ರೈತ ಪ್ರತಿಭಟನೆ ಹೆಸರಲ್ಲಿ ದೇಶದ ಪಿತೂರಿ ನಡೆಸಲು ಯತ್ನಿಸಿದವರನ್ನು ದೆಹಲಿ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಹಂಚಿಕೊಂಡ ಟೂಲ್‌ಕಿಟ್ ಸಂಚಿನ ಹಿಂದೆ ಹಲವರ ಕೈವಾಡ ಎದ್ದಕಾಣುತ್ತಿದೆ. ಈಗಾಗಲೆ ಬೆಂಗಳೂರಿನ ದಿಶಾ ರವಿ ಬಂಧನದ ಬೆನ್ನಲ್ಲೇ ಪರಾರಿಯಾಗಿರುವ ನಿಖಿತಾ ಜಾಕೋಬ್ ಹಾಗೂ ಶಂತನು ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರೆಂಟ್ ಹೊರಡಿಸಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಫೆ.15): ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ಪ್ರಕರಣ ಇದೀಗ ಗಂಭೀರವಾಗುತ್ತಿದೆ. ರೈತ ಪ್ರತಿಭಟನೆ ಹೆಸರಲ್ಲಿ ದೇಶದ ವಿರುದ್ಧ ಪಿತೂರಿಗೆ ಸಂಚು ರೂಪಿಸಿದ ಆರೋಪದಡಿ ಇದೀಗ ದೆಹಲಿ ಪೊಲೀಸರು ಒಬ್ಬರ ಹಿಂದೊಬ್ಬರನ್ನು ಜೈಲಿಗಟ್ಟುತ್ತಿದ್ದಾರೆ. ಇದೀಗ ನಿಖಿತಾ ಜಾಕೋಬ್ ಹಾಗೂ ಶಂತನು ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ.
ಗ್ರೆಟಾ ಥನ್ಬರ್ಗ್ ಟೂಲ್ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್
ಬೆಂಗಳೂರಿನ 21 ವರ್ಷದ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಟೂಲ್ ಕಿಟ್ ಪ್ರಕರಣ, ರೈತ ವಿರೋಧಿ ಹೋರಾಟದಲ್ಲಿ ದೇಶದ ವಿರುದ್ಧ ಸಂಚು ರೂಪಿಸಿದ ಆರೋಪದಡಿ ನಿಖಿತಾ ಜಾಕೋಬ್ ಹಾಗೂ ಶಂತನು ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಾಗಿದೆ.
ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ಪ್ರಕರಣದಲ್ಲಿ ಈ ನಿಖಿತಾ ಜಾಕೋಬ್ ಹಾಗೂ ಶಂತನು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ದೆಹಲಿ ಪೊಲೀಸರು ಮುಂಬೈನ ಹಲವು ಕಡೆ ನಿಖಿತಾ ಹಾಗೂ ಶಂತನುಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ನಿಕಿತಾ ಜಾಕೋಬ್ ಖಲಿಸ್ತಾನ್ ಹಾಗೂ ಪೊಯೆಟಿಕ್ ಫೌಂಡೇಶನ್ ಸಂಸ್ಥಾಪಕ ಎಂ.ಒ ಧಲಿವಾಲ್ ಅವರನ್ನು ತಮ್ಮ ಸಹೋದ್ಯೋಗಿ ಪುನೀತ್ ಮೂಲಕ ಸಂಪರ್ಕಿಸಿದ್ದಾರೆ. ಗಣರಾಜ್ಯೋತ್ಸವ ದಿನ ರೈತ ಹೋರಾಟದ ಹೆಸರಿನಲ್ಲಿ ಭಾರತಕ್ಕೆ ಮಸಿ ಬಳಿಯಲು ಈ ಭೇಟಿ ಮಾಡಲಾಗಿತ್ತು ಎಂದು ದೆಹಲಿ ಪೊಲೀಸರು ಬಹಿರಂಗ ಪಡಿಸಿದ್ದಾರೆ.
ಗ್ರೆಟಾ ಹಂಚಿಕೊಂಡಿದ್ದ ಟೂಲ್ ಸೃಷ್ಟಿಕರ್ತ ಖಲಿಸ್ತಾನ ಹೋರಾಟಗಾರ ಧಾಲಿವಾಲ್
ಕೆಂಪು ಕೋಟೆ ಮೇಲಿನ ದಾಳಿಗೂ ಮೊದಲು ಝೂಮ್ ಮೀಟಿಂಗ್ ಮೂಲಕ ಇದೇ ನಿಖಿತಾ ಜಾಕೋಬ್, ಧಲಿವಾಲ್, ದಿಶಾ ಸೇರಿದಂತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಭಾರತ ವಿರೋಧಿ ಪಿತೂರಿ, ತಪ್ಪು ಮಾಹಿತಿ ರವಾನೆ ಮೂಲಕ ಕೇಂದ್ರ ಸರ್ಕಾರವನನ್ನು ಇಕ್ಕಟ್ಟಿಗೆ ಸಿಲುಕಿಸುವುದು, ರೈತರ ನಡುವೆ ಅಸಮಾಧಾನ ಸೃಷ್ಟಿಸುವುದು ಸೇರಿದಂತೆ ಹಲವು ವಿಚಾರಗಳ ಕುರಿಚು ಚರ್ಚೆ ನಡೆಸಲಾಗಿದೆ. ಕೆಂಪು ಕೋಟೆ ಮುತ್ತಿಗೆ ಹಾಕುವ ಮುನ್ನ ನಡೆದ ಈ ವಿಡಿಯೋ ಮೀಟಿಂಗ್‌ನಲ್ಲಿ ಟ್ರಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ ಯುವಕ ಸಾವಿಗೆ ಪೊಲೀಸ್ ಗುಂಡೇಟು ಕಾರಣ ಎಂಬುದನ್ನೂ ಬಿಂಬಿಸಲು ಯೋಜನೆ ಸಿದ್ದಗೊಂಡಿತ್ತು ಅನ್ನೋ ಮಾಹಿತಿ ಹೊರಬಿದ್ದಿದೆ.