100 ಕೋಟಿ ಸನಿಹಕ್ಕೆ ಭಾರತದ ಲಸಿಕಾಕರಣ!

By Suvarna NewsFirst Published Oct 11, 2021, 9:53 AM IST
Highlights

* ನಿನ್ನೆ 95 ಕೋಟಿ ದಾಟಿದ ಒಟ್ಟು ಲಸಿಕೆಗಳ ಡೋಸ್‌

* 100 ಕೋಟಿ ಸನಿಹಕ್ಕೆ ಭಾರತದ ಲಸಿಕಾಕರಣ

* ಇನ್ನೊಂದು ವಾರಕ್ಕೆ ಶತಕದ ಗಡಿ ದಾಟುವ ನಿರೀಕ್ಷೆ

(ನವದೆಹಲಿ(ಅ.11): ಕೋವಿಡ್‌ ನಿರ್ವಹಣೆಯಲ್ಲಿ(Covid 19 Management) ಅಪೂರ್ವ ಯಶಸ್ಸು ಸಾಧಿಸಿರುವ ಭಾರತ(India), ಇದೀಗ ಕೋವಿಡ್‌ ಲಸಿಕೆ(Covid vaccine) ವಿತರಣೆಯಲ್ಲೂ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ದಾಪುಗಾಲಿಟ್ಟಿದೆ. ಭಾನುವಾರ ದೇಶದಲ್ಲಿ 45 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದ್ದು, ಇದರೊಂದಿಗೆ ಒಟ್ಟು ವಿತರಣೆಯಾದ ಲಸಿಕೆಯ ಪ್ರಮಾಣ 95.11 ಕೋಟಿ ದಾಟಿದೆ. ಅಂದರೆ 100 ಕೋಟಿಯ ಐತಿಹಾಸಿಕ ಮೈಲುಗಲ್ಲು ತಲುಪಲು ಇನ್ನು ಕೆಲವೇ ಹೆಜ್ಜೆ ಬಾಕಿ ಉಳಿದಿದೆ.

ವಿಶ್ವದಲ್ಲಿ ಇದುವರೆಗೆ ಚೀನಾ(China) ದೇಶ ಮಾತ್ರವೇ 100 ಕೋಟಿ ಡೋಸ್‌ನಷ್ಟುಲಸಿಕೆ ವಿತರಣೆ ಮಾಡಿದ್ದಾಗಿ ಹೇಳಿಕೊಂಡಿದೆ. ಆದರೆ ಅದರ ಅಂಕಿ ಸಂಖ್ಯೆಯ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಹೀಗಾಗಿ ಭಾರತದ 100 ಕೋಟಿ ಡೋಸ್‌ ವಿತರಣೆಯ ಮೈಲುಗಲ್ಲಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

2021ರ ಜ.16ರಂದು ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಮೂಲಕ ಆರಂಭವಾಗಿದ್ದ ಅಭಿಯಾನ ಬಳಿಕ ಮಾ.1ರಿಂದ 60 ವರ್ಷ ಮೇಲ್ಪಟ್ಟ ಎಲ್ಲಾ ವ್ಯಕ್ತಿಗಳು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೂ ವಿಸ್ತರಣೆಯಾಗಿತ್ತು. ಏ.1ರಿಂದ ಅದನ್ನು 18 ವರ್ಷ ಮೇಲ್ಪಟ್ಟಎಲ್ಲಾ ವಯೋವರ್ಗಕ್ಕೂ ವಿಸ್ತರಣೆ ಮಾಡಲಾಗಿತ್ತು.

ಇದುವರೆಗೆ ದೇಶದಲ್ಲಿ 68.34 ಕೋಟಿ ಜನರಿಗೆ ಮೊದಲ ಡೋಸ್‌, 26.76 ಕೋಟಿ ಜನರಿಗೆ ಎರಡೂ ಡೋಸ್‌ ನೀಡಲಾಗಿದೆ. ನಿತ್ಯವೂ ಕನಿಷ್ಠ 50000 ಕೇಂದ್ರಗಳ ಮೂಲಕ ದೇಶಾದ್ಯಂತ ಲಸಿಕೆ ವಿತರಿಸಲಾಗುತ್ತಿದೆ. ಈ ಪೈಕಿ 49.50 ಕೋಟಿ ಪುರುಷರ ಮತ್ತು 45.60 ಕೋಟಿ ಮಹಿಳೆಯರು ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದವರಲ್ಲಿ 84 ಕೋಟಿಗಿಂತ ಹೆಚ್ಚು ಜನರಿಗೆ ಕೋವಿಶೀಲ್ಡ್‌ ಮತ್ತು 11 ಕೋಟಿಗಿಂತ ಹೆಚ್ಚು ಜನರಿಗೆ ಕೋವ್ಯಾಕ್ಸಿನ್‌ ಪಡೆದಿದ್ದಾರೆ.

ದೇಶದಲ್ಲಿ ಈವರೆಗೆ

* 68.3 ಕೋಟಿ ಜನರಿಗೆ ಮೊದಲ ಡೋಸ್‌

* 26.7 ಕೋಟಿ ಜನರಿಗೆ ಎರಡೂ ಡೋಸ್‌

* 50 ಸಾವಿರ ಕೇಂದ್ರಗಳಲ್ಲಿ ಲಸಿಕೆ ವಿತರಣೆ

* 84 ಕೋಟಿ ಜನರಿಗೆ ಕೋವಿಶೀಲ್ಡ್‌ ಲಸಿಕೆ

* 11 ಕೋಟಿ ಜನರಿಗೆ ಕೋವ್ಯಾಕ್ಸಿನ್‌ ಡೋಸ್‌

click me!