
ಮುಂಬೈ: ವಕ್ಫ್ ತಿದ್ದುಪಡಿ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ವಾಗತಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಪಾಲಿಗೆ ಉತ್ತಮ ಸೂಚನೆಯಾಗಿದೆ ಎಂದು ಹೇಳಿದ್ದಾರೆ. ವಕ್ಫ್ ಕಾಯ್ದೆಯನ್ನು ಸಂಸತ್ತಿನ ಇತಿಹಾಸದಲ್ಲೇ ಅತೀ ಸುದೀರ್ಘ ಚರ್ಚೆಯ ಬಳಿಕ ಅಂಗೀಕರಿಸಲಾಗಿದೆ ಎಂದ ಅವರು,
ಸುಪ್ರೀಂ ಕೋರ್ಟ್ ಈ ಕಾಯ್ದೆಯಲ್ಲಿನ ಅನೇಕ ಅಂಶಗಳನ್ನು ಎತ್ತಿಹಿಡಿದಿದೆ. ಕಾಯ್ದೆಯಲ್ಲಿರುವ ಅಂಶಗಳು ಬಡ ಮುಸ್ಲಿಂ ಸಹೋದರರು ಮತ್ತು ಸಹೋದರಿಯರು ಸೇರಿ ಎಲ್ಲ ಮುಸ್ಲಿಂ ಸಮುದಾಯದವರಿಗೆ ಅನುಕೂಲಕರವಾಗಿದೆ. ವಕ್ಫ್ ಆಸ್ತಿಯ ದುರ್ಬಳಕೆ, ವಕ್ಫ್ ಬೋರ್ಡ್ ಮೂಲಕದ ಅತಿಕ್ರಮಣಕ್ಕೆ ತಿದ್ದುಪಡಿ ಕಾಯ್ದೆಯಿಂದ ಕಡಿವಾಣ ಬೀಳಲಿದೆ. ಸುಪ್ರೀಂ ಕೋರ್ಟ್‌ಗೆ ಇಡೀ ವಿಚಾರದ ಅರಿವಿದೆ. ಸಂಸದೀಯ ಪ್ರಜಾಪ್ರಭುತ್ವದ ಪಾಲಿಗೆ ಸುಪ್ರೀಂ ಕೋರ್ಟ್ ದಾರಿದೀಪವಾಗಿದೆ ಎಂದು ಹೇಳಿದರು.
ವಕ್ಫ್ ಕಾಯ್ದೆ ತೀರ್ಪು ಕೇಂದ್ರಕ್ಕೆ ಕಪಾಳ ಮೋಕ್ಷ : ಕಾಂಗ್ರೆಸ್ ಕಿಡಿ
ನವದೆಹಲಿ: ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿರುವ ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಕಾಯ್ದೆಗೆ ಭಾಗಶಃ ತಡೆ ನೀಡಿದ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಸ್ವಾಗತಿಸಿವೆ. ಇದು ನ್ಯಾಯದ ಕುರಿತ
ಸಾಂವಿಧಾನಿಕ ಮೌಲ್ಯಗಳು, ಸಮಾನತೆ ಮತ್ತು ಭ್ರಾತೃತ್ವಕ್ಕೆ ಸಿಕ್ಕ ಗೆಲುವಾಗಿದೆ. ಜತೆಗೆ, ಬಿಜೆಪಿ ಸರ್ಕಾರಕ್ಕೆ ಮಾಡಿದ ಕಪಾಳ ಮೋಕ್ಷವಾಗಿದೆ ಎಂದು ಹೇಳಿಕೊಂಡಿವೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ಮೂಲ ಕಾನೂನಿನಲ್ಲಿ ಚೇಷ್ಟೆಯ ಉದ್ದೇಶವನ್ನು ತಡೆಯುವ ನಿಟ್ಟಿನಲ್ಲಿ ಸುದೀರ್ಘ ಮಾರ್ಗ ನಿರ್ಧರಿಸುವ ಸಾಧ್ಯತೆ ಇದೆ. ಈ ತೀರ್ಪಿನ ಬಳಿಕ ಜನರ ಜಮೀನು ಸುರಕ್ಷಿತವಾಗಲಿದೆ. ಇದು ಕೇಂದ್ರ ಸರ್ಕಾರದ ಷಡ್ಯಂತ್ರಗಳಿಗೆ ಕಡಿವಾಣ ಹಾಕಲಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶವು ಖಚಿತಪಡಿಸಿದೆ. ಬಿಜೆಪಿಯು ವಿಭಜನೆಯ ಕಾನೂನು ಜಾರಿಗೆ ತರಲು ಉದ್ದೇಶಿಸಿತ್ತು. ಈ ಮೂಲಕ ಭಾರತವು ತೀರಾ ಹಿಂದೆಯೇ ಇತ್ಯರ್ಥಪಡಿಸಿಕೊಂಡಿದ್ದ ವಿಚಾರಗಳನ್ನು ಮತ್ತೆ ಕೆದಕಲು ಹಾಗೂ ಕೋಮುಭಾವನೆ ಬಿತ್ತಲು ಪ್ರಯತ್ನಿಸಿತ್ತು. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಯಾವುದೇ ಅಂಜಿಕೆಯಿಲ್ಲದೆ ಗಟ್ಟಿಯಾಗಿ ನಿಂತಿತು ಎಂದು ಖರ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ