ಉತ್ತರ ಪ್ರದೇಶ: 121 ಜನರ ಬಲಿ ಪಡೆದ ಹಾಥ್ರಸ್ ಸತ್ಸಂಗದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಕಾರಣನಾದ ಸ್ವಯಂಘೋಷಿತ ದೇವಮಾನವ ಭೋಲೆಬಾಬಾ ಆಸ್ತಿ ಎಷ್ಟು ಗೊತ್ತಾ? ಮೊನ್ನೆ ಹಾಥ್ರಸ್ ಕಾಲ್ತುಳಿತದ ನಂತರ ಇಡೀ ದೇಶದಲ್ಲೇ ಪ್ರಸಿದ್ಧಿಗೆ ಬಂದ ಈ ಭೋಲೆಬಾಬಾ ಯಾರಿಂದಲೂ ಏನನ್ನೂ ದೇಣಿಗೆ ಪಡೆಯಲ್ಲ, ಸರಳವಾಗಿ ಜೀವನ ಮಾಡ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಈಗ ಅವರ ಆಸ್ತಿ ಮೊತ್ತ ಕೇಳಿದ್ರೆ ಶಾಕ್ ಆಗೋದಂತೂ ಪಕ್ಕಾ, ಇವರ ಬಳಿ ಇರುವ ಆಸ್ತಿ ಒಂದೋ ಎರಡೋ ಕೋಟಿ ಅಲ್ಲ ಬರೋಬ್ಬರಿ 100 ಕೋಟಿ ಎಂಬುದು ಈಗ ಬಯಲಾಗಿದೆ.
ಗುಪ್ತಚರ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು ಬಳಿಕ ದೇವಮಾನವನಾಗಿ ಬದಲಾಗಿದ್ದ ಭೋಲೆಬಾಬಾ ಅಲಿಯಾಸ್ ಸೂರಜ್ ಪಾಲ್ ಸಿಂಗ್ ಅಲಿಯಾಸ್ ನಾರಾಯಣ ಸಾಕರ್ ಹರಿಗೆ ಸೇರಿದ್ದ 100 ಕೋಟಿ ಆಸ್ತಿಯ ದಾಖಲೆಯನ್ನು ಈಗ ಉತ್ತರ ಪ್ರದೇಶದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ನಾನು ಯಾರಿಂದಲೂ ಏನನ್ನೂ ಕೂಡ ಪಡೆಯುವುದಿಲ್ಲಎಂದು ಹೇಳುವ ಈ ಬಾಬಾನಿಗೆ ಬರೀ ಇಷ್ಟು ಆಸ್ತಿ ಮಾತ್ರವಲ್ಲದೇ 24 ಐಷಾರಾಮಿ ಆಶ್ರಮಗಳಿವೆ. ಅಲ್ಲದೇ ಅದ್ದೂರಿ ಐಷಾರಾಮಿ ಕಾರುಗಳಲ್ಲೇ ಇವರು ಪ್ರಯಾಣ ಮಾಡುತ್ತಾರೆ. ಅಲ್ಲದೇ ತಮ್ಮದೇ ಖಾಸಗಿ ಭದ್ರತಾ ಪಡೆಯೊಂದನ್ನು ಅವರು ಇರಿಸಿಕೊಂಡಿದ್ದಾರೆ.
ಆಜ್ ಪ್ರಳಯ್ ಆಯೇಗಿ ಎಂದಿದ್ದ ಭೋಲೆಬಾಬಾ: ಇದಾಗಿ ಕೆಲವೇ ಕ್ಷಣದಲ್ಲಿ ಕಾಲ್ತುಳಿತ ದುರಂತ ನಡಿತು ಎಂದ ಭಕ್ತ
ಉತ್ತರ ಪ್ರದೇಶದ ಮೈನ್ಪುರಿಯಲ್ಲಿರುವ ಫೈವ್ ಸ್ಟಾರ್ ಹೊಟೇಲ್‌ನಂತಿರುವ ವೈಭವೋಪೇತ ಆಶ್ರಮವೂ ಸೇರಿದಂತೆ ಭೋಲೆಬಾಬಾನಿಗೆ ಸೇರಿದ ಭಾರಿ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಈಗ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈತ ಸತ್ಸಂಗ ಮಾಡಿ ಹೋದ ನಂತರ ಆತ ನಡೆದು ಹೋದ ಹಾದಿಯ ಪಾದದ ಧೂಳಿಗಾಗಿ ಜನ ಮುಗಿಬಿದ್ದಿದ್ದರಿಂದ ಕಾಲ್ತುಳಿತ ದುರಂತ ಸಂಭವಿಸಿದ 121 ಜನ ಪ್ರಾಣ ಕಳೆದುಕೊಂಡಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್‌ನಲ್ಲಿ ಈತನ ಹೆಸರಿಲ್ಲ, ಘಟನೆ ನಡೆದಾಗಿನಿಂದಲೂ ಈತ ನಾಪತ್ತೆಯಾಗಿದ್ದು, ಮೈನ್‌ಪುರಿಯಲ್ಲಿರುವ ಈತನ ಆಶ್ರಮದ ಸುತ್ತ 50ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಕಳೆದೆರಡು ವರ್ಷಗಳಿಂದ ಭೋಲೆಬಾಬಾ ಮೈನ್‌ಪುರಿಯಲ್ಲಿರುವ 21 ಭೀಗಾ(ಎಕರೆಗಳಿಗೆ ಪರಿವರ್ತಿಸಿದರೆ 13 ಎಕರೆ) ವಿಸ್ತಾರವಾದ ಜಾಗದಲ್ಲಿರುವ ಐಷಾರಾಮಿ ಆಶ್ರಮದಲ್ಲಿ ವಾಸ ಮಾಡುತ್ತಿದ್ದಾನೆ. ಇಲ್ಲಿ ಈತನಿಗೂ ಈತನ ಪತ್ನಿಗೂ ಎರಡು ದೊಡ್ಡದಾದ ಕೋಣೆಗಳನ್ನು ಮೀಸಲಿರಿಸಲಾಗಿದೆ. ಅನುಮತಿ ಇಲ್ಲದೇ ಯಾರೂ ಕೂಡ ಈತನ ಕೋಣೆಯನ್ನು ಪ್ರವೇಶಿಸುವಂತಿಲ್ಲ. ಇದರ ಪ್ರಮುಖ ದ್ವಾರದಲ್ಲಿ ಈ ಆಶ್ರಮ ನಿರ್ಮಿಸಲು ದಾನ ನೀಡಿದ 200 ಜನರ ಹೆಸರಿದೆ. ಇದರಲ್ಲಿ ಅತೀಹೆಚ್ಚು ದಾನ ಬಂದಿರುವ ಹಣ ಎಂದರೆ 2.5 ಲಕ್ಷ ರೂಪಾಯಿಗಳು. ಕಡಿಮೆ ಎಂದರೆ 10 ಸಾವಿರ ರೂಪಾಯಿಗಳು. ಪ್ರಸ್ತುತ ಈ ಆಶ್ರಮದ ಮಾರುಕಟ್ಟೆ ಬೆಲೆ 5 ಕೋಟಿ ರೂಪಾಯಗಳು.
121 ಜನರ ಬಲಿ ಪಡೆದ ಹತ್ರಾಸ್ ಸತ್ಸಂಗದ ಹಿಂದಿರುವ ಗುರು ಬೋಲೇಬಾಬಾ ಯಾರು?
ಟ್ರಸ್ಟ್‌ವೊಂದರಿಂದ ಆಶ್ರಮ ನಡೆಸಲ್ಪಡುತ್ತಿದ್ದು, ಭೋಲೆಬಾಬಾನ ನಿಕಟವರ್ತಿಗಳು ಹೇಳುವ ಪ್ರಕಾರ, ಭೋಲೆಬಾಬಾನಿಗೆ ಒಟ್ಟು 24 ಆಶ್ರಮಗಳಿವೆ. ಅಲ್ಲದೇ 100 ಕೋಟಿ ಅಧಿಕ ಮೊತ್ತದ ಭೂಮಿ ಇದೆ. ಆದರೆ ಭಕ್ತರ ಮುಂದೆ ಬರುವ ವೇಳೆ ಈತ ಬರೀ ಬಿಳಿ ಬಣ್ಣದ ಮೂರು ತುಂಡು ಬಟ್ಟೆ ಹಾಗೂ ಸ್ಟೈಲಿಶ್ ಆಗಿರುವ ಐ ಗ್ಲಾಸ್ ಧರಿಸಿ ಬರುತ್ತಾನೆ. ಅಲ್ಲದೇ ಈತ ಎಲ್ಲಿಗಾದರೂ ಹೋಗುವುದಾದರೆ ಈತನ ಜೊತೆ 20ಕ್ಕೂ ಹೆಚ್ಚು ಬೆಂಗಾವಲು ವಾಹನಗಳು ಸಾಗುತ್ತವೆ. ಅಲ್ಲದೇ ಕಪ್ಪು ಬಣ್ಣದ ಸಮವಸ್ತ್ರ ಧರಿಸಿದ 15 ಕಮಾಂಡೋಗಳು ಇವನ ಜೊತೆಗಿರುತ್ತಾರೆ.
ಆದರೆ ಯಾರಿಂದಲೂ ಏನೋ ದಾನ ಸ್ವೀಕರಿಸಿದ ಕೇವಲ ಯೋಗಿ ಅನಿಸಿಕೊಂಡ ಈತನ ಬಳಿ ಇಷ್ಟೊಂದು ಐಷಾರಾಮಿ ಆಸ್ತಿ ಬಂದು ಸೇರಿದ್ದಾದರೂ ಹೇಗೆ ಎಂಬುದು ಅನೇಕರ ಪ್ರಶ್ನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ