ಗುಜರಾತ್‌ನಲ್ಲಿ 50 ಸಾವಿರ ಜನರಿಂದ ಏಕಕಾಲಕ್ಕೆ ಸೂರ್ಯನಮಸ್ಕಾರ ಮಾಡಿ ಗಿನ್ನೆಸ್‌ ವಿಶ್ವದಾಖಲೆ: ಮೋದಿ ಅಭಿನಂದನೆ

By BK AshwinFirst Published Jan 2, 2024, 8:55 AM IST
Highlights

ಗುಜರಾತ್‌ ವಿಶ್ವದಾಖಲೆಯ ಮೂಲಕ 2024ನ್ನು ಸ್ವಾಗತಿಸಿದೆ. 108 ಸ್ಥಳಗಳಲ್ಲಿ ಈ ಪ್ರದರ್ಶನ ನಡೆದಿದ್ದು, 108ಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ನವದೆಹಲಿ (ಜನವರಿ 2, 2024): ಹೊಸ ವರ್ಷದ ಮೊದಲ ದಿನ ಗುಜರಾತ್‌ನ 108 ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ 50 ಸಾವಿರ ಮಂದಿ ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನೆಸ್‌ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಕೂಡ ಸೂರ್ಯನಮಸ್ಕಾರದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಗಿನ್ನೆಸ್‌ ಸಂಸ್ಥೆಯ ಪರವಾಗಿ ಸ್ವಪ್ನಿಲ್‌ ದಂಗಾರಿಕರ್‌ ಪರಿಶೀಲಕರಾಗಿ ಆಗಮಿಸಿ ಪ್ರಮಾಣಪತ್ರ ವಿತರಿಸಿದರು.

ಸೂರ್ಯ ನಮಸ್ಕಾರ ಎಂಬುದು ಪ್ರಾಚೀನ ವ್ಯಾಯಾಮ ಪದ್ಧತಿಯಾಗಿದ್ದು, ಮುಂಜಾನೆಯ ಸಮಯದಲ್ಲಿ ವಿವಿಧ ಆಸನ ಮತ್ತು ಭಂಗಿಗಳಲ್ಲಿ ವ್ಯಾಯಾಮ ಮಾಡುವ ಮೂಲಕ ಸೂರ್ಯದೇವನಿಗೆ ನಮಸ್ಕರಿಸಲಾಗುವುದು. ಇದರೊಂದಿಗೆ ತೆಳುಬಿಸಿಲಿಗೆ ನಮ್ಮ ದೇಹ ಒಡ್ಡಿಕೊಳ್ಳುವ ಮೂಲಕ ವಿಟಮಿನ್‌- ಡಿ ಪೌಷ್ಟಿಕಾಂಶವನ್ನೂ ಪಡೆಯಬಹುದಾಗಿದೆ.

ಇದನ್ನು ಓದಿ: ಉದ್ದ ಕೂದಲು ಭಾರತೀಯ ಸಂಪ್ರದಾಯ: 7 ಅಡಿ 9 ಇಂಚು ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ

ಮೊಧೇರಾ ಸೂರ್ಯ ದೇವಾಲಯದ ಆವರಣದಲ್ಲಿ ನಡೆದ ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಪಟೇಲ್‌, ‘ಸೂರ್ಯ ನಮಸ್ಕಾರದಿಂದ ಉತ್ತಮ ಆರೋಗ್ಯದ ಜೊತೆಗೆ ಮಾನವರನ್ನು ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಬಹುದಾಗಿದೆ’ ಎಂದರು.

ಮೋದಿ ಹರ್ಷ:
ಈ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ‘ಗುಜರಾತ್‌ ವಿಶ್ವದಾಖಲೆಯ ಮೂಲಕ 2024ನ್ನು ಸ್ವಾಗತಿಸಿದೆ. 108 ಸ್ಥಳಗಳಲ್ಲಿ ಈ ಪ್ರದರ್ಶನ ನಡೆದಿದ್ದು, 108ಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವಿದೆ. ಇದು ಯೋಗದೆಡೆಗೆ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ನಾನು ಎಲ್ಲರಲ್ಲೂ ಸೂರ್ಯ ನಮಸ್ಕಾರವನ್ನು ದಿನಚರಿಯ ಭಾಗವಾಗಿ ಮಾಡಿಕೊಳ್ಳಲು ಕೇಳಿಕೊಳ್ಳುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

 

ಜಗತ್ತಿನ ಅತ್ಯಂತ ಹಿರಿಯ ಶ್ವಾನ ಬೋಬಿ ಇನ್ನಿಲ್ಲ: ಹಳ್ಳಿಯಲ್ಲಿ ಆರಾಮಾಗಿ ಜೀವನ ನಡೆಸ್ತಿದ್ದ ಇದರ ವಯಸ್ಸೆಷ್ಟು ನೋಡಿ..

click me!