
ಅಹಮ್ಮದಾಬಾದ್(ಫೆ.08) ಪ್ರಧಾನಿ ಮೋದಿ ಒಬಿಸಿ ಎಂದು ಸುಳ್ಳು ಹೇಳಿದ್ದಾರೆ. ಮೋದಿ ಗುಜರಾತ್ ಮುಖ್ಯಮಂತ್ರಿಯಾದ ಬಳಿಕ ಮೋದಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಿ ಇದೀಗ ಒಬಿಸಿ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅಸಲಿಗೆ ಮೋದಿ ಒಬಿಸಿ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲೇ ನರೇಂದ್ರ ಮೋದಿಯ ಘಾಂಚಿ ಸಮುದಾಯ ಒಬಿಸಿ ಪಟ್ಟಿಗೆ ಸೇರ್ಪಡೆಯಾಗಿತ್ತು ಅನ್ನೋ ಸರ್ಕಾರದ ದಾಖಲೆ ಬಹಿರಂಗವಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ, ಸದ್ಯ ಬಿಜೆಪಿ ರಾಜ್ಯಸಭಾ ಸದಸ್ಯನಾಗಿರುವ ನರಹರಿ ಅಮಿನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. 1994ರಲ್ಲೇ ಅಂದಿನ ಕಾಂಗ್ರೆಸ್ ಸರ್ಕಾರ ಘಾಂಚಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಅಧಿಸೂಚನೆ ನೀಡಿತ್ತು. ಈ ವೇಳೆ ನಾನು ಉಪಮುಖ್ಯಮಂತ್ರಿಯಾಗಿದ್ದೆ ಎಂದು ನರಹರಿ ಅಮಿನ್ ಹೇಳಿದ್ದಾರೆ. ಇಷ್ಟೇ ಅಲ್ಲ ರಾಹುಲ್ ಗಾಂಧಿ ಸುಳ್ಳು ಹೇಳಿದ್ದು ಮಾತ್ರವಲ್ಲ ಒಬಿಸಿ ಸಮುದಾಯ ಅವಮಾನಿಸಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ನಾನು ಕಾಂಗ್ರೆಸ್ ಸರ್ಕಾರದಲ್ಲಿ ಗುಜರಾತ್ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. 1994ರ ಜುಲೈ 25ರಂದು ಗುಜರಾತ್ ಸರ್ಕಾರ ಮೋದ್ ಘಾಂಚಿ ಸಮುದಾಯವನ್ನು ಒಬಿಸಿ(ಹಿಂದುಳಿದ ವರ್ಗ)ಪಟ್ಟಿಗೆ ಸೇರಿಸಲು ಸೂಚಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಇದೇ ಮೋದ್ ಘಾಂಚಿ ಸಮುದಾಯಕ್ಕೆ ಸೇರಿದರು. ಇದೀಗ ರಾಹುಲ್ ಗಾಂಧಿ ಒಬಿಸಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ ಎಂದು ನರಹರಿ ಅಮಿನ್ ಟ್ವೀಟ್ ಮಾಡಿದ್ದಾರೆ.
ಮೋದಿ ಒಬಿಸಿ ಜಾತಿ ಕುರಿತು ಹಸಿ ಸುಳ್ಳು ಹೇಳಿ ಪೇಚಿಗೆ ಸಿಲುಕಿದ ರಾಹುಲ್, 1999ರ ದಾಖಲೆ ಬಹಿರಂಗ!
ರಾಹುಲ್ ಗಾಂಧಿ ಹಸಿ ಹಸಿ ಸುಳ್ಳು ಹೇಳುತ್ತಿದ್ದಾರೆ. ಗುಜರಾತ್ ಸರ್ಕಾರದ ಘಾಂಚಿ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಸೂಚನೆ ನೀಡಿದಾಗ ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಬಿಡಿ, ಶಾಸಕರೂ ಆಗಿರಲಿಲ್ಲ, ಸಂಸದರೂ ಆಗಿರಲಿಲ್ಲ ಎಂದು ನರಹರಿ ಹೇಳಿದ್ದಾರೆ. ರಾಹುಲ್ ಗಾಂಧಿ ತಕ್ಷಣವೇ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಒಬಿಸಿ ಸಮುದಾಯವನ್ನು ಅಪಮಾನಿಸುವುದನ್ನು ನಿಲ್ಲಿಸಬೇಕು. ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾತಿಯನ್ನು ಅಪಮಾನಿಸಿದ ಕಾರಣಕ್ಕೆ ಗುಜರಾತ್ ಜನತೆಯಲ್ಲಿ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು ಎಂದು ನರಹರಿ ಆಗ್ರಹಿಸಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ಇಂದು ಒಡಿಶಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಸುಳ್ಳುಗಾರ, ತಮಗೆ ತಾವೇ ಒಬಿಸಿ ಪ್ರಮಾಣ ಪತ್ರ ನೀಡಿದ್ದಾರೆ. ಅಸಲಿಗೆ ಮೋದಿ ಸಾಮಾನ್ಯ ಕೆಟಗರಿ ಜಾತಿಯಲ್ಲಿ ಹುಟ್ಟಿದ್ದಾರೆ. 2000ನೇ ಇಸವಿಯಲ್ಲಿ ಮುಖ್ಯಮಂತ್ರಿಯಾದ ಬಳಿಕ ಮೋದಿ ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಮೋದಿ ಒಬಿಸಿ ಅಲ್ಲ ಎಂದ ರಾಹುಲ್‌ಗೆ ಪಾರ್ಸಿ ಕ್ಯಾಥೋಲಿಕ್ ನಡುವೆ ಬ್ರಾಹ್ಮಣ ಹೇಗಾಯ್ತು? ನೆಟ್ಟಿಗರ ಪ್ರಶ್ನೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ