
ಮೊರ್ಬಿ (ನ.1): ಮೂರ್ಬಿ ತೂಗುಸೇತುವೆ ಅವಗಢದಲ್ಲಿ ಈವರೆಗೂ ಮೃತಪಟ್ಟ ವ್ಯಕ್ತಿಗಳ ಸಂಖ್ಯೆ 135ಕ್ಕೆ ಏರಿದೆ. 135 ಶವಗಳನ್ನೂ ಮಚ್ಛು ನದಿಯಿಂದ ಹೊರತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಚಾಲ್ತಿಯಲ್ಲಿದ್ದು ನಾಪತ್ತೆಯಾಗಿರುವ ಇನ್ನೊಬ್ಬ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ ಎಂದು ಮೊರ್ಬಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೌಕಾಪಡೆ, ಎನ್‌ಡಿಆರ್‌ಎಫ್ ಮೃತದೇಹಗಳಿಗಾಗಿ ಹುಡುಕಾಟ ನಡೆಯಲು ಆರಂಭಿಸಿದೆ. ಈ ನಡುವೆ ಮಂಗಳವಾರ ಮಧ್ಯಾಹ್ನ 3.45ಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊರ್ಬಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ಇಡೀ ಸರ್ಕಾರಿ ಆಸ್ಪತ್ರೆಯನ್ನು ಸೋಮವಾರ ರಾತ್ರಿಯೇ ಯುದ್ಧೋಪಾದಿಯಲ್ಲಿ ಜಗಮಗ ಮಾಡಲಾಗಿದೆ. ಗುಜರಾತ್‌ನಲ್ಲಿ ಬುಧವಾರ ಒಂದು ದಿನದ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿತ್ಉತ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೊರ್ಬಿಯಲ್ಲಿ ಮೃತರ ಕುಟುಂಬಗಳು ಮತ್ತು ಗಾಯಾಳುಗಳನ್ನು ಭೇಟಿ ಮಾಡಲಿದ್ದಾರೆ. ಮೋರ್ಬಿಗೆ ಭೇಟಿ ನೀಡುವ ಮುನ್ನ ರಾತ್ರೋರಾತ್ರಿ ಸರ್ಕಾರಿ ಆಸ್ಪತ್ರೆಗೆ ಬಣ್ಣ ಬಳಿದು ದುರಸ್ತಿ ಮಾಡಲಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಆಸ್ಪತ್ರೆಗಳ ದುರಸ್ತಿ ವಿಚಾರದಲ್ಲಿ ತಗಾದೆ ತೆಗೆದಿವೆ. ಪ್ರಧಾನಿಯವರ ಫೋಟೋಶೂಟ್ ಮಾಡಲು ಬಿಜೆಪಿ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ತೊಡಗಿದೆ ಎಂದು ಹೇಳಿದರು.
ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದರ ನಡುವೆಯೇ ಆಸ್ಪತ್ರೆಯಲ್ಲಿ ಪೇಟಿಂಗ್, ಟೈಲ್ಸ್ ಅಳವಡಿಕೆ ಕಾರ್ಯ, ಹೊರ ಆವರಣವನ್ನು ಸಿಂಗರಿಸುವ ಕಾರ್ಯ ರಾತ್ರೋರಾತ್ರಿ ನಡೆದಿದೆ. ಆಸ್ಪತ್ರೆಯನ್ನು ದುರಸ್ತಿ ಮಾಡುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಇದು ಬಿಜೆಪಿಯ ಗುಜರಾತ್ ಮಾಡೆಲ್ ಎಂದು ಹೇಳುವ ಮೂಲಕ ಈ ಘಟನೆಯನ್ನೂ ರಾಜಕೀಯಕ್ಕಾಗಿ ಬಳಕೆ ಮಾಡುತ್ತಿದೆ. 300 ಆಸನದ ಆಸ್ಪತ್ರೆಯನ್ನು ಕೆಲಸಗಾರರು ಕ್ಲೀನ್ ಮಾಡುತ್ತಿರುವ ಸಾಕಷ್ಟು ವಿಡಿಯೋಗಳು ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿವೆ.
ತೂಗುಸೇತುವೆ ಕುಸಿತದಿಂದ ಗಾಯಗೊಂಡಿರುವ ಆರು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ಕೈದು ಮಂದಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದುವರೆಗೆ 56 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. ಆಸ್ಪತ್ರೆಯ ಪ್ರವೇಶ ದ್ವಾರದ ಭಾಗಗಳನ್ನು ಹಳದಿ ಬಣ್ಣದ ಮೂಲಕ ಬಳಿಯಲಾಗಿದೆ. ಇನ್ನು ಆಸ್ಪತ್ರೆಯ ಒಳಭಾಗದ ಕೆಲವು ಪ್ರದೇಶಗಳಿಗೆ ಬಿಳಿ ಬಣ್ಣದ ಕೋಟ್ ನೀಡಲಾಗಿದೆ.
ಮೊರ್ಬಿ ಸೇತುವೆ ದುರಂತ, ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ
ಮೊರ್ಬಿ ಆಸ್ಪತ್ರೆಯೊಳಗೆ ರಾತ್ರಿಯಿಡೀ ದುರಸ್ತಿ ಕಾರ್ಯ ನಡೆಯುತ್ತಿವೆ, ಇದರಲ್ಲಿ ಹೊಸ ಕೋಟ್ ಪೇಂಟ್, ಗೋಡೆಗಳ ಮೇಲೆ ಹೊಸ ಟೈಲ್ಸ್ ಮತ್ತು ಆಸ್ಪತ್ರೆಯನ್ನು ಅಲಂಕರಿಸಲು ಸಣ್ಣ ನಿರ್ಮಾಣ ಕಾರ್ಯಗಳು ಸೇರಿವೆ ಎಂದು ಗುಜರಾತ್ ರಾಜ್ಯದ ಕಾಂಗ್ರೆಸ್ ಟ್ವಿಟರ್ ಪೇಜ್‌ಗಳಲ್ಲಿ ಬರೆಯಲಾಗಿದೆ. ಇದಕ್ಕಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ಸಿಗರು, ಸಾವಿನ ವಿಚಾರದಲ್ಲೂ ಬಿಜೆಪಿ ಸಿಂಗಾರದಲ್ಲಿ ತೊಡಗಿದೆ ಎಂದು ಟ್ವೀಟ್ ಮಾಡಿದೆ.
ಗುಜರಾತ್ ತೂಗು ಸೇತುವೆ ಕುಸಿತ 130 ಮೀರಿದ ಮೃತರ ಸಂಖ್ಯೆ! ಕುಸಿತಕ್ಕೆ ಕಾರಣ ಏನು?
ಮುಂಬರುವ ಗುಜರಾತ್ ಚುನಾವಣೆಯಲ್ಲಿ ಬಿಜೆಪಿಯ ಅತೀ ದೊಡ್ಡ ಪ್ರತಿಸ್ಪರ್ಧಿಯಾಗಿರುವ ಆಮ್ ಆದ್ಮಿ ಪಾರ್ಟಿ (ಎಎಪಿ) ಆಸ್ಪತ್ರೆಯ ಗೋಡೆಗಳಿಗೆ ಬಣ್ಣ ಬಳಿಯುತ್ತಿರುವ ಕಾರ್ಮಿಕರ ವೀಡಿಯೊವನ್ನು ಟ್ವೀಟ್ ಮಾಡಿದೆ: “141 ಜನರು ಸತ್ತಿದ್ದಾರೆ, ನೂರಾರು ಜನರು ಕಾಣೆಯಾಗಿದ್ದಾರೆ, ಯಾವುದೇ ಕ್ರಮ ಕೈಗೊಂಡಿಲ್ಲ. ನಿಜವಾದ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಯಾವಾಗ. ಆದರೆ ಬಿಜೆಪಿ ಕಾರ್ಯಕರ್ತರು ಫೋಟೋಶೂಟ್ ಮತ್ತು ಕವರ್ ಅಪ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ' ಎಂದು ಟ್ವೀಟ್ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ