ಒಡಿಶಾ ರೈಲು ದುರಂತದ ಬಳಿಕ ಮತ್ತೊಂದು ಅವಘಡ: 2 ರೈಲುಗಳು ಪರಸ್ಪರ ಡಿಕ್ಕಿ; ಹಳಿ ತಪ್ಪಿದ 12 ಬೋಗಿಗಳು!

By BK Ashwin  |  First Published Jun 25, 2023, 10:59 AM IST

ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿ ತಪ್ಪಿದ್ದು, ಓಂಡಾ ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.


ನವದೆಹಲಿ (ಜೂನ್ 25, 2023): ಒಡಿಶಾ ರೈಲು ದುರಂತ ನಡೆದು 3 ವಾರ ಕಳೆದಿದ್ದರೂ, ಬಹುತೇಕ ಜನ ಈಗಲೂ ಅದನ್ನು ಮರೆತಿಲ್ಲ. ಈ ನಡುವೆ ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಅವಘಡ ನಡೆದಿದೆ. ಭಾನುವಾರ ಮುಂಜಾನೆ 4 ಗಂಟೆ ಸುಮಾರಿಗೆ ಪಶ್ಚಿಮ ಬಂಗಾಳದ ಬಂಕುರಾ ಬಳಿ 2 ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ.

ಪಶ್ಚಿಮ ಬಂಗಾಳದ ಬಂಕುರಾ ಬಳಿ 2 ಗೂಡ್ಸ್‌ ರೈಲುಗಳ ಎಂಜಿನ್‌ಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದು, ಈ ಹಿನ್ನೆಲೆ ಹಲವು ಬೋಗಿಗಳು ಹಳಿ ತಪ್ಪಿವೆ. ಒಂದು ಗೂಡ್ಸ್ ರೈಲು ಇನ್ನೊಂದಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ರೈಲುಗಳ 12 ಬೋಗಿಗಳು ಹಳಿ ತಪ್ಪಿದ್ದು, ಓಂಡಾ ನಿಲ್ದಾಣದಲ್ಲಿ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿದ್ದ ರೈಲಿನಿಂದ ಮಹಿಳೆ ತಳ್ಳಿದ ಐವರು ಕಾಮುಕರು!

ಅದೃಷ್ಟವಶಾತ್‌, ಈ 2 ಸರಕು ರೈಲುಗಳ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಗೂಡ್ಸ್ ರೈಲಿನ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಇನ್ನು, ಈ ಘಟನೆಯ ಬಗ್ಗೆ ರೈಲ್ವೆ ಅಧಿಕಾರಿಗಳು ಹೇಳಿಕೆ ನೀಡಿದ್ದು,  “ಎರಡೂ ಖಾಲಿ ಸರಕು ರೈಲುಗಳಾಗಿದ್ದು, ಈ ಹಿನ್ನೆಲೆ ಅಪಘಾತದ ಕಾರಣ ಮತ್ತು ಎರಡೂ ರೈಲುಗಳು ಹೇಗೆ ಡಿಕ್ಕಿ ಹೊಡೆದವು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಅವಘಡದಿಂದ ಆದ್ರಾ ವಿಭಾಗದ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ADRA ವಿಭಾಗವು  ಪಶ್ಚಿಮ ಮಿಡ್ನಾಪುರ, ಬಂಕುರಾ, ಪುರುಲಿಯಾ ಮತ್ತು ಬುರ್ದ್ವಾನ್ ಸೇರಿ ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳಿಗೆ ರೈಲು ಸೇವೆ ನೀಡುತ್ತದೆ. ಮತ್ತು ಜಾರ್ಖಂಡ್‌ನ ಮೂರು ಜಿಲ್ಲೆಗಳಾದ ಧನ್‌ಬಾದ್, ಬೊಕಾರೊ ಮತ್ತು ಸಿಂಗ್‌ಭೂಮ್ ಹಾಗೂ ಇದು ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುತ್ತದೆ’’ ಎಂದೂ ಮಾಹಿತಿ ನೀಡಿದ್ದಾರೆ.

ಪುರುಲಿಯಾ ಎಕ್ಸ್‌ಪ್ರೆಸ್‌ನಂತಹ ಕೆಲವು ರೈಲುಗಳು ಈ ವಿಭಾಗದಿಂದ ಚಲಿಸಬಹುದಾದ ಕಾರಣ ರೈಲು ಅಧಿಕಾರಿಗಳು ಸಾಧ್ಯವಾದಷ್ಟು ವೇಗವಾಗಿ ಅಪ್‌ಲೈನ್ ಅನ್ನು ತೆರೆಯಲು ಪ್ರಯತ್ನಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಒಡಿಶಾ ರೈಲು ದುರಂತದಲ್ಲಿ ಕನಿಷ್ಠ 275 ಜೀವಗಳನ್ನು ಬಲಿ ಪಡೆದ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಇತರ ಎರಡು ರೈಲುಗಳನ್ನು ಒಳಗೊಂಡ ಭೀಕರ ಟ್ರಿಪಲ್ ರೈಲು ಡಿಕ್ಕಿಯಾದ ಒಂದು ತಿಂಗಳೊಳಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ವಂದೇ ಭಾರತ್‌ ರೈಲಲ್ಲಿ ಒಮ್ಮೆಯಾದ್ರೂ ಹೋಗ್ಬೆಕು ಅನ್ನೋ ಆಸೆಗೆ ತಣ್ಣೀರೆರಚಿದ ರೈಲ್ವೆ ಇಲಾಖೆ: ಪ್ರಯಾಣಿಕನ ಆಕ್ರೋಶ!

ಒಡಿಶಾ ರೈಲು ದುರಂತ
ಜೂನ್ 2 ರಂದು ಬಾಲಸೋರ್ ಜಿಲ್ಲೆಯಲ್ಲಿ ಭೀಕರ ಸರಣಿಯಲ್ಲಿ ಮೂರು ರೈಲುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದುಕೊಂಡಿದ್ದವು. ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲನ್ನು ಒಳಗೊಂಡ ಅಪಘಾತವು ಕೋಲ್ಕತ್ತಾದಿಂದ ದಕ್ಷಿಣಕ್ಕೆ 250 ಕಿಮೀ ಮತ್ತು ಭುವನೇಶ್ವರದಿಂದ 170 ಕಿಮೀ ಉತ್ತರಕ್ಕೆ ಬಹನಾಗಾ ಬಜಾರ್ ನಿಲ್ದಾಣದ ಬಳಿ ಸಂಜೆ 7 ಗಂಟೆ ಸುಮಾರಿಗೆ ಸಂಭವಿಸಿತ್ತು.

ಚೆನ್ನೈ ಕಡೆಗೆ ಹೋಗುತ್ತಿದ್ದ ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್, ಪಕ್ಕದ ಹಳಿಯಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ನಂತರ ಹಳಿತಪ್ಪಿ, ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಿಂಬದಿಯ ಗಾಡಿ ಮೂರನೇ ಟ್ರ್ಯಾಕ್‌ಗೆ ತಿರುಗಿದಾಗ ಈ ಅಪಘಾತ ಸಂಭವಿಸಿದೆ. ಮೂರನೇ ಟ್ರ್ಯಾಕ್‌ನಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಳಿ ತಪ್ಪಿದ ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು.

ಇದನ್ನೂ ಓದಿ: IRCTCಯನ್ನೂ ಅದಾನಿ ಸ್ವಾಧೀನಪಡಿಸಿಕೊಳ್ತಾರೆ ಎಂದ ಕಾಂಗ್ರೆಸ್‌: ರೈಲ್ವೆ ಬುಕಿಂಗ್ ಪ್ಲಾಟ್‌ಫಾರ್ಮ್‌ ತಿರುಗೇಟು

click me!