
ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ಬಳಸಿ ಮಾನಹಾನಿಕರ ಮತ್ತು ಸುಳ್ಳು ವಿಡಿಯೋ ಹರಿಬಿಡುವ ಖಯಾಲಿ ಹೆಚ್ಚುತ್ತಿರುವ ನಡುವೆಯೇ, ಎಐ ಕಂಟೆಂಟ್ ಕ್ರಿಯೇಟರ್‌ಗಳಿಗೆ ನೋಂದಣಿ ಕಡ್ಡಾಯ, ಅವರು ರಚಿತ ವಿಷಯಗಳಿಗೆ ಕಡ್ಡಾಯ ಲೇಬಲ್ ಮಾಡುವಂತೆ ಮತ್ತು ಡೀಪ್‌ಫೇಕ್ ವಿಡಿಯೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದೀಯ ಸ್ಥಾಯಿ ಸಮಿತಿಯೊಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಕುರಿತು ವಿಪಕ್ಷಗಳು ಹರಿಬಿಟ್ಟಿದ್ದ ಎಐ ರಚಿತ ವಿಡಿಯೋ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಮಿತಿಯು ಸುಳ್ಳು ಸುದ್ದಿಗಳನ್ನು ಹರಡುವವರನ್ನು ಗುರುತಿಸಿ ಶಿಕ್ಷಿಸಲು ಕಾನೂನು ಮತ್ತು ತಾಂತ್ರಿಕ ಕ್ರಮಗಳನ್ನು ರೂಪಿಸಬೇಕು. ಎಐ ರಚಿತ ಚಿತ್ರ ಮತ್ತು ವಿಡಿಯೋಗಳು ಐತಿಹಾಸಿಕ ಘಟನೆಗಳು ಮತ್ತು ವ್ಯಕ್ತಿಗಳನ್ನು ತಪ್ಪಾಗಿ ಚಿತ್ರಿಸಬಹುದು, ಇದು ಸಾರ್ವಜನಿಕ ವ್ಯವಸ್ಥೆಗೆ ಭೀತಿ ಉಂಟುಮಾಡಬಹುದು ಎಂದು ಸಮಿತಿ ಎಚ್ಚರಿಕೆ ನೀಡಿದೆ. ಜೊತೆಗೆ, ಅಂಥ ವಿಡಿಯೋ ರಚಿಸಿದವರಿಗೆ ದಂಡ ಹೆಚ್ಚಳ, ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ಕಡ್ಡಾಯ ಸತ್ಯಶೋಧನಾ (ಫ್ಯಾಕ್ಟ್ ಚೆಕಿಂಗ್) ವ್ಯವಸ್ಥೆ ರೂಪಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ.
ಸಮಿತಿಯು ವರದಿಯನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಿದೆ. ಅದನ್ನು ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ