ಕಳೆದ ವರ್ಷ ಕಾಣಿಸಿಕೊಂಡ ಕೊರೋನಾ ಅಲೆಗಿಂತ ಇದೀಗ 2ನೇ ಬಾರಿ ಕಾಣಿಸಿಕೊಂಡ ಕೊರೋನಾ ಅಲೆ ಭೀಕರವಾಗಿದೆ. ಕೊರೋನಾ ಹರಡುವಿಕೆ ವೇಗ ಕಳೆದಬಾರಿಗಿಂತ ಮೂರು ಪಟ್ಟು ಹೆಚ್ಚಾಗಿದೆ. ಪ್ರಧಾನಿ ಮೋದಿ ತುರ್ತು ಸಭೆ ಬೆನ್ನಲ್ಲೇ ಇದೀಗ ಕೇಂದ್ರ ಆರೋಗ್ಯ ಸಚಿವರು, 11 ರಾಜ್ಯಗಳ ಆರೋಗ್ಯ ಸಚಿವರ ಜೊತೆ ಸಬೆ ಕರೆದಿದ್ದಾರೆ.
ನವದೆಹಲಿ(ಎ.05): ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ರೂಲ್ಸ್ ಜಾರಿಗೆ ತರುತ್ತಿದೆ. ಮಹಾರಾಷ್ಟ್ರದಲ್ಲಿ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರಲಾಗಿದೆ. ಇತ್ತ ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಲ್ಲೂ ಕಠಿಣ ನಿಯಮ ಜಾರಿಗೆ ತರಲಾಗಿದೆ. ಆದರೂ ಕೊರೋನಾ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಇದೀಗ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, 11 ರಾಜ್ಯಗಳ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ.
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!.
ಎಪ್ರಿಲ್ 6 ರಂದು ಹರ್ಷವರ್ಧನ್ ಕೊರೋನಾ ಸಭೆ ಕರೆದಿದ್ದಾರೆ. ಮಹಾರಾಷ್ಟ್ರ, ಪಂಜಾಬ್, ಚತ್ತೀಸಘಡ, ಕರ್ನಾಟಕ, ದೆಹಲಿ, ಕೇರಳ ಸೇರಿದಂತೆ 11 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಸಚಿವರ ಜೊತೆ ಹರ್ಷವರ್ಧನ್ ಸಭೆ ನಡೆಸಲಿದ್ದಾರೆ. ಆಯಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಕೈಗೊಂಡ ಕೊರೋನಾ ನಿಯಂತ್ರಣ ಕ್ರಮಗಳ ಕುರಿತು ಪರಿಶೀಲನೆ ನಡೆಸಲಾಗಿದೆ.
ಕರ್ನಾಟಕದಲ್ಲಿ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿ ದಿನ ಸರಾಸರಿ 4,500ಕ್ಕಿಂತಲೂ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ. ಇನ್ನು ದೇಶದಲ್ಲಿ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ.