Gujarat Bridge Collapse: ಗೋಡೆ ಗಡಿಯಾರ ಕ್ರಾಂತಿ ಮಾಡಿದ ಅಜಂತಾ ಕಂಪನಿ ಎಡವಟ್ಟು

By Kannadaprabha NewsFirst Published Nov 1, 2022, 10:37 AM IST
Highlights

130ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಸೇತುವೆಗೆ ಇನ್ನೂ 15 ವರ್ಷ ಏನೂ ತೊಂದರೆ ಆಗುವುದಿಲ್ಲ ಎಂದು ಸೇತುವೆಯನ್ನು ನವೀಕರಿಸಿದ ಸಂಸ್ಥೆ ವಾರದ ಹಿಂದಷ್ಟೇ ಭರವಸೆ ನೀಡಿತ್ತು. ಅಕ್ಟೋಬರ್‌ 24ರಂದು ಜನರಿಗೆ ಸೇತುವೆ ಪ್ರವೇಶಕ್ಕೆ ಮುಕ್ತ ಮಾಡುವುದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ‘ಜನರು ಜವಾಬ್ದಾರಿಯಿಂದ ವರ್ತಿಸಿದರೆ, ಸೇತುವೆಗೆ ಹಾನಿಯುಂಟು ಮಾಡದಿದ್ದರೆ 15 ವರ್ಷ ಸೇತುವೆಗೆ ಏನೂ ಆಗುವುದಿಲ್ಲ’ ಎಂದು ಭರವಸೆ ನೀಡಿದ್ದರು.

ನವದೆಹಲಿ: 130ಕ್ಕೂ ಹೆಚ್ಚು ಜನರ ದುರಂತದ ಸಾವಿಗೆ ಕಾರಣವಾಗಿದ್ದ ಗುಜರಾತಿನ (Gujarat) ಮೋರ್ಬಿ (Morbi) ಸೇತುವೆ (Bridge) ದುರಸ್ತಿ, ನವೀಕರಣದ ಗುತ್ತಿಗೆ ವಹಿಸಿಕೊಂಡಿದ್ದು, ದೇಶದಲ್ಲಿ ಗೋಡೆ ಗಡಿಯಾರ (Wall Clock) ತಯಾರಿಕೆಯಲ್ಲಿ ಕ್ರಾಂತಿ ಮಾಡಿದ್ದು ಮತ್ತು ಬಳಿಕ ಸಿಎಫ್‌ಎಲ್‌ ಬಲ್ಬ್‌, ಗಡಿಯಾರ, ಇ-ಬೈಕ್‌ಗಳನ್ನೂ ಉತ್ಪಾದನೆ ಮಾಡಿ ಹೆಸರು ಗಳಿಸಿದ ಅಜಂತಾ ಒರೆವಾ ಗ್ರೂಪ್‌ (Ajanta Oreva Group) ಎಂದು ಬೆಳಕಿಗೆ ಬಂದಿದೆ. ಓಧವ್‌ಜಿ ರಾಘವ್‌ಜಿ ಪಟೇಲ್‌ ಅವರು 1971ರಲ್ಲಿ ಅಜಂತಾ ಗೋಡೆ ಗಡಿಯಾರ ನಿರ್ಮಾಣದ ಕಂಪನಿ ಸ್ಥಾಪಿಸಿದ್ದರು. ವಾರ್ಷಿಕ 800 ಕೋಟಿ ರು. ವ್ಯವಹಾರ ನಡೆಸುವ ಅಜಂತಾ ಗ್ರೂಪ್‌ ಎಲೆಕ್ಟ್ರಾನಿಕ್‌ ಸಾಧನಗಳು, ಬಲ್ಬ್‌, ಕ್ಯಾಲ್ಕುಲೇಟರ್‌, ಸೆರಾಮಿಕ್‌ ಉತ್ಪನ್ನ ಹಾಗೂ ಇ-ಬೈಕ್‌ ಉತ್ಪಾದನೆಯನ್ನೂ ಮಾಡಿ ಸೈ ಎನಿಸಿಕೊಂಡಿತ್ತು. ಆದರೆ ನಿರ್ಮಾಣ ಕಾಮಗಾರಿ ನಡೆಸದ ಕಂಪನಿಯೊಂದಕ್ಕೆ ಸೇತುವೆ ನಿರ್ವಹಣೆ ಗುತ್ತಿಗೆ ನೀಡಿದ್ದೇಕೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನು 15 ವರ್ಷ ಸೇತುವೆಗೆ ಏನೂ ತೊಂದರೆ ಇಲ್ಲ ಎಂದಿದ್ದ ಕಂಪನಿ!
130ಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಸೇತುವೆಗೆ ಇನ್ನೂ 15 ವರ್ಷ ಏನೂ ತೊಂದರೆ ಆಗುವುದಿಲ್ಲ ಎಂದು ಸೇತುವೆಯನ್ನು ನವೀಕರಿಸಿದ ಸಂಸ್ಥೆ ವಾರದ ಹಿಂದಷ್ಟೇ ಭರವಸೆ ನೀಡಿತ್ತು. ಅಕ್ಟೋಬರ್‌ 24ರಂದು ಜನರಿಗೆ ಸೇತುವೆ ಪ್ರವೇಶಕ್ಕೆ ಮುಕ್ತ ಮಾಡುವುದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಒರೆವಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ‘ಜನರು ಜವಾಬ್ದಾರಿಯಿಂದ ವರ್ತಿಸಿದರೆ, ಸೇತುವೆಗೆ ಹಾನಿಯುಂಟು ಮಾಡದಿದ್ದರೆ 15 ವರ್ಷ ಸೇತುವೆಗೆ ಏನೂ ಆಗುವುದಿಲ್ಲ’ ಎಂದು ಭರವಸೆ ನೀಡಿದ್ದರು.

ಇದನ್ನು ಓದಿ: Gujarat ತೂಗು ಸೇತುವೆ ಕುಸಿತ: 132 ಜನರ ಬಲಿ; ಮುಂದುವರಿದ ರಕ್ಷಣಾ ಕಾರ್ಯ

ಸೇತುವೆ ಪ್ರವೇಶಕ್ಕೆ 17 ರೂ. ಟಿಕೆಟ್‌ 
ಮೋರ್ಬಿ: ಸೇತುವೆ ನವೀಕರಣದ ಬಳಿಕ ಜನದಟ್ಟಣೆ ನಿಯಂತ್ರಿಸಲು ಹಾಗೂ ಪ್ರವೇಶವನ್ನು (Entrance) ಮಿತಿಗೊಳಿಸಲು ಪ್ರವೇಶಕ್ಕೆ 17 ರೂ. ನಿಗದಿಗೊಳಿಸಲಾಗಿತ್ತು ಎಂದು ಓರೇವಾ ಕಂಪನಿ ತಿಳಿಸಿದೆ. ಸಂಜೆ 6.30 ರವರೆಗೆ ಸೇತುವೆಗೆ ಪ್ರವೇಶ ತೆರೆಯಲು ನಿಗದಿಗೊಳಿಸಲಾಗಿತ್ತು. ಬಳಿಕ ಸಮಯಾವಕಾಶ ಹೆಚ್ಚಿಸಲು ವಿಚಾರ ನಡೆಸಲಾಗುತ್ತಿತ್ತು. 2007ರ ಭೂಕಂಪದ ಬಳಿಕ ಸೇತುವೆ ನವೀಕರಣ ಪ್ರಾರಂಭಗೊಂಡಿತ್ತು.

ನಿಗದಿತ ಅವಧಿಗೂ ಮುನ್ನ ಆತುರದಲ್ಲಿ ಸೇತುವೆ ಮುಕ್ತ
ಅಹಮದಾಬಾದ್‌: 130ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಮೋರ್ಬಿ ಸೇತುವೆಯನ್ನು ನವೀಕೃತಗೊಳಿಸಿದ ಬಳಿಕ ಗುತ್ತಿಗೆದಾರರು ನಗರ ಪಾಲಿಕೆಯಿಂದ ಫಿಟ್‌ನೆಸ್‌ ಪ್ರಮಾಣಪತ್ರ (Fitness Certificate) ಪಡೆದಿರಲಿಲ್ಲ. ಜೊತೆಗೆ ನಿಗದಿತ ಅವಧಿಗೆ ಮುನ್ನವೇ ಆತುರವಾಗಿ ಜನರ ಬಳಕೆಗೆ ಮುಕ್ತ ಮಾಡಿದ್ದರು ಎಂಬ ಗಂಭೀರವಾದ ವಿಚಾರ ಬೆಳಕಿಗೆ ಬಂದಿದೆ.
ಇದೇ ಕಂಪನಿ 2008-18ರವರೆಗೆ ಮೊದಲ ಬಾರಿಗೆ 10 ವರ್ಷ ನಿರ್ವಹಣೆ ಗುತ್ತಿಗೆ ಪಡೆದಿತ್ತು. ನಂತರ 2022ರಲ್ಲಿ ಮತ್ತೆ 15 ವರ್ಷಗಳ ಅವಧಿಗಾಗಿ ಮೋರ್ಬಿ ಸೇತುವೆಯ ಕಾರ್ಯಾಚರಣೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ಅಜಂತಾ ಓರೆವಾ ಕಂಪನಿಗೆ ಗುತ್ತಿಗೆಯಾಗಿ ನೀಡಲಾಗಿತ್ತು. ಈ ಒಪ್ಪಂದದ ಪ್ರಕಾರ ಸೇತುವೆಯ ನವೀಕರಣಕ್ಕೆ 8-12 ತಿಂಗಳುಗಳ ಅವಧಿ ನೀಡಲಾಗಿತ್ತು. ಆದರೆ ನಿಯಮ ಉಲ್ಲಂಘಿಸಿದ ಕಂಪನಿ ಕೇವಲ 5 ತಿಂಗಳಲ್ಲಿ ಸೇತುವೆ ಕಾಮಗಾರಿ ಮುಗಿಸಿದ್ದಾಗಿ ಹೇಳಿ, ಫಿಟ್‌ನೆಸ್‌ ಪ್ರಮಾಣಪತ್ರವನ್ನೂ ಪಡೆಯದೇ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: Gujaratನಲ್ಲಿ ಕುಸಿದ ತೂಗು ಸೇತುವೆ: 60ಕ್ಕೂ ಹೆಚ್ಚು ಮೃತದೇಹಗಳು ಹೊರಕ್ಕೆ; ಇನ್ನೂ ಹಲವರು ಅಪಾಯದಲ್ಲಿ ಸಿಲುಕಿರುವ ಶಂಕೆ..!

25 ಜನರ ಬದಲು 400 ಜನರು ತೆರಳಿ ಎಡವಟ್ಟು
ಈ ಸೇತುವೆ ಪ್ರವೇಶಕ್ಕೆ ತಲಾ 17 ರೂ ಟಿಕೆಟ್‌ ಶುಲ್ಕ ವಿಧಿಸಲಾಗುತ್ತದೆ. ಒಂದು ಬಾರಿಗೆ ಸೇತುವೆ ಮೇಲೆ 20-25 ಪ್ರವಾಸಿಗರನ್ನು ಬಿಡಲಾಗುತ್ತದೆ. ಆದರೆ ಭಾನುವಾರ ಒಮ್ಮೆಗೆ 400-500 ಜನರನ್ನು ಬಿಡುವ ಮೂಲಕ ಅಜಂತಾ ಕಂಪನಿ ಅಜಾಗರೂಕತೆ ತೋರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Morbi bridge Tragedy ಘಟನಾ ಸ್ಥಳಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ!

click me!