6 ದೇಶೀ ಸಬ್‌ಮರೀನ್‌ ನಿರ್ಮಾಣಕ್ಕೆ ನಿರ್ಧಾರ!

By Kannadaprabha NewsFirst Published Jun 5, 2021, 9:06 AM IST
Highlights

* ಬರಲಿವೆ 6 ದೇಶೀ ಸಬ್‌ಮರೀನ್‌

* 43,000 ಕೋಟಿ ವೆಚ್ಚದಲ್ಲಿ 12 ವರ್ಷದಲ್ಲಿ ನಿರ್ಮಾಣ

* ವಿದೇಶಿ ಕಂಪನಿಗಳ ಸಹಯೋಗದಲ್ಲಿ ದೇಶದಲ್ಲೇ ತಯಾರಿ

* ಯೋಜನೆಗೆ ರಕ್ಷಣಾ ಖರೀದಿ ಮಂಡಳಿ ಅನುಮೋದನೆ

ನವದೆಹಲಿ(ಜೂ.05): ಜಲಗಡಿಯಲ್ಲಿ ನೆರೆಯ ಚೀನಾದ ಸಾಮರ್ಥ್ಯ ವೃದ್ದಿ ಮತ್ತು ಸಾಮ್ರಾಜ್ಯ ವಿಸ್ತರಣಾ ತಂತ್ರಗಳು ಹೆಚ್ಚಾದ ಬೆನ್ನಲ್ಲೇ, ದೇಶೀಯವಾಗಿಯೇ 6 ಸಾಂಪ್ರದಾಯಿಕ ಸಬ್‌ಮರೀನ್‌ಗಳನ್ನು ನಿರ್ಮಿಸುವ ಮಹತ್ವದ ಯೋಜನೆಗೆ ರಕ್ಷಣಾ ಖರೀದಿ ಮಂಡಳಿ ಶುಕ್ರವಾರ ತನ್ನ ಅನುಮೋದನೆ ನೀಡಿದೆ.

ಭಾರತೀಯ ನೌಕಾ ಪಡೆಯನ್ನು ನೆರೆಯ ದೇಶಗಳ ನೌಕಾ ಸಾಮರ್ಥ್ಯಕ್ಕೆ ಅನುಗುಣವಾಗಿಯೇ ಅಭಿವೃದ್ಧಿಪಡಿಸುವ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.

ಪಿ-75 ಎಂದು ಹೆಸರಿಸಲಾದ ಈ ಯೋಜನೆಯಡಿ 12 ವರ್ಷಗಳ ಅವಧಿಯಲ್ಲಿ 6 ಸಬ್‌ಮರೀನ್‌ಗಳು ತಯಾರಾಗಲಿವೆ. ಸಬ್‌ಮರೀನ್‌ ಪೂರ್ಣಗೊಳ್ಳುವ ವೇಳೆಗಿನ ಬದಲಾವಣೆ, ಅದರಲ್ಲಿ ಅಳವಡಿಸಬೇಕಾದ ಶಸ್ತಾ್ರಸ್ತ್ರಗಳಿಗೆ ಅನುಗುಣವಾಗಿ ಒಟ್ಟು ತಯಾರಿಕಾ ವೆಚ್ಚದಲ್ಲೂ ಬದಲಾವಣೆ ಆಗಬಹುದಾಗಿದೆ ಎಂದು ಸರ್ಕಾರ ಹೇಳಿದೆ.

ಈ ಸಬ್‌ಮರೀನ್‌ಗಳನ್ನು ಎಲ್‌ ಆ್ಯಂಡ್‌ ಟಿ ಮತ್ತು ಸರ್ಕಾರಿ ಸ್ವಾಮ್ಯದ ಮಡಗಾಂವ್‌ ಡಾಕ್ಸ್‌ ಲಿ. ನಿರ್ಮಿಸಲಿವೆ. ಇವುಗಳಿಗೆ ಸಬ್‌ಮರೀನ್‌ ನಿರ್ಮಾಣದಲ್ಲಿ ನೆರವಾಗಲು ಈಗಾಗಲೇ ರೋಸ್‌ಬೋರೋನ್‌ಎಕ್ಟ್ಪೋರ್ಟ್‌ (ರಷ್ಯಾ), ದೇವೂ (ದಕ್ಷಿಣ ಕೊರಿಯಾ),ಟಿಎಂಸಿ (ಜರ್ಮನಿ), ನವಾಂಟಿಯಾ (ಸ್ಪೇನ್‌) ಮತ್ತು ನಾವಲ್‌ ಗ್ರೂಪ್‌ (ಫ್ರಾನ್ಸ್‌) ಮುಂದೆ ಬಂದಿವೆ.

ಈ ವಿದೇಶಿ ಕಂಪನಿಗಳ ಪೈಕಿ ಯಾವುದರ ಜೊತೆ ತಾವು ಭಾಗಿಯಾಗಬೇಕು ಎನ್ನುವುದನ್ನು ದೇಶೀ ಕಂಪನಿಗಳು ತಾವೇ ನಿರ್ಧರಿಸಲಿವೆ. ಅದಾದ ಬಳಿಕ ಎರಡೂ ಕಂಪನಿಗಳಿಗೆ ನಿರ್ಮಾಣದ ಗುತ್ತಿಗೆ ನೀಡಲಾಗುವುದು.

ಸಾಮರ್ಥ್ಯ ಹೆಚ್ಚಿಸುವ ಉದ್ದೇಶ

ತನ್ನ ಸಮುದ್ರ ವಲಯದಲ್ಲಿ ಬಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯು ಪರಮಾಣು ದಾಳಿ ಸಾಮರ್ಥ್ಯದ 6 ಸೇರಿದಂತೆ ಒಟ್ಟು 24 ಸಬ್‌ಮರೀನ್‌ ಖರೀದಿಸುವ ಚಿಂತನೆ ಹೊಂದಿದೆ.

ಪ್ರಸಕ್ತ ಭಾರತೀಯ ನೌಕಾಪಡೆಯ ಬಳಿ ಪರಮಾಣು ದಾಳಿ ಸಾಮರ್ಥ್ಯದ 2 ಮತ್ತು ಇತರೆ 15 ಸಬ್‌ಮರೀನ್‌ಗಳಿವೆ. ಇನ್ನು ನೆರೆಯ ಚೀನಾ ಬಳಿ 50 ಸಬ್‌ಮರೀನ್‌ ಮತ್ತು 350 ನೌಕೆಗಳಿವೆ. ಇನ್ನು 10 ವರ್ಷಗಳಲ್ಲಿ ಅದು 500ಕ್ಕೆ ಹೆಚ್ಚುವ ನಿರೀಕ್ಷೆ ಇದೆ.

click me!