
ಅಹಮ್ಮದಾಬಾದ್(ಫೆ.16) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಕಷ್ಟ ಹೆಚ್ಚಾಗಿದೆ. ಈಗಾಗಲೇ ಇಡೀ ಆರನೇ ಸಮನ್ಸ್ ನೀಡಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಪದವಿ ಪ್ರಶ್ನಿಸಿ ಆರೋಪ ಮಾಡಿದ್ದ ಕೇಜ್ರಿವಾಲ್ ಹಾಗೂ ಆಪ್ ಸಂಸದ ಸಂಜಯ್ ಸಿಂಗ್‌ಗೆ ಹಿನ್ನಡೆಯಾಗಿದೆ. ಈ ಪ್ರಕರಣದ ಕುರಿತು ಮೆಟ್ರೊಪಾಲಿಟನ್ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಿರುದ್ಧ ಹೊರಡಿಸಲಾಗಿರುವ ಸಮನ್ಸ್ ರದ್ದುಗೊಳಿಸುವಂತೆ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಿರುದ್ಧ ಹೊರಡಿಸುವ ಸಮನ್ಸ್ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅರ್ಜಿ ತಿರಸ್ಕರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಪದವಿ ನಕಲಿ ಎಂದು ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಗಂಭೀರ ಆರೋಪ ಮಾಡಿದ್ದರು. ಈ ಕುರಿತು ಗುಜರಾತ್ ವಿಶ್ವವಿದ್ಯಾಲಯ ಆಮ್ ಆದ್ಮಿ ಪಾರ್ಟಿಯ ಇಬ್ಬರು ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿ ಗುಜರಾತ್ ವಿಶ್ವವಿದ್ಯಾಲಯದ ಮೇಲಿನ ನಂಬಿಕೆ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಈ ಹೇಳಿಕೆಯಿಂದ ವಿದ್ಯಾಸಂಸ್ಥೆ ಮೇಲೆ ಅಪನಂಬಿಕೆ ಬೆಳೆಯಲಿದೆ ಎಂದು ವಿಶ್ವವಿದ್ಯಾಲಯ ಪ್ರಕರಣ ದಾಖಲಿಸಿತ್ತು.
ಮೆಟ್ರೊಪಾಲಿಟನ್ ನ್ಯಾಯಾಲಯ ಈ ಪ್ರಕರಣ ಸಂಬಂಧಿಸಿದಂತೆ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಿರುದ್ಧ ಸಮನ್ಸ್ ಹೊರಡಿಸಿತ್ತು. 2023ರ ಎಪ್ರಿಲ್ ತಿಂಗಳಲ್ಲಿ ನ್ಯಾಯಾಲಯ ಸಮನ್ಸ್ ಹೊರಡಿಸಿತ್ತು. ವಿಶ್ವವಿದ್ಯಾಲಯ ನಕಲಿ ಸರ್ಟಿಫಿಕೇಟ್, ಬೋಗಸ್ ಪ್ರಮಾಣ ಪತ್ರ ನೀಡುತ್ತಿದೆ ಎಂಬ ನಾಯಕರ ಆರೋಪವನ್ನು ಮೆಟ್ರೊಪಾಲಿಟನ್ ನ್ಯಾಯಲಯ ಪರಿಗಣಿಸಿ ಸಮನ್ಸ್ ನೀಡಿತ್ತು. ಸತ್ರ ನ್ಯಾಯಾಲಯ ಕೂಡ ಸಮನ್ಸ್ ಎತ್ತಿ ಹಿಡಿದಿತ್ತು. ಹೀಗಾಗಿ ಇಬ್ಬರು ನಾಯಕರು ಹೈಕೋರ್ಟ್ ಮೆಟ್ಟಿಲೇರಿದ್ದರು.
ನಮ್ಮ ಹೇಳಿಕೆ ವಿಶ್ವವಿದ್ಯಾಲಯದ ವಿರುದ್ಧವಲ್ಲ, ಪ್ರಧಾನಿ ನರೇಂದ್ರ ಮೋದಿಯ ಪದವಿ ಶಿಕ್ಷಣದ ಕುರಿತು ಎಂದು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಆದರೆ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಾದವನ್ನು ಕೋರ್ಟ್ ಪರಿಗಣಿಸಲಿಲ್ಲ. ಸಮನ್ಸ್ ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಅರ್ಜಿಯನ್ನು ತಿರಸ್ಕರಿಸಿತು.
ಮೋದಿ ಡಿಗ್ರಿ ಬಗ್ಗೆ ಈಗ ಅನುಮಾನ ಇನ್ನೂ ಜಾಸ್ತಿ ಆಗಿದೆ ಎಂದ ಅರವಿಂದ್ ಕೇಜ್ರಿವಾಲ್!
ಈ ಹಿಂದೆ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಹಿತಿ ಬಹಿರಂಗಗೊಳಿಸುವಂತೆ ಮುಖ್ಯ ಮಾಹಿತಿ ಆಯುಕ್ತರು 7 ವರ್ಷದ ಹಿಂದೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ನೀಡಿದ ಆದೇಶವನ್ನು ಗುಜರಾತ್ ಹೈಕೋರ್ಚ್ ಶುಕ್ರವಾರ ರದ್ದುಗೊಳಿಸಿತ್ತು. ಇದೇ ವೇಳೆ, ಮಾಹಿತಿ ಬಹಿರಂಗ ಮಾಡುವಂತೆ ಮಾಹಿತಿ ಹಕ್ಕು ಅಡಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ 25 ಸಾವಿರ ರೂಪಾಯಿ ದಂಡ ಕೂಡ ವಿಧಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ