ಭಾರತದ ಸೈನಿಕರ ಗಮನ ಬೇರೆಡೆ ಸೆಳೆಯುವ ‘ಮಾನಸಿಕ ಯುದ್ಧ’ವನ್ನು ಚೀನಾ ಆರಂಭಿಸಿದೆ. ಇದರ ಭಾಗವಾಗಿ ಗಡಿಯಲ್ಲಿ ಪಂಜಾಬಿ ಹಾಡುಗಳನ್ನು ಲೌಡ್‌ಸ್ಪೀಕರ್‌ನಲ್ಲಿ ಚೀನಾ ಸೇನೆ ಹಾಕಲಾರಂಭಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಲೇಹ್(ಸೆ.18): ಲಡಾಖ್ ಗಡಿಯಲ್ಲಿ ಭಾರತದ ವಿರುದ್ಧ ಕಾಲು ಕೆದರಿ ಜಗಳ ತೆಗೆಯುತ್ತಿರುವ ಚೀನಾ, ಈಗ ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯುವ ‘ವಿಶಿಷ್ಟಕುತಂತ್ರ’ ಮಾಡಿದೆ. ಗಡಿಯಲ್ಲಿ ಲೌಡ್ಸ್ಪೀಕರ್ ಅಳವಡಿಸಿರುವ ಚೀನಾ ಸೇನೆಯು, ಪಂಜಾಬಿ ಭಾಂಗ್ಡಾ ಗೀತೆಗಳನ್ನು ಹಾಕುತ್ತಿದೆ ಹಾಗೂ ಹಿಂದಿಯಲ್ಲಿ ಎಚ್ಚರಿಕೆಯ ಸಂದೇಶ ನೀಡತೊಡಗಿದೆ.
ಪೂರ್ವ ಲಡಾಖ್ನ ಪಾಂಗಾಂಗ್ ಸರೋವರ ಹಾಗೂ ಚುಶೂಲ್ ಪ್ರದೇಶದಲ್ಲಿ ಈ ತಂತ್ರವನ್ನು ಚೀನಾ ಅನುಸರಿಸುತ್ತಿದೆ ಎಂದು ತಿಳಿದುಬಂದಿದೆ. ಇದು ಭಾರತದ ಸೈನಿಕರ ಗಮನ ಬೇರೆಡೆ ಸೆಳೆಯುವ ‘ಮಾನಸಿಕ ಯುದ್ಧ’ವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನಾಧಿಕಾರಿಯೊಬ್ಬರು, ‘ಚೀನಾ ಹಾಕಿದ ಹಾಡುಗಳನ್ನು ನಾವು ಆಸ್ವಾದಿಸುತ್ತೇವೆ’ ಎಂದು ಚಟಾಕಿ ಹಾರಿಸಿದ್ದಾರೆ. ಅಲ್ಲದೆ, ‘ಈ ಮಾನಸಿಕ ಯುದ್ಧದ ತಂತ್ರದಿಂದ ವಿಚಲಿತರಾಗುವವರು ನಾವಲ್ಲ’ ಎಂದು ಅವರು ಗುಡುಗಿದ್ದಾರೆ.
ಇದೇ ಮೊದಲಲ್ಲ:
ಈ ಹಿಂದೆಯೂ ಚೀನಾ ಈ ಕುಟಿಲ ನೀತಿಯನ್ನು ಅನುಸರಿಸಿದ ಉದಾಹರಣೆಗಳಿವೆ. 1962ನೇ ಇಸವಿಯಲ್ಲಿ ನಡೆದ ಯುದ್ಧದ ವೇಳೆ ಬಾಲಿವುಡ್ ಹಿಂದಿ ಗೀತೆಗಳನ್ನು ಅದು ಲೌಡ್‌ಸ್ಪೀಕರ್‌ನಲ್ಲಿ ಗಡಿಯಲ್ಲಿ ಪ್ರಸಾರ ಮಾಡಿತ್ತು. ತಮಗೆ ಹಿಂದಿ ಬರುತ್ತದೆ. ಭಾರತದ ನಡೆಗಳ ಬಗ್ಗೆ ತಮಗೆ ತಿಳಿಯುತ್ತಿದೆ ಎಂಬ ಸಂದೇಶವನ್ನು ಭಾರತೀಯ ಸೈನಿಕರಿಗೆ ರವಾನಿಸಲು ಅದು ಈ ತಂತ್ರವನ್ನು ಅನುಸರಿಸಿತ್ತು.
ಯಾರಿಗೂ ನಾವು ತಲೆಬಾಗಲ್ಲ: ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ
ಚೀನಾ ಗಡಿಯಲ್ಲಿ ನಿಯೋಜನೆ ಆಗಿರುವ ಭಾರತೀಯ ಬಹುತೇಕ ಸೈನಿಕರಿಗೆ ಪಂಜಾಬಿ ಹಾಗೂ ಹಿಂದಿ ಗೊತ್ತು. ಆ ಭಾಷೆಯಲ್ಲೇ ಅವರು ಮಾತನಾಡುತ್ತಿರುತ್ತಾರೆ. ಇದನ್ನು ಗಮನಿಸಿರುವ ಚೀನಾ, ಈಗ ಪಂಜಾಬಿ ಗೀತೆ ಹಾಕಿ ಹಿಂದಿಯಲ್ಲಿ ಎಚ್ಚರಿಕೆ ಸಂದೇಶ ನೀಡುತ್ತಿರುವುದನ್ನು ಗಮನಿಸಿದರೆ, ತಾನು ಭಾರತದ ತಿರುಗೇಟಿನಿಂದ ಹೆದರಿಲ್ಲ ಎಂದು ತೋರ್ಪಡಿಸಿಕೊಳ್ಳುತ್ತಿದೆ ಎಂದೂ ವಿಶ್ಲೇಷಿಸಲಾಗುತ್ತಿದೆ.