ಅಕ್ಕ ತಂಗಿನಾ ಒಂದೇ ಮನೆಯ ನಿರುದ್ಯೋಗಿ ಸೋದರರಿಗೆ ಮದ್ವೆ ಮಾಡಿದ್ದ ಪೋಷಕರು: ಆಮೇಲಾಗಿದ್ದೆ ನಿಕ್ಕಿ ಭಾಟಿ ಡೌರಿ ಮರ್ಡರ್

Published : Aug 25, 2025, 05:41 PM IST
Nikki Bhati murder

ಸಾರಾಂಶ

ಮುದ್ದಾಗಿ ಸಾಕಿದ ಗಿಣಿನ ಹದ್ದಿನ ಕೈಗೆ ಕೊಟ್ಟರು ಎಂಬ ಮಾತನ್ನು ನೀವು ಕೇಳಿರಬಹುದು. ಅದೇ ರೀತಿಯ ಕೊರಗು ಈಗ ಈಗ ಗ್ರೇಟರ್ ನೋಯ್ಡಾದಲ್ಲಿ ಗಂಡನ ಮನೆಯವರ ವರದಕ್ಷಿಣೆಯ ದಾಹಕ್ಕೆ ಬಲಿಯಾದ ನಿಕ್ಕಿ ಭಾಟಿ ಪೋಷಕರನ್ನು ಕಾಡುತ್ತಿದೆ.

ಮುದ್ದಾಗಿ ಸಾಕಿದ ಗಿಣಿನ ಹದ್ದಿನ ಕೈಗೆ ಕೊಟ್ಟರು ಎಂಬ ಮಾತನ್ನು ನೀವು ಕೇಳಿರಬಹುದು. ಅದೇ ರೀತಿಯ ಕೊರಗು ಈಗ ಈಗ ಗ್ರೇಟರ್ ನೋಯ್ಡಾದಲ್ಲಿ ಗಂಡನ ಮನೆಯವರ ವರದಕ್ಷಿಣೆಯ ದಾಹಕ್ಕೆ ಬಲಿಯಾದ ನಿಕ್ಕಿ ಭಾಟಿ ಪೋಷಕರನ್ನು ಕಾಡುತ್ತಿದೆ. ಆ ಪೋಷಕರು ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ತಮ್ಮ ಕೈಯಾರೆ ಒಂದೇ ಚಪ್ಪರದ ಕೆಳಗೆ ಒಂದೇ ದಿನ ಒಂದೇ ಮನೆಯ ಇಬ್ಬರು ನಿರುದ್ಯೋಗಿ ಗಂಡು ಮಕ್ಕಳಿಗೆ ಧಾರೆ ಎರೆದುಕೊಟ್ಟರು ನೋಡಿ. ಅಂದಿನಿಂದಲೇ ಆ ಹೆಣ್ಣು ಮಕ್ಕಳ ಕಷ್ಟದ ದಿನಗಳು ಆರಂಭವಾಗಿದ್ದವು. ಅಪ್ಪನ ದಿನಸಿ ಅಂಗಡಿಯನ್ನೇ ನಂಬಿ ಜೀವನ ನಡೆಸುತ್ತಿದ್ದ ನಿಕ್ಕಿ ಭಾಟಿಯ ಗಂಡ ವಿಪಿನ್ ಭಾಟಿ ಹಾಗೂ ಭಾವ ರೋಹಿತ್ ಭಾಟಿಗೆ ನಿಕ್ಕಿ ಪಾಯ್ಲಾ ಅಲಿಯಾಸ್ ನಿಕ್ಕಿ ಭಾಟಿ ಅವರ ಕುಟುಂಬದವರು ಕೊಟ್ಟಿದ್ದೆಲ್ಲವೂ ಅವರ ಯೋಗ್ಯತೆಗಿಂತಲೂ ಹೆಚ್ಚಿನದ್ದೇ ಆಗಿತ್ತು. ಆದರೆ ಆ ಧನದಾಹಿಗಳಿಗೆ ಮಾತ್ರ ಅದರ ಬಗ್ಗೆ ಯಾವುದೇ ಕೃತಜ್ಞತೆ ಇರಲಿಲ್ಲ ನೋಡಿ.

ರೀಲ್ಸ್‌ ಹಾಕುತ್ತಿದ್ದಿದ್ದಕ್ಕೆ ಆಕ್ಷೇಪ ಎಂಬ ವರದಿಗೆ ಪ್ರತಿಕ್ರಿಯಿಸಿದ ನಿಕ್ಕಿ ಚಿಕ್ಕಪ್ಪ:

ತನ್ನ ಅತ್ತೆ ಹಾಗೂ ಗಂಡನೇ ಬೆಂಕಿ ಹಚ್ಚಿದ ಪರಿಣಾಮ ಕೊಲೆಯಾದ ನಿಕ್ಕಿ ಭಾಟಿ ಬಗ್ಗೆ ಕೆಲವರು ಮಾಧ್ಯಮಗಳು ಆಕೆ ರೀಲ್ಸ್ ಮಾಡುತ್ತಿದ್ದಳು. ಸಾಮಾಜಿಕ ಜಾಲತಾಣದಲ್ಲಿ ಅವುಗಳನ್ನು ಪೋಸ್ಟ್ ಮಾಡುತ್ತಿದ್ದಳು, ಇದು ನಿಕ್ಕಿ ಭಾಟಿ ಗಂಡ ವಿಪಿನ್ ಭಾಟಿ ಹಾಗೂ ರೋಹಿತ್ ಭಾಟಿಗೆ ಇಷ್ಟವಿರಲಿಲ್ಲ, ಇದೇ ಕಾರಣಕ್ಕೆ ದಿನವೂ ಜಗಳಗಳಾಗುತ್ತಿದ್ದವು. ಆಗಸ್ಟ್ 21ರಂದು ಕೂಡ ಇದೇ ರೀತಿ ಜಗಳ ನಡೆದು ವಿಕೋಪಕ್ಕೆ ತಿರುಗಿ ನಿಕ್ಕಿ ಹತ್ಯೆಗೆ ಕಾರಣವಾಯ್ತು ಎಂಬ ವರದಿಗಳು ಬಂದಿದ್ದವು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಕ್ಕಿಯ ಚಿಕ್ಕಪ್ಪ ಮಾತನಾಡಿದ್ದಾರೆ.

ಕುಟುಂಬ ನಡೆಸಲು ತಮ್ಮ ಹೆಣ್ಣು ಮಕ್ಕಳಿಗೆ ಬ್ಯುಟಿಕ್ ಹಾಕಲು ನೆರವಾಗಿದ್ದ ನಿಕ್ಕಿ ಪೋಷಕರು:

ನಿಕ್ಕಿ ಭಾಟಿ ಹಾಗೂ ಕಾಂಚನಾ ಭಾಟಿಯನ್ನು 2016ರ ಡಿಸೆಂಬರ್ 10ರಂದು ಒಂದೇ ಮನೆಯ ಯುವಕರಾದ ವಿಪಿನ್ ಭಾಟಿ ಹಾಗೂ ರೋಹಿತ್ ಭಾಟಿಗೆ ಮದುವೆ ಮಾಡಿ ಕೊಡಲಾಗಿತ್ತು. ಈ ಹುಡುಗರಿಗೆ ಉದ್ಯೋಗವಿರಲಿಲ್ಲ, ತಮ್ಮ ತಂದೆಯ ದಿನಸಿ ಅಂಗಡಿಯನ್ನೇ ಇವರು ನಂಬಿದ್ದರು. ಹೀಗಾಗಿ ತಮ್ಮ ಇಬ್ಬರು ಮಕ್ಕಳಾದ ನಿಕ್ಕಿ ಭಾಟಿ ಹಾಗೂ ಕಾಂಚನಾ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಉದ್ದೇಶದಿಂದ ಅವರ ಪೋಷಕರು ಅವರಿಗೆ ಬ್ಯೂಟಿ ಪಾರ್ಲರ್‌ ತೆಗೆಯುವುದಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದರು. ಈ ಬ್ಯೂಟಿಪಾರ್ಲರ್‌ನ ತಮ್ಮ ವ್ಯವಹಾರವನ್ನು ಪ್ರಮೋಷನ್ ಮಾಡುವ ಉದ್ದೇಶದಿಂದಲೇ ನಿಕ್ಕಿ ಭಾಟಿ ಹಾಗೂ ಕಾಂಚನ ಅವರು ಮೇಕಪ್ ಮಾಡುವ ವಧುವರರಿಗೆ ಡ್ರೆಸ್ಸಿಂಗ್ ಮಾಡುವ ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಇದನ್ನು ಈ ಹೆಣ್ಣು ಮಕ್ಕಳ ಪತಿಯರಾದ ಕ್ರಮವಾಗಿ ವಿಪಿನ್ ಹಾಗೂ ರೋಹಿತ್ ವಿರೋಧಿಸುತ್ತಿದ್ದರು. ಆದರೆ ಅದರಿಂದ ಬರುತ್ತಿದ್ದ ಸಂಪಾದನೆಯ ಮೇಲೆ ಕಣ್ಣಿಟ್ಟಿದ್ದರು. ಈ ಸೋದರಿಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಷ್ಟಪಟ್ಟು ದುಡಿದು ಹಣ ಉಳಿತಾಯಕ್ಕೆ ಮುಂದಾದರೆ ಈ ಪಾಪಿ ಸೋದರರು ಅವರ ಸಂಪಾದನೆಯ ಹಣವನ್ನು ತಮ್ಮ ಶೋಕಿಗಾಗಿ ದುಂದುವೆಚ್ಚಕ್ಕಾಗಿ ಪೀಕುತ್ತಿದ್ದರು. ಇದು ಜಗಳಕ್ಕೆ ಕಾರಣವಾಯ್ತು ಎಂದು ನಿಕ್ಕಿ ಅವರ ಚಿಕ್ಕಪ್ಪ ಹೇಳಿದ್ದಾರೆ.

ನಿಕ್ಕಿಗೆ ಮಗ ಹುಟ್ಟಿದಾಗ ಬೈಕ್‌ಗೆ ಬೇಡಿಕೆ ಇಟ್ಟ ವಿಪಿನ್‌ಗಿತ್ತು ಹಲವು ಚಟ:

2016ರಲ್ಲಿ ಒಂದೇ ದಿನ ಇಬ್ಬರ ಮದುವೆ ನಡೆದಿತ್ತು, ಮದುವೆಯ ಸಮಯದಲ್ಲಿ ವರಕ್ಷಿಣೆಯಾಗಿ ಒಂದು ಟಾಪ್ ಎಂಡ್‌ ಸ್ಕಾರ್ಫಿಯೋ ಕಾರು 500 ಗ್ರಾಂಗೂ ಅಧಿಕ ಬಂಗಾರವೂ ಸೇರಿದಂತೆ ತಮಗೆ ಸಾಧ್ಯವಾದ ಎಲ್ಲವನ್ನು ಕುಟುಂಬ ನೀಡಿತ್ತು. ಇದಾದ ನಂತರ ನಿಕ್ಕಿಗೆ ಮಗು ಹುಟ್ಟಿದಾಗ ಬೈಕ್ ನೀಡುವಂತೆ ಬೇಡಿಕೆ ಇಡಲಾಗಿತ್ತು. ಈ ವೇಳೆ ರಾಯಲ್ ಎನ್‌ಫೀಲ್ಡ್ ಬೈಕನ್ನು ನಾವು ನೀಡಿದೆವು. ಆಗ ಅವರಿಗೆ ಅವರು ನಮ್ಮನ್ನು ಸುಲಭವಾಗಿ ವಂಚಿಸಬಹುದು ಕೇಳಿದೆಲ್ಲವನ್ನು ಪಡೆಯಬಹುದು ಎಂಬುದನ್ನು ಅರ್ಥಮಾಡಿಕೊಂಡರು. ಬರೀ ಇಷ್ಟೇ ಅಲ್ಲ ಕುಡಿತಕ್ಕೆ ದಾಸನಾಗಿದ್ದ ವಿಪಿನ್ ಮನೆಯಲ್ಲಿ ದಿನವೂ ಜಗಳ ಮಾಡುತ್ತಿದ್ದ. ಇದರ ಜೊತೆಗೆ ಆತನಿಗೆ ಅನೈತಿಕ ಸಂಬಂಧವೂ ಇತ್ತು. ಹೀಗಾಗಿ ಆತ ತನ್ನ ಸಂಬಂಧಕ್ಕೆ ಅಡ್ಡವಾಗಿದ್ದ ನಿಕ್ಕಿಯನ್ನು ಮುಗಿಸಬೇಕು ಎಂದು ನಿರ್ಧರಿಸಿದ್ದ. ಇದೇ ಕಾರಣಕ್ಕೆ ಆತ ಆಕೆಗೆ ಬೆಂಕಿ ಹಚ್ಚಿದ ಎಂದು ನಿಕ್ಕಿ ಚಿಕ್ಕಪ್ಪ ಹೇಳಿದ್ದಾರೆ.

ಉದ್ಯೋಗ ಇಲ್ಲದೇ ಹೆಂಡ್ತಿರ ದುಡಿಮೆಯಲ್ಲಿ ಜಾಲಿ ಮಾಡುತ್ತಿದ್ದ ಈ ಪಾಪಿ ಅಣ್ಣತಮ್ಮಂದಿರಿಗೆ ಬೇಡದ ಚಟಗಳೆಲ್ಲವೂ ಇದ್ದವು. ತಡರಾತ್ರಿ ಕಳೆದ ನಂತರ ಮನೆಗೆ ಬರುತ್ತಿದ್ದರು. ಪತ್ನಿಯರ ಪೋನ್‌ನ್ನು ಇಬ್ಬರೂ ರಿಸೀವ್ ಮಾಡ್ತಿರಲಿಲ್ಲ. ಮನೆಗೆ ಬಂದ ನಂತರ ಈ ಬಗ್ಗೆ ಪ್ರಶ್ನಿಸಿದರೆ ಹೊಡೆದಾಡುವುದಕ್ಕೆ ಶುರು ಮಾಡುತ್ತಿದ್ದರು. ಅವರು ಇತರ ಮಹಿಳೆಯರ ಜೊತೆ ಕಾಲ ಕಳೆಯುತ್ತಿದ್ದರು. ಇದನ್ನು ಪತ್ತೆ ಮಾಡಿದಾಗ ಅವರು ನಮ್ಮನ್ನೇ ಹೊಡೆಯುತ್ತಿದ್ದರು, ನಮ್ಮ ರಾತ್ರಿಗಳೆಲ್ಲವೂ ಅಳುವುದರಲ್ಲೇ ಕಳೆದು ಹೋಗುತ್ತಿತ್ತು ಎಂದು ನಿಕ್ಕಿ ಸೋದರಿ ಕಾಂಚನಾ ಹೇಳಿದ್ದಾರೆ.

ನಿಕ್ಕಿ ಅಪ್ಪ ಚಲಾಯಿಸುತ್ತಿದ್ದ ಮರ್ಸಿಡಿಸ್ ಮೇಲೆ ಕಣ್ಣು:

ನಿಕ್ಕಿಯ ತಂದೆ ಭಿಕಾರಿ ಸಿಂಗ್ ಪಯ್ಲಾ ಅವರು ಮರ್ಸಿಡಿಸ್ ಬೇಂಜ್ ಕಾರನ್ನು ಹೊಂದಿದ್ದರು. ಇದರ ಮೇಲೆ ಕಣ್ಣಿಟ್ಟಿದ್ದ ವಿಪಿನ್ ಅದನ್ನು ಕೊಡುವಂತೆ ವರ್ಷಗಳಿಂದ ಕೇಳುತ್ತಿದ್ದ ಕಾರು ಕೊಡಿ ಇಲ್ಲವೇ 60 ಲಕ್ಷ ಹಣ ಕೊಡಿ ಎಂದು ಆತ ಹೇಳುತ್ತಿದ್ದ ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ. ಈ ಜನ್ಮಾಷ್ಟಮಿಯಂದು ವಿಪಿನ್ ನಿಕ್ಕಿ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಈ ಬಗ್ಗೆ ಆಕೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದಾಗ, ಆಕೆಯ ತಂದೆ ಮತ್ತು ಇತರ ಸಂಬಂಧಿಕರು ಅಲ್ಲಿಗೆ ಹೋಗಿ ಸೋದರಿಯರನ್ನು ಮನೆಗೆ ಕರೆತಂದಿದ್ದರು. ಈ ವೇಳೆ ಕ್ಷಮೆ ಕೇಳಿದ ವಿಪಿನ್ ಹಾಗೂ ಸೋದರ ಈ ಘಟನೆ ಮತ್ತೆ ಸಂಭವಿಸುವುದಿಲ್ಲ ಎಂಬ ಭರವಸೆ ನೀಡಿ ಸೋದರಿಯರನ್ನು ಮತ್ತೆ ಕರೆತಂದಿದ್ದರು. ಆದರೆ ನಂತರವೂ ಅವರ ವರ್ತನೆ ಹೀಗೆಯೇ ಮುಂದುವರೆದಿತ್ತು ಎಂದು ಚಿಕ್ಕಪ್ಪ ಹೇಳಿದ್ದಾರೆ.

ಅಂದು ಆಗಿದ್ದೇನು?

ಈ ವರದಕ್ಷಿಣೆ ಕಿರುಕುಳದ ಕಾರಣಕ್ಕೆ ಶುರುವಾದ ಗಲಾಟೆ ಗುರುವಾರ ಆಗಸ್ಟ್ 21ರಂದು ವಿಕೋಪಕ್ಕೆ ತಿರುಗಿದ್ದು, ವಿಪಿನ್ ಹಾಗೂ ಆತನ ತಾಯಿ ದಯಾ ಇಬ್ಬರು ಸೇರಿ ನಿಕ್ಕಿ ಭಾಟಿ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ ನಂತರ ಆಕೆಯ ಮೇಲೆ ಏನೋ ಸುರಿದು ಲೈಟರ್ ಹೊತ್ತಿಸಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಶೇಕಡಾ 70 ರಷ್ಟು ಸುಟ್ಟಗಾಯಗಳಾದ ನಿಕ್ಕಿ ಭಾಟಿ ಅವರನ್ನು ನೆರೆಹೊರೆಯ ಮನೆಯವರು ಮೊದಲಿಗೆ ಸಮೀಪದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಲ್ಲಿಂದ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಲಾಗಿತ್ತು. ಆದರೆ ಮಾರ್ಗಮಧ್ಯೆಯೇ ನಿಕ್ಕಿ ಅವರು ಕೊನೆಯುಸಿರೆಳೆದಿದ್ದರು.

ಆದರೆ ಈ ಘಟನೆಯ ಬೀಭತ್ಸ ದೃಶ್ಯಾವಳಿಗಳು ಅನೇಕರನ್ನು ರಕ್ತಕುದಿಯುವಂತೆ ಮಾಡಿತ್ತು. ಬೆಂಕಿ ಹತ್ತಿಕೊಂಡಿದ್ದ ನಿಕ್ಕಿ ಭಾಟಿ ಬೆಂಕಿಜ್ವಾಲೆಯಂತೆ ಮೆಟ್ಟಿಲ್ಲಿಳಿದು ನಡೆದುಕೊಂಡು ಬರುತ್ತಿರುವ ದೃಶ್ಯ ನೋಡಿದವರ ಹೃದಯ ಬಿರಿಯುವಂತೆ ಮಾಡಿತ್ತು. ಇದರ ಜೊತೆಗೆ ಬೆಂಕಿ ಹಚ್ಚುವುದಕ್ಕೂ ಮೊದಲು ಆಕೆಗೆ ಗಂಡ ಹಾಗೂ ಅತ್ತೆ ಆಕೆಯ ಕೂದಲನ್ನು ಹಿಡಿದು ಎಳೆದಾಡಿ ಹಲ್ಲೆ ಮಾಡುತ್ತಿರುವ ದೃಶ್ಯವೂ ನೋಡುಗರ ಎದೆಯೊಡೆಯುವಂತೆ ಮಾಡಿತ್ತು. ಜನ ಪೊಲೀಸ್ ಠಾಣೆಯ ಮುಂದೆ ಸೇರಿ ನಿಕ್ಕಿಗೆ ನ್ಯಾಯ ಕೊಡಿಸುವಂತೆ ಪ್ರತಿಭಟನೆ ನಡೆಸಿದರು.

ಅಪ್ಪನೇ ಲೈಟರ್‌ನಿಂದ ಅಮ್ಮನಿಗೆ ಬೆಂಕಿ ಹಚ್ಚಿದರು:

ನಿಕ್ಕಿ ಭಾಟಿ ಅವರ ಪುಟ್ಟ ಮಗುವಿನೆ ಮುಂದೆಯೇ ಈ ಕೃತ್ಯ ನಡೆದಿತ್ತು. ಘಟನೆಯನ್ನು ಕಣ್ಣಾರೆ ಕಂಡು ಬೆದರಿದ ಪುಟ್ಟ ಮಗು ತನ್ನ ಕಣ್ಣೆದುರೇ ನಡೆದ ಅಮ್ಮನ ಕೊಲೆಯನ್ನು ಇಂಚಿಂಚಾಗಿ ಅಲ್ಲಿದ್ದವರ ಬಳಿ ನಡುಗುವ ದನಿಯಿಂದಲೇ ಹೇಳಿದ್ದು, ನೋಡುಗರ ಕಣ್ಣಾಲಿ ತೇವಗೊಳ್ಳುವಂತೆ ಮಾಡಿತು. ಅಮ್ಮನನ್ನು ಥಳಿಸಿದರು. ನಂತರ ಅಪ್ಪ ಆಕೆಯ ಮೇಲೆ ಏನೋ ಸುರಿದು ಲೈಟರ್‌ನಿಂದ ಬೆಂಕಿ ಹಚ್ಚಿದರು ಎಂದು ಆ ಕಂದ ಅಳುತ್ತಲೇ ಹೇಳಿದ್ದನು ಕೇಳಿ ಅಲ್ಲಿದ್ದ ಕುಟುಂಬ ಸದಸ್ಯರು ಬಂಧುಗಳು ಕಣ್ಣೀರಿಟ್ಟಿದ್ದಾರೆ.

ತಮ್ಮ ಮಗಳ ದಾರುಣ ಸಾವಿನ ಬಗ್ಗೆ ಮಾತನಾಡಿದ ನಿಕ್ಕಿ ತಂದೆ ಭಿಕಾರಿ ಸಿಂಗ್ ಪಾಯ್ಲಾ ಆರೋಪಿಗೆ ಗುಂಡಿಕ್ಕುವಂತೆ ಹೇಳಿದ್ದಾರೆ. ತನ್ನ ಮಗಳನ್ನು ಕೊಂದವರನ್ನು ಸುಮ್ಮನೇ ಬಿಡಬಾರದು ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಅವರ ಮನೆಯನ್ನು ಧ್ವಂಸ ಮಾಡಬೇಕು. ನನ್ನ ಮಗಳು ಬ್ಯೂಟಿಪಾರ್ಲರ್ ನಡೆಸುತ್ತಾ ತನ್ನ ಮಗನನ್ನು ಸಾಕುತ್ತಿದ್ದಳು. ಈ ಕೃತ್ಯದಲ್ಲಿ ಇಡೀ ಕುಟುಂಬವೇ ಭಾಗಿಯಾಗಿದೆ ಎಂದು ಹೇಳಿದ್ದರು. ಆದರೆ ಇದಾದ ನಂತರ ಪೊಲೀಸ್ ಕಸ್ಟಡಿಯಿಂದ ವಿಪಿನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಆತನ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

ಬೆಂಕಿ ಹಚ್ಚುವ ಮೊದಲು ನಿಕ್ಕಿಯನ್ನು ಸುಡಲು ಆಕೆಯ ಮೈಗೆ ಸುರಿದ ಉರಿಯಬಲ್ಲ ದ್ರವವನ್ನು ಹೊಂದಿರುವ ಬಾಟಲಿಯನ್ನು ಮಹಜರು ಮಾಡಲು ಇಂದು ಆರೋಪಿ ವಿಪಿನ್‌ನನ್ನು ಪೊಲೀಸರು ಆತನ ಮನೆಗೆ ಕರೆದೊಯ್ದರು. ಈ ವೇಳೆ ಆತ ಪೊಲೀಸರ ಪಿಸ್ತೂಲ್ ಕಸಿದುಕೊಂಡು ಗುಂಡು ಹಾರಿಸಿದ, ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆತನ ಕಾಲಿಗೆ ಗುಂಡಿಕ್ಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಹೇಳಿದ್ದಾರೆ. ಆದರೆ ಘಟನೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿಪಿನ್ ನಾನು ಏನು ಮಾಡಲಿಲ್ಲ, ಆಕೆ ಅವಳಾಗಿಯೇ ಸತ್ತಳು, ಗಂಡ ಹೆಂಡತಿಯ ಮಧ್ಯೆ ಎಲ್ಲಾ ಕಡೆ ಜಗಳ ನಡೆಯುತ್ತದೆ. ಇದು ದೊಡ್ಡ ವಿಷಯ ಅಲ್ಲ ಎಂದು ಹೇಳಿದ್ದಾನೆ.

ಇದನ್ನೂ ಓದಿ: Summon Modeನಲ್ಲಿದ್ದ ಟಾಟಾ ಹ್ಯಾರಿಯರ್‌ ಇವಿ ಕಾರು ಇದಕ್ಕಿದ್ದಂತೆ ರಿವರ್ಸ್ ಬಂದು ಮಾಲೀಕ ಸಾವು

ಇದನ್ನೂ ಓದಿ: ಹೈದರಾಬಾದ್‌ನಲ್ಲಿ ಫ್ಲೈಓವರ್‌ ಕೆಳಗೆ ಬಾಕಿಯಾದ ಗಣೇಶ: ಮುಂಬೈನಲ್ಲಿ ಲಾಲ್‌ಬಾಗ್ಚ ರಾಜನ ಅನಾವರಣ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ