ಗಾಂಧಿಗಳಿಗೆ ಎಸ್‌ಪಿಜಿ ಭದ್ರತೆ ಹೋಗಿದ್ದೇಕೆ? ಸರ್ಕಾರ ಕೊಟ್ಟ ಕಾರಣಗಳಿವು!

By Kannadaprabha News  |  First Published Nov 9, 2019, 8:38 AM IST

ಗಾಂಧಿಗಳಿಗೆ ಎಸ್ ಪಿಜಿ ಶಾಕ್ | ಸೋನಿಯಾ,ರಾಹುಲ್, ಪ್ರಿಯಾಂಕಾಗೆ ಇನ್ನು ಸಿಆರ್ ಪಿಎಫ್ ಝಡ್+ಭದ್ರತೆ | ಗಾಂಧಿಗಳಿಗೆ ಎಸ್‌ಪಿಜಿ ಭದ್ರತೆ ಹೋಗಿದ್ದೇಕೆ? ಸರ್ಕಾರ ಕೊಟ್ಟಿದೆ ಈ ಕಾರಣಗಳನ್ನು. 


ನವದೆಹಲಿ (ನ. 09):  ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ನೀಡಲಾಗಿದ್ದ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆ ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಾಹ್ನ ಹಿಂಪಡೆದಿದೆ.

ಇದರ ಬದಲು ಅವರಿಗೆ ತಕ್ಷಣದಿಂದಲೇ ಸಿಆರ್‌ಪಿಎಫ್ ನೀಡುವ ‘ಝಡ್+’ ಭದ್ರತೆ ನೀಡಲಾಗಿದೆ. ಗಾಂಧೀ ಕುಟುಂಬಕ್ಕೆ ನೇರ ಅಪಾಯ ಇಲ್ಲ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ಕಳೆದ 28  ವರ್ಷದಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬವು ಎಸ್‌ಪಿಜಿ ಭದ್ರತೆಯಿಂದ ವಂಚಿತವಾಗಿದೆ.

Tap to resize

Latest Videos

undefined

ರಾಜ್ಯದಲ್ಲಿ ಭಾರೀ ಕಟ್ಟೆಚ್ಚರ: ಜನರಿಗೆ ಪೊಲೀಸರ ಸೂಚನೆಗಳೇನು?

ಪ್ರಧಾನಿ ನರೇಂದ್ರ ಮೋದಿ ಅವರೊ ಬ್ಬರೇ ಇನ್ನು ಮುಂದೆ ದೇಶದಲ್ಲಿ ಎಸ್‌ಪಿಜಿ ಕಮಾಂಡೋಗಳಿಂದ ಭದ್ರತೆ ಪಡೆಯುವ ವ್ಯಕ್ತಿಯಾಗಲಿದ್ದಾರೆ. ಕಳೆದ ಆಗಸ್ಟ್‌ನಲ್ಲಷ್ಟೇ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ ಭದ್ರತೆಯನ್ನೂ ಸರ್ಕಾರ ಹಿಂಪಡೆದಿತ್ತು. ಈ ಹಿಂದೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ನೀಡಿದ ಎಸ್‌ಪಿಜಿ ಭದ್ರತೆ ಯನ್ನೂ ಹಿಂಪಡೆಯಲಾಗಿತ್ತು.

‘ಕಾಂಗ್ರೆಸ್ ಪಕ್ಷ ಈ ತೀರ್ಮಾನವನ್ನು ಖಂಡಿಸಿದೆ. ‘ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ವೈಯಕ್ತಿಕ ದ್ವೇಷಕ್ಕೆ ಇಳಿದು ಇಂಥ ಹೇಯ ನಿರ್ಧಾರ ಕೈಗೊಂಡಿದ್ದಾರೆ. ಉಗ್ರರಿಗೆ ಬಲಿ ಯಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಕುಟುಂಬದವರ ಪ್ರಾಣವನ್ನು ಅವರು ಅಪಾಯದಲ್ಲಿ ಇರಿಸಿದ್ದು, ಪ್ರಾಣದೊಂದಿಗೆ ಚೆಲ್ಲಾಟ ಆಡುತ್ತಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್ ಹಾಗೂ ಕೆ.ಸಿ. ವೇಣುಗೋಪಾಲ್ ವಾಗ್ದಾಳಿ ನಡೆಸಿದ್ದಾರೆ. ಗೃಹ ಸಚಿವ ಅಮಿತ್ ಶಾ ನಿವಾಸದ ಮುಂದೆ ಕಾಂಗ್ರೆಸ್ ಕಾರ‌್ಯಕರ್ತರು ಪ್ರತಿಭಟನೆ ಕೂಡ ನಡೆಸಿದರು.

ಗಾಂಧಿ ಕುಟುಂಬಕ್ಕೆ ಇನ್ನು 300 ಮಂದಿ ರಕ್ಷಣೆ:

ಇನ್ನು ಸಿಆರ್‌ಪಿಎಫ್‌ನ ಝಡ್+ ಭದ್ರತೆ ಪಡೆಯಲಿರುವ ಸೋನಿಯಾ, ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ತಲಾ ೧೦೦ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಭದ್ರತೆ ಪಡೆಯಲಿದ್ದಾರೆ. ಅಂದರೆ ಈ ಮೂವರೂ ಗಾಂಧಿಗಳ ರಕ್ಷಣೆಗೆ 300 ಸಿಆರ್‌ಪಿಎಫ್ ಸಿಬ್ಬಂದಿ ಹಗಲಿರುಳು ಶ್ರಮಿಸಲಿದ್ದಾರೆ.

ಎಸ್‌ಪಿಜಿ ಭದ್ರತೆಯಲ್ಲೇನಿರುತ್ತದೆ?:

ಎಸ್‌ಪಿಜಿ ಭದ್ರತೆಯಡಿ ರಕ್ಷಣೆಗೆ ಒಳಪಟ್ಟವರು ಭದ್ರತಾ ಸಿಬ್ಬಂದಿ, ಹೈಟೆಕ್ ಬುಲೆಟ್ ಪ್ರೂಫ್ ವಾಹನಗಳು, ಜಾಮರ್‌ಗಳು ಹಾಗೂ ಆ್ಯಂಬುಲೆನ್ಸ್‌ನೊಂದಿಗೆ ದೇಶಾದ್ಯಂತ ಸಂಚರಿಸಲು ಅವಕಾಶವಿರುತ್ತದೆ.

ಇಂದಿರಾ ಹತ್ಯೆ ಬಳಿಕ ಬಂದಿದ್ದ ಎಸ್‌ಪಿಜಿ ಕಾಯ್ದೆ: 1948 ರ ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರು ಅಂಗರಕ್ಷಕರಿಂದಲೇ ಹತ್ಯೆಯಾದ ನಂತರ ಪ್ರಧಾನಿ ಅಂಗರಕ್ಷಣೆಗೆ ಪ್ರತ್ಯೇಕ ಪಡೆ ಇರಬೇಕು ಎಂಬ ಚಿಂತನೆ ಆರಂಭವಾಗಿತ್ತು. ಹಾಗಾಗಿ 1988 ರಲ್ಲಿ ಎಸ್‌ಪಿಜಿ ಕಾಯ್ದೆಯನ್ನು ಪಾಸು ಮಾಡಲಾಗಿತ್ತು. ಭಾರತದ ಪ್ರಧಾನಿ ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್‌ಪಿಜಿ ಭದ್ರತೆ ನೀಡಬೇಕು ಎಂಬುದು ಕಾಯ್ದೆಯಲ್ಲಿತ್ತು. ಆದರೆ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ, ಮಾಜಿ ಪ್ರಧಾನಿಗಳ ಕುಟುಂಬದ ಸದಸ್ಯರಿಗೂ ಎಸ್‌ಪಿಜಿ ಭದ್ರತೆ ನೀಡಬೇಕು ಎಂದು ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಹೀಗಾಗಿ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಿಗೆ ಎಸ್‌ಪಿಜಿ ಭದ್ರತೆ ಲಭಿಸಿತ್ತು. ಎಸ್‌ಪಿಜಿ 3000 ಭದ್ರತಾ ಸಿಬ್ಬಂದಿಯನ್ನು ಹೊಂದಿದ್ದು, ಭಯೋತ್ಪಾದಕ ದಾಳಿಯ ವೇಳೆಯೂ ಕಾರ್ಯಾಚರಣೆ ನಡೆಸುತ್ತದೆ.

ಗಾಂಧಿಗಳಿಗೆ ಎಸ್‌ಪಿಜಿ ಭದ್ರತೆ ಹೋಗಿದೇಕೆ?

- ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಹಲವಾರು ಬಾರಿ ಎಸ್‌ಪಿಜಿ ನೀಡುವ ‘ಬುಲೆಟ್ ಪ್ರೂಫ್ ಕಾರು’ ಬಳಸದೇ ಸುತ್ತಾಡಿದ್ದಾರೆ.

-  ವಿದೇಶ ಪ್ರಯಾಣಗಳಿಗೆ ಹೋಗುವಾಗ ಕೂಡ ಇವರು ಬಹುತೇಕ ಸಲ ಎಸ್‌ಪಿಜಿ ಭದ್ರತಾ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿಲ್ಲ.

-‘ಎಸ್‌ಪಿಜಿ ಸಿಬ್ಬಂದಿ ಗುಪ್ತಚರಂತೆ ಕಾರ‌್ಯನಿರ್ವಹಿಸಿ ನಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ’ ಎಂಬ ಪ್ರಿಯಾಂಕಾ ಆರೋಪ. ಆದರೆ ಇದಕ್ಕೆ ಎಸ್‌ಪಿಜಿ ನಕಾರ

- ರಾಹುಲ್ ದಿಲ್ಲಿಯಲ್ಲಿ 2915 ರಿಂದ 2019 ರ ಮೇವರೆಗೆ 1892 ಬಾರಿ, ಎಸ್‌ಪಿಜಿಯ ಬುಲೆಟ್ ಪ್ರೂಫ್ ಕಾರಿಲ್ಲದೇ ಸಂಚರಿಸಿದ್ದರು.

- 2019 ರ ಜೂನ್‌ವರೆಗಿನ ಅಂಕಿ-ಆಂಶಗಳ ಪ್ರಕಾರ 247 ಬಾರಿ ರಾಹುಲ್ ಅವರು ದಿಲ್ಲಿ ಹೊರಗಡೆ ಗುಂಡು ನಿರೋಧಕ ಕಾರು ಇಲ್ಲದೇ ಸಂಚರಿಸಿದ್ದಾರೆ.

- ರಾಹುಲ್ 2005 ರಿಂದ 2014 ರವರೆಗೂ 18 ಬಾರಿ ದೇಶದ ವಿವಿಧೆಡೆ ಬುಲೆಟ್ ಪ್ರೂಫ್ ಕಾರಿನಲ್ಲಿ ಸಂಚರಿಸಿಲ್ಲ.

- ರಾಹುಲ್ 1991 ರಿಂದ ಅವರು 156 ವಿದೇಶ ಪ್ರವಾಸ ಕೈಗೊಂಡಿದ್ದು, ೧೪೩ ಬಾರಿ ಎಸ್‌ಪಿಜಿ ಭದ್ರತೆ ಪಡೆದಿರಲಿಲ್ಲ.

- ಸೋನಿಯಾ ಅವರು 2015 ರಿಂದ 2019 ರ ಮೇವರೆಗೆ 50 ಬಾರಿ ಎಸ್‌ಪಿಜಿ ಬುಲೆಟ್ ಪ್ರೂಫ್ ಕಾರಲ್ಲಿ ಸಂಚರಿಸಿರಲಿಲ್ಲ.

- 5 ವರ್ಷದಲ್ಲಿ ಸೋನಿಯಾ 13 ಬಾರಿ ದೇಶದ ವಿವಿಧೆಡೆ ಎಸ್‌ಪಿಜಿಗೆ ತಿಳಿಸದೇ ಸಂಚರಿಸಿದ್ದರು.

- 2015 ರಿಂದ ಎಸ್‌ಪಿಜಿ ಭದ್ರತೆ ಇಲ್ಲದೇ 24 ಬಾರಿ ಸೋನಿಯಾ ವಿದೇಶಯಾನ ಕೈಗೊಂಡಿದ್ದರು

-  ಪ್ರಿಯಾಂಕಾ ಅವರು 2015 ರಿಂದ 2019 ರ ಮೇವರೆಗೆ 339 ಬಾರಿ, ದಿಲ್ಲಿಯಲ್ಲಿ 64 ಬಾರಿ ಎಸ್‌ಪಿಜಿ ಭದ್ರತೆ ಪಡೆದಿರಲಿಲ್ಲ.

- 1991 ರಿಂದ ಪ್ರಿಯಾಂಕಾ 99 ಬಾರಿ ವಿದೇಶಯಾತ್ರೆ. 21 ಬಾರಿ ಮಾತ್ರ ಎಸ್‌ಪಿಜಿ ಭದ್ರತೆಯೊಂದಿಗೆ ವಿದೇಶಯಾನ.

-  ಕೆಲವು ಬಾರಿ ಕೊನೇ ಕ್ಷಣದಲ್ಲಿ ಪ್ರವಾಸ ಮಾಡುವ ಪ್ರಿಯಾಂಕಾ. ಆಗ ಎಸ್‌ಪಿಜಿಗೆ ಭದ್ರತೆ ನೀಡಲಾಗದು.

"

click me!