ಮುಖ್ಯಮಂತ್ರಿಯ ಹೆಲಿಕಾಪ್ಟರ್ ನಿಲ್ಲಿಸಲು ಸ್ಟೇಡಿಯಂ ಬಳಕೆ; ಅಥ್ಲೀಟ್‌ಗಳಿಗೆ 4 ದಿನ ಕ್ರೀಡಾಂಗಣ ಪ್ರವೇಶ ನಿಷೇಧ

Published : Oct 09, 2026, 04:25 PM IST
haryana cm helicopter

ಸಾರಾಂಶ

ಮುಖ್ಯಮಂತ್ರಿಯ ಹೆಲಿಕಾಪ್ಟರ್ ನಿಲ್ಲಿಸಲು ಕ್ರೀಡಾಂಗಣವನ್ನು ನಾಲ್ಕು ದಿನಗಳ ಕಾಲ ಪಾರ್ಕಿಂಗ್ ತಾಣವನ್ನಾಗಿ ಮಾಡಲಾಗಿದೆ. ವಿಮಾನ ನಿಲ್ದಾಣದ ಶುಲ್ಕ ಉಳಿಸಲು ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದು, ಕ್ರೀಡಾಪಟುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದ ತರಬೇತಿಗೆ ಅಡ್ಡಿಯಾಗಿ ಕ್ರೀಡಾಪಟುಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳ ವಿಐಪಿ (VIP) ಸಂಸ್ಕೃತಿಗೆ ಕ್ರೀಡಾಪಟುಗಳು ಬಲಿಯಾಗುತ್ತಿರುವ ಆಘಾತಕಾರಿ ಘಟನೆಯೊಂದು ಹರ್ಯಾಣದಲ್ಲಿ ಬೆಳಕಿಗೆ ಬಂದಿದೆ. ಹರ್ಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್‌ ಸೈನಿ ಅವರ ಹೆಲಿಕಾಪ್ಟರ್ ನಿಲ್ಲಿಸಲು ಗುರುಗ್ರಾಮದ ಪ್ರತಿಷ್ಠಿತ ‘ದೇವಿ ಲಾಲ್‌ ಕ್ರೀಡಾಂಗಣ’ವನ್ನು ಬರೋಬ್ಬರಿ ನಾಲ್ಕು ದಿನಗಳ ಕಾಲ ಪಾರ್ಕಿಂಗ್ ತಾಣವನ್ನಾಗಿ ಪರಿವರ್ತಿಸಲಾಗಿದ್ದು, ಈ ಅವಧಿಯಲ್ಲಿ ಕ್ರೀಡಾಪಟುಗಳಿಗೆ ಸ್ಟೇಡಿಯಂ ಪ್ರವೇಶವನ್ನೇ ನಿರ್ಬಂಧಿಸಿರುವುದು ಭಾರೀ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ದೆಹಲಿ ಏರ್‌ಪೋರ್ಟ್‌ ಶುಲ್ಕ ಉಳಿಸಲು ಸ್ಟೇಡಿಯಂ ಬಳಕೆ!

ಸಿಎಂ ನಯಾಬ್ ಸಿಂಗ್ ಸೈನಿ ಅವರು ಇತ್ತೀಚೆಗೆ 3 ದಿನಗಳ ಕಾಲ ಸಿಂಗಾಪುರ ಪ್ರವಾಸ ಕೈಗೊಂಡಿದ್ದರು. ವಿದೇಶದಿಂದ ಗುರುಗ್ರಾಮಕ್ಕೆ ಮರಳಿದ ಬಳಿಕ, ಅಲ್ಲಿಂದ ಅವರು ಚಂಡೀಗಢಕ್ಕೆ ತೆರಳಲು ಹೆಲಿಕಾಪ್ಟರ್ ಕಾಯ್ದಿರಿಸಲಾಗಿತ್ತು. ಗುರುಗ್ರಾಮದಲ್ಲಿ ಪ್ರತ್ಯೇಕ ಹೆಲಿಪ್ಯಾಡ್ ವ್ಯವಸ್ಥೆ ಇಲ್ಲ. ಇನ್ನೊಂದೆಡೆ ದೆಹಲಿ ವಿಮಾನ ನಿಲ್ದಾಣದಲ್ಲಿ (IGI Airport) ನಿಲ್ಲಿಸಿದರೆ ದುಬಾರಿ ಪಾರ್ಕಿಂಗ್ ಶುಲ್ಕ ತೆರಬೇಕಾಗುತ್ತದೆ ಎಂಬ ಕಾರಣಕ್ಕೆ, ಅಧಿಕಾರಿಗಳು ದೇವಿ ಲಾಲ್ ಕ್ರೀಡಾಂಗಣವನ್ನೇ ಹೆಲಿಪ್ಯಾಡ್ ಮತ್ತು ಪಾರ್ಕಿಂಗ್ ತಾಣವಾಗಿ ಬಳಸಿಕೊಂಡಿದ್ದಾರೆ!

ಕ್ರೀಡಾಪಟುಗಳ ಭವಿಷ್ಯಕ್ಕೆ ಕೊಳ್ಳಿ, ತರಬೇತಿಗೆ ನಿರ್ಬಂಧ:

ಹೆಲಿಕಾಪ್ಟರ್ ನಿಲುಗಡೆ ಮತ್ತು ಭದ್ರತೆಯ ನೆಪವೊಡ್ಡಿ ಕ್ರೀಡಾಂಗಣದ ಒಳಗೆ ಯಾವುದೇ ಅಥ್ಲೀಟ್‌ಗಳು, ಓಟಗಾರರು ಮತ್ತು ಕ್ರೀಡಾಪಟುಗಳು ಪ್ರವೇಶಿಸದಂತೆ ಬರೋಬ್ಬರಿ 4 ದಿನಗಳ ಕಾಲ ಗೇಟ್‌ಗಳನ್ನು ಮುಚ್ಚಲಾಗಿತ್ತು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಿಗೆ ಸಿದ್ಧತೆ ನಡೆಸುತ್ತಿದ್ದ ನೂರಾರು ಯುವ ಕ್ರೀಡಾಪಟುಗಳು ಕ್ರೀಡಾಂಗಣದ ಹೊರಗೇ ಕಾದು ಕಣ್ಣೀರು ಹಾಕುವಂತಾಗಿದೆ.

ತಿಂಗಳಿಗೆ 1-2 ಬಾರಿ ಇದೇ ಗೋಳು!

ಇಂತಹ ಘಟನೆ ಇಲ್ಲಿ ಮೊದಲೇನಲ್ಲ ಎಂದು ಸ್ಥಳೀಯ ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ತಿಂಗಳಿಗೆ ಕನಿಷ್ಠ ಒಂದು ಅಥವಾ ಎರಡು ಬಾರಿ ಹೆಲಿಕಾಪ್ಟರ್ ನಿಲ್ಲಿಸುವ ನೆಪದಲ್ಲಿ ಸ್ಟೇಡಿಯಂ ಮುಚ್ಚಲಾಗುತ್ತದೆ. ದೇಶಕ್ಕೆ ಪದಕ ತರಬೇಕಾದ ಕ್ರೀಡಾಪಟುಗಳ ಬೆವರಿನ ಬೆಲೆ ರಾಜಕಾರಣಿಗಳ ಹೆಲಿಕಾಪ್ಟರ್ ಪಾರ್ಕಿಂಗ್ ಶುಲ್ಕಕ್ಕಿಂತ ಕಡಿಮೆಯಾಯಿತೇ?' ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಅಧಿಕಾರಿಗಳ ಬೇಜವಾಬ್ದಾರಿ ಸಮರ್ಥನೆ:

ಈ ಗಂಭೀರ ವಿವಾದದ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಕ್ರೀಡಾಂಗಣದ ಉಸ್ತುವಾರಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದಾರೆ. "ಮುಖ್ಯಮಂತ್ರಿಗಳ ಕಾರ್ಯಾಲಯದ (CMO) ಅಧಿಕಾರಿಗಳೇ ಹೆಲಿಕಾಪ್ಟರ್ ನಿಲ್ಲಿಸಲು ಸೂಚಿಸಿದಾಗ ನಾವೇನು ಮಾಡಲು ಸಾಧ್ಯ? ಸಿಎಂ ಕಚೇರಿಯ ಆದೇಶವನ್ನು ತಡೆಯುವ ಅಧಿಕಾರ ನಮಗಿಲ್ಲ" ಎಂದು ಕೈತೊಳೆದುಕೊಂಡಿದ್ದಾರೆ. ಈ ನಡೆ ಇದೀಗ ಕ್ರೀಡಾ ವಲಯದಲ್ಲಿ ತೀವ್ರ ಚರ್ಚೆ ಹಾಗೂ ಟೀಕೆಗೆ ಗ್ರಾಸವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರತಿಭಟನೆ ನಡುವೆ ಮಹತ್ವದ ಹೆಜ್ಜೆ, ಪ್ರತಿಪಕ್ಷ ನಿಯೋಗ ಭೇಟಿ ಮಾಡಲಿದ್ದಾರೆ ರಾಷ್ಟ್ರಪತಿ ಮುರ್ಮು
“ಮುಂದಿನ ನಿಲ್ದಾಣ ಎಂ ಜಿ ರೋಡ್‌, ಬಾಗಿಲು ಎಡಕ್ಕೆ ತೆರೆಯಲಿದೆ...” ಮೆಟ್ರೋದಲ್ಲಿ ತಾತನ ಧ್ವನಿ ಕೇಳಿದ ಮೊಮ್ಮಗನ ಪ್ರತಿಕ್ರಿಯೆ ವೈರಲ್!