
ಟೈಲರ್ಗಳು ಹಲವು ಸಂದರ್ಭಗಳಲ್ಲಿ ಹೊಲಿಯಲು ಕೊಟ್ಟಿರುವ ಬಟ್ಟೆಗಳನ್ನು ನಿಗದಿತ ಸಮಯದಲ್ಲಿ ಕೊಡುವುದಿಲ್ಲ. ಅಂಥ ಸಂದರ್ಭಗಳಲ್ಲಿ ನಾನಾ ಕಾರಣಗಳು ಇರಬಹುದು. ಕೆಲಸದ ಒತ್ತಡದಿಂದಲೋ, ಅನಾರೋಗ್ಯದಿಂದಲೋ ಅಥವಾ ಆಲಸ್ಯದಿಂದಲೋ... ಒಟ್ಟಿನಲ್ಲಿ ನಿಗದಿತ ಸಮಯದಲ್ಲಿ ಕೊಡದೇ ಇರುವ ಉದಾಹರಣೆಗಳು ಬಹುತೇಕ ಮಂದಿಯ ಜೀವನದಲ್ಲಿ ಆಗಿರುತ್ತದೆ. ಆದರೆ ಇಲ್ಲೊಬ್ಬ ಟೈಲರ್ ನಿಗದಿತ ಅವಧಿಯಲ್ಲಿ ಬ್ಲೌಸ್ ನೀಡಿಲ್ಲ ಎನ್ನುವ ಕಾರಣಕ್ಕೆ ಕೋರ್ಟ್ ಒಂದು ಏಳು ಸಾವಿರ ರೂಪಾಯಿಗಳ ದಂಡ ವಿಧಿಸಿದೆ!
ಮದುವೆಯಲ್ಲಿ ಧರಿಸುವುದಕ್ಕಾಗಿ ಮಹಿಳೆಯೊಬ್ಬರು ಮಹಿಳೆಯೊಬ್ಬರು ಬ್ಲೌಸ್ ಹೊಲಿಯಲು ಕೊಟ್ಟಿದ್ದರು. ಆದರೆ, ಟೈಲರ್ ಇದನ್ನು ಸಮಯಕ್ಕೆ ಸರಿಯಾಗಿ ತಲುಪಿಸಲು ವಿಫಲವಾದರು. ಈ ಹಿನ್ನೆಲೆಯಲ್ಲಿ, ಮಹಿಳೆ ಟೈಲರ್ ವಿರುದ್ಧ ಅಹಮದಾಬಾದ್ನ ಗ್ರಾಹಕರ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ವಿಳಂಬದಿಂದ ತಮಗೆ "ಮಾನಸಿಕ ಕಿರುಕುಳ" ತಂದಿದೆ ಎಂದು ದೂರಿದ್ದರು. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿತು. ವಿಳಂಬ ಮತ್ತು ಕಳಪೆ ಸೇವೆಗಾಗಿ ಗ್ರಾಹಕ ನ್ಯಾಯಾಲಯವು ದರ್ಜಿಗೆ ದಂಡ ವಿಧಿಸಿತು.
ಅಷ್ಟಕ್ಕೂ ಮಹಿಳೆ ಇದನ್ನು ತಮ್ಮ ಮದುವೆಗೆ ಅಲ್ಲ, ಬದಲಿಗೆ ಸಂಬಂಧಿಕರ ಮದುವೆಯಲ್ಲಿ ಧರಿಸಲು ಆರ್ಡರ್ ಕೊಟ್ಟಿದ್ದರು. ಅದಕ್ಕಾಗಿ ಮುಂಗಡವಾಗಿ 4,395 ರೂ.ಗಳನ್ನು ಕೂಡ ಪಾವತಿಸಿದ್ದರು. ಅದು ಡಿಸೈನಿಂಗ್ ರವಿಕೆ ಆದ್ದರಿಂದ ಮದುವೆಯಲ್ಲಿ ಅದನ್ನು ಹಾಕಿಕೊಂಡು ಮಿಂಚುವ ಆಸೆ ಹೊಂದಿದ್ದರು. ಆದರೆ ನಿಗದಿತ ದಿನ ಹೋಗಿ ಕೇಳಿದರೂ, ರವಿಕೆಯನ್ನು ಹೊಲಿದಿರಲಿಲ್ಲ. ಮದುವೆಗೂ ಮುಂಚೆಯೇ ಕೊಡುವುದಾಗಿ ಪುನಃ ಟೈಲರ್ ಭರವಸೆ ಕೊಟ್ಟರೂ ಅದನ್ನು ಈಡೇರಿಸಲಿಲ್ಲ.
ಇದರಿಂದ ಬೇರೆ ರವಿಕೆಯನ್ನು ತೊಟ್ಟು ಮದುವೆಗೆ ಅಟೆಂಡ್ ಆಗಬೇಕಾಯಿತು. ಇದರಿಂದ ರೊಚ್ಚಿಗೆದ್ದ ಮಹಿಳೆ ಟೈಲರ್ ವಿರುದ್ಧ ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದರು. ನ್ಯಾಯಾಲಯವು ಬ್ಲೌಸ್ ವಿಳಂಬದಿಂದಾಗಿ ದರ್ಜಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿತು. ನೋಟಿಸ್ ಕಳುಹಿಸಿದರೂ ಟೈಲರ್ ಕೋರ್ಟ್ ಮುಂದೆ ಹಾಜರಾಗಲಿಲ್ಲ. ಬ್ಲೌಸ್ ತಲುಪಿಸಲು ವಿಫಲವಾದ ಕಾರಣ "ಸೇವೆಯಲ್ಲಿನ ಕೊರತೆ" ಗಾಗಿ ಸಮಿತಿಯು ಅವರನ್ನು ತಪ್ಪಿತಸ್ಥರೆಂದು ಆದೇಶಿಸಿದೆ. ನ್ಯಾಯಾಲಯವು ಟೈಲರ್ಗೆ ವಾರ್ಷಿಕ ಶೇಕಡಾ 7 ರಷ್ಟು ಬಡ್ಡಿಯೊಂದಿಗೆ 4,395 ರೂ.ಗಳನ್ನು ಮರುಪಾವತಿಸಲು ಮತ್ತು ಮಾನಸಿಕ ತೊಂದರೆ ಮತ್ತು ಮೊಕದ್ದಮೆ ವೆಚ್ಚಗಳಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸಲು ನಿರ್ದೇಶಿಸಿತು, ಇದು ಸುಮಾರು 7,000 ರೂ.ಗಳಷ್ಟಿತ್ತು.
ಇದನ್ನೂ ಓದಿ: ಪರಿಶಿಷ್ಟ ಪಂಗಡದ ಮಹಿಳೆ ಆಸ್ತಿಗೆ ಹಕ್ಕುದಾರಳಲ್ಲ: ಸಂವಿಧಾನವನ್ನು ಉಲ್ಲೇಖಿಸಿದ Supreme Court ಹೇಳಿದ್ದೇನು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ