ಮೋದಿ ಸರ್ಕಾರದ ಮೊದಲ ವಿಕೆಟ್ ಪತನ; ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಮಂತ್ರಿ ರಾಜೀನಾಮೆ..!

By Kannadaprabha NewsFirst Published Sep 18, 2020, 9:07 AM IST
Highlights

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಎನ್‌ಡಿಎ ಅಂಗಪಕ್ಷ ಶಿರೋಮಣಿ ಅಕಾಲಿದಳದ ಪಕ್ಷದ ಸಚಿವೆ ಹರ್‌ಸಿಮ್ರತ್‌ ಕೌರ್‌ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ(ಸೆ.18): ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಕೃಷಿ ಕ್ಷೇತ್ರ ಕುರಿತಾದ ಮೂರು ಮಸೂದೆಗಳನ್ನು ವಿರೋಧಿಸಿ, ಎನ್‌ಡಿಎ ಅಂಗಪಕ್ಷ ಶಿರೋಮಣಿ ಅಕಾಲಿದಳದ ಪಕ್ಷದ ಸಚಿವೆ ಹರ್‌ಸಿಮ್ರತ್‌ ಕೌರ್‌ ಗುರುವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಪ್ರಧಾನಿ ಕಚೇರಿಗೆ ರವಾನಿಸಿದ್ದಾರೆ.

ಈ ಕುರಿತು ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ಕೌರ್‌ ‘ರೈತ ವಿರೋಧಿ ಸುಗ್ರೀವಾಜ್ಞೆಗಳು ಮತ್ತು ಶಾಸನ ವಿರೋಧಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ರೈತರ ಪುತ್ರಿ ಹಾಗೂ ಅವರ ಸೋದರಿಯಾಗಿ ಅವರ ಪರ ನಿಲ್ಲುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಲೋಕಸಭೆಯಲ್ಲಿ ಮಾತನಾಡಿದ್ದ ಶಿರೋಮಣಿ ಅಕಾಲಿದಳ ಪಕ್ಷದ ಅಧ್ಯಕ್ಷ ಸುಖ್‌ಬೀರ್‌ಸಿಂಗ್‌ ಬಾದಲ್‌ ‘ಕೇಂದ್ರ ಸರ್ಕಾರ ಜಾರಿಗೆ ಮುಂದಾಗಿರುವ ಮಸೂದೆಗಳು, ಪಂಜಾಬ್‌ ಕೃಷಿ ವಲಯದ ಶ್ರೇಯೋಭಿವೃದ್ಧಿಗೆ ರಾಜ್ಯದ ರೈತರು ಮತ್ತು ರಾಜ್ಯ ಸರ್ಕಾರಗಳು ಮಾಡಿದ ಕಳೆದ 50 ವರ್ಷಗಳ ಪರಿಶ್ರಮವನ್ನು ಹಾಳುಗೆಡವಲಿದೆ. ಜೊತೆಗೆ ರೈತರ ಬಾಳನ್ನು ಹಾಳ ಮಾಡಲಿದೆ’ ಎಂದು ಪ್ರತಿಪಾದಿಸಿದ್ದರು. ಅದರ ಬೆನ್ನಲ್ಲೇ ಕೌರ್‌ ರಾಜೀನಾಮೆ ಘೋಷಿಸಿದ್ದಾರೆ.

2000 ರು. ನೋಟು ಬಿಡುಗಡೆ ಕುರಿತು ಮೋದಿಗೆ ಒಲವಿರಲಿಲ್ಲ!

ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ, ಯಾರಿಗೆ ಬೇಕಾದರೂ ಮಾರಲು ಅವಕಾಶ ಕಲ್ಪಿಸಲು ಅವಕಾಶ ನೀಡುವ ಮಸೂದೆಯನ್ನು ಸೋಮವಾರ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತ್ತು. ಈಗಾಗಲೇ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೆ ಬಂದಿರುವ ಕಾಯ್ದೆಯನ್ನು ಇದೀಗ ಸರ್ಕಾರ ಕಾನೂನು ರೀತ್ಯ ಸಂಸತ್ತಿನಲ್ಲಿ ಮಸೂದೆ ರೂಪದಲ್ಲಿ ಮಂಡಿಸಿದೆ. ಆದರೆ ಇದಕ್ಕೆ ಬಹುತೇಕ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

click me!