ್ಯುತಿಯಾದಾಗ, ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾದರು. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮು ಗಲಭೆಗಳಲ್ಲಿ ನಿಯಂತ್ರಿಸುವಲ್ಲಿ ಅವರ ಪಾತ್ರ ವಿವಾದಕ್ಕೆ ತುತ್ತಾಯಿತು. ಆದರೆ 2002ರ ಚುನಾವಣೆಯಲ್ಲಿ ಗುಜರಾತ್‌ ಜನತೆ ಅವರಿಗೆ ಬಹುಮತ ನೀಡಿತು. ಆ ಅವ​ಧಿಯಲ್ಲಿ ನಾನಾ ಬಗೆಯ ಅಭಿವೃದ್ಧಿ ಕಾರ‍್ಯಗಳನ್ನು ಕೈಗೊಂಡು, ‘ಗುಜರಾತ್‌ ಮಾದರಿ’ ಎಂದೇ ದೇಶಾದ್ಯಂತ ಜನಪ್ರಿಯವಾಗುವಂತೆ ಮಾಡಿದರು. 2007 ಮತ್ತು 2012ರ ಚುನಾವಣೆಯಲ್ಲಿ ಗುಜರಾತ್‌ ಮತ್ತೆ ಅವರಿಗೇ ಜನಾದೇಶ ನೀಡಿತು. ಒಟ್ಟು 13 ವರ್ಷಗಳ ಕಾಲ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿ ಛಾಪು ಮೂಡಿಸಿದರು.

click me!