ಮಹಾ ಹೈ ಡ್ರಾಮಾ : ಶಿವಸೇನೆ ಭಾರೀ ಕನಸಿಗೆ ಮುಖಭಂಗ

By Kannadaprabha News  |  First Published Nov 12, 2019, 7:29 AM IST

ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಶಿವಸೇನೆ, ಸರ್ಕಾರ ರಚನೆಗೆ ಆಸಕ್ತಿ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿತಾದರೂ, ಎನ್‌ಸಿಪಿ-ಕಾಂಗ್ರೆಸ್ ಬೆಂಬಲದ ಪತ್ರವನ್ನು ಸಲ್ಲಿಸಲು ಅದು ವಿಫಲವಾಗಿದೆ. 


"

ಮುಂಬೈ [ನ.12]: ಮಹಾರಾಷ್ಟ್ರದಲ್ಲಿ ಇನ್ನೇನು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರ ರಚನೆ ಆಗೇಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೊಂದು ‘ಹೈಡ್ರಾಮಾ’   ನಡೆದಿದೆ. ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡಿರುವ ಶಿವಸೇನೆ, ಸರ್ಕಾರ ರಚನೆಗೆ ಆಸಕ್ತಿ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿತಾದರೂ, ಎನ್‌ಸಿಪಿ-ಕಾಂಗ್ರೆಸ್ ಬೆಂಬಲದ ಪತ್ರವನ್ನು ಸಲ್ಲಿಸಲು ಅದು ವಿಫಲವಾಗಿದೆ. ಮತ್ತೊಂದೆಡೆ ಬೆಂಬಲ ಪತ್ರ ಸಲ್ಲಿಸಲು ಹೆಚ್ಚಿನ ಸಮಯ ನೀಡಲು ರಾಜ್ಯಪಾಲರ ಕೂಡಾ ನಿರಾಕರಿಸಿದ್ದಾರೆ. ಹೀಗಾಗಿ ಸರ್ಕಾರ ರಚನೆಯ ಭಾರೀ ಕನಸು ಕಂಡಿದ್ದ ಶಿವಸೇನೆಗೆ ಮುಖಭಂಗವಾಗಿದೆ. 

Tap to resize

Latest Videos

undefined

ಇದರ ಬೆನ್ನಲ್ಲೇ, ರಾಜ್ಯಪಾಲ ಕೋಶಿಯಾರಿ ಅವರು, 3ನೇ ಅತಿ ದೊಡ್ಡ ಪಕ್ಷವಾದ ಶರದ್ ಪವಾರ್‌ರ ಎನ್‌ಸಿಪಿಗೆ ಆಹ್ವಾನ ನೀಡಿದ್ದು, ಮಂಗಳವಾರ ರಾತ್ರಿ 8.30 ರೊಳಗೆ ಈ ಕುರಿತು ಹಕ್ಕು ಮಂಡಿಸುವಂತೆ ಗಡುವು ನೀಡಿದ್ದಾರೆ. ಮಂಗಳವಾರ ಎನ್‌ಸಿಪಿ ನಾಯಕರ ಜೊತೆ ಕಾಂಗ್ರೆಸ್ ಇನ್ನೊಂದು ಸುತ್ತಿನ ಮಾತುಕತೆ ನಡೆಸಲಿದ್ದು, ಅಲ್ಲಿ ಸರ್ಕಾರ ರಚನೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಪ್ರಖರ ಹಿಂದುತ್ವ ವಾದ ಕೈಬಿಡಬೇಕು, ಎನ್‌ಡಿಎ ಮೈತ್ರಿಕೂಟದಿಂದ ಪೂರ್ಣ ಹೊರಕ್ಕೆ ಬರಬೇಕು, ಕಾಂಗ್ರೆಸ್- ಎನ್‌ಸಿಪಿ ಸಿದ್ಧಾಂತಗಳಿಗೆ ಪೆಟ್ಟು ನೀಡುವ ಯಾವುದೇ ಹೇಳಿಕೆ, ನಿರ್ಧಾರ ತೆಗೆದುಕೊಳ್ಳಬಾರದು ಎಂಬ ತಮ್ಮ ಬೇಡಿಕೆಗೆ ಶಿವಸೇನೆ ಒಪ್ಪಿದ್ದೇ ಆದಲ್ಲಿ ಸರ್ಕಾರ ಬೆಂಬಲಿಸಲು ಕಾಂಗ್ರೆಸ್- ಎನ್‌ಸಿಪಿ ಒಪ್ಪಿಕೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಮಂಗಳವಾರದ ಸಭೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಾಂಗ್ರೆಸ್ ಮೀನಮೇಷ: ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಮುಖ್ಯವಾಗಿರುವ ಕಾಂಗ್ರೆಸ್, ಸೋಮವಾರ ಯಾವುದೇ ನಿರ್ಧಾರ ಕೈಗೊಳ್ಳಲು ವಿಫಲವಾಯಿತು. ಹೊಸ ಸಂಭಾವ್ಯ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಪಕ್ಷದ ಹಲವು ಹಿರಿಯ ನಾಯಕರು ಮತ್ತು ಮಹಾರಾಷ್ಟ್ರದ ನಾಯಕರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸುದೀರ್ಘ ಸಮಾಲೋಚನೆ ನಡೆಸಿದರಾದರೂ, ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸಲಿಲ್ಲ. 

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೇ ಸೋನಿಯಾ ಗಾಂಧಿ ಅವರಿಗೆ ಕರೆ ಮಾಡಿ, ಸರ್ಕಾರ ರಚನೆಗೆ ಬೆಂಬಲ ಕೋರಿದರಾದರೂ, ‘ಶಾಸಕರ ಜತೆ ಮಾತನಾಡಿ ನಿರ್ಣಯ ತಿಳಿಸುವೆ’ ಎಂದಷ್ಟೇ ಸೋನಿಯಾ ಹೇಳಿದರು. ಬೆಂಬಲಕ್ಕೆ ಹಿಂದೇಟು ಹಾಕಿದರು ಎಂದು ಮೂಲಗಳು ಹೇಳಿವೆ. ಜೊತೆಗೆ ಸಭೆ ಬಳಿಕ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲೂ ಮಂಗಳವಾರ ಎನ್‌ಸಿಪಿ ಜೊತೆಗೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ, ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳುವ ಮೂಲಕ ಶಿವಸೇನೆಯನ್ನು ತುದಿಗಾಲಲ್ಲಿ ನಿಲ್ಲಿಸಿದೆ.

ಪವಾರ್ ನಿಗೂಢ: ಈ ನಡುವೆ, ಕಾಂಗ್ರೆಸ್-ಶಿವಸೇನೆ ನಡುವೆ ಮಧ್ಯಸ್ಥಿಕೆದಾರನಂತೆ ಕೆಲಸ ಮಾಡುತ್ತಿರುವ ಶರದ್ ಪವಾರ್ ಅವರನ್ನು ಕೂಡ ಉದ್ಧವ್ ಠಾಕ್ರೆ ಭೇಟಿ ಮಾಡಿ, ಬೆಂಬಲ ಕೋರಿದರು. ಅವರು ಕೂಡ ಯಾವುದೇ ಬದ್ಧತೆಯನ್ನು ವ್ಯಕ್ತಪಡಿಸದೇ, ‘ಕಾಂಗ್ರೆಸ್ ಜತೆ ಚರ್ಚಿಸಿದ ನಂತರವಷ್ಟೇ ಅಂತಿಮ ನಿಲುವು ತಿಳಿಸುತ್ತೇವೆ’ ಎಂದಿದ್ದಾರೆ. ಹೀಗಾಗಿ ಸರ್ಕಾರ ರಚನೆಯ ಗೊಂದಲ ಮುಂದುವರಿದಿದೆ.

SPG ಭದ್ರತೆ ವಾಪಾಸ್ ಪಡೆದ ಬಳಿಕ ಗಾಂಧಿ ಕುಟುಂಬಕ್ಕೆ CRPF ಭದ್ರತೆ!...

ರಾಜ್ಯಪಾಲರ ತಣ್ಣೀರು: ರಾಜ್ಯಪಾಲರ ಸೂಚನೆ ಅನುಸಾರ ಸರ್ಕಾರ ರಚನೆಗೆ ಆಸಕ್ತಿ ವ್ಯಕ್ತಪಡಿಸಿ ಶಿವಸೇನೆಯು, ಗವರ್ನರ್ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಸೋಮವಾರ ಸಂಜೆ 7.30ರ ಗಡುವಿನೊಳಗೆ ಭೇಟಿ ಮಾಡಿತು. ಯುವ ಶಿವಸೇನೆ ಅಧ್ಯಕ್ಷ ಆದಿತ್ಯ ಠಾಕ್ರೆ ಹಾಗೂ ಶಿವಸೇನೆ ಶಾಸಕಾಂಗ ಪಕ್ಷದ ನಾಯಕ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಭೇಟಿ ನಡೆಯಿತು. ಈ ವೇಳೆ ಸರ್ಕಾರ ರಚನೆಗೆ ಆಸಕ್ತಿ ವ್ಯಕ್ತಪಡಿಸಿದ ಆದಿತ್ಯ ಅವರು, ಶಿವಸೇನೆಯ 56 ಶಾಸಕರ ಬೆಂಬಲ ಪತ್ರವನ್ನು ಮಾತ್ರ ನೀಡಿದರು. 

‘ಕಾಂಗ್ರೆಸ್-ಎನ್‌ಸಿಪಿಯ ತಾತ್ವಿಕ ಬೆಂಬಲ ನಮಗೆ ಇದೆ. ಆದರೆ ಆ ಎರಡೂ ಪಕ್ಷಗಳ ಬೆಂಬಲ ಪತ್ರವನ್ನು ಸಲ್ಲಿಸಲು ಇನ್ನೂ 3 ದಿನಗಳ ಕಾಲಾವಕಾಶ ನೀಡಿ’ ಎಂದು ಕೋರಿದರು.

ಆದರೆ ಇದಕ್ಕೆ ಮನ್ನಣೆ ನೀಡದ ಕೋಶಿಯಾರಿ,  ಮಯಾವಕಾಶ ನೀಡಲು ಆಗದು’ ಎಂದು  ಸ್ಪಷ್ಟಪಡಿಸಿದರು. ಈ ಬಗ್ಗೆ ಕೋಶಿಯಾರಿ ಅವರೇ ಒಂದು ಪತ್ರಿಕಾ ಹೇಳಿಕೆಯನ್ನು ರಾಜಭವನದ ಮೂಲಕ ಮಾಡಿಸಿದರು. ಇದರೊಂದಿಗೆ ಶಿವಸೇನೆಯ ನೇತೃತ್ವದಲ್ಲಿ ಸರ್ಕಾರ ರಚನೆ ಆಗಬಹುದು ಎಂಬ ನಿರೀಕ್ಷೆ ಹುಸಿಯಾಯಿತು.

click me!