
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಎಐ ಶೃಂಗದಲ್ಲಿ ಇದೀಗ ಗಿನ್ನೆಸ್ ವಿಶ್ವದಾಖಲೆ ನಿರ್ಮಾಣವಾಗಿದೆ. ಈ ಶೃಂಗದಲ್ಲಿ ಕೇವಲ 24 ಗಂಟೆಗಳಲ್ಲಿ 2.5 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ ಬಳಸುವ ಪ್ರತಿಜ್ಞೆ ಮಾಡಿದ್ದು ದಾಖಲೆಯಾಗಿದೆ.
ಸಮ್ಮೇಳನದ ಅವಧಿಯಲ್ಲಿ 5 ಸಾವಿರ ಮಂದಿ ವಿದ್ಯಾರ್ಥಿಗಳ ಪ್ರತಿಜ್ಞೆಯ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಇಲ್ಲಿ 2,50,946 ವಿದ್ಯಾರ್ಥಿಗಳು ಪ್ರತಿಜ್ಞೆ ಸ್ವೀಕರಿಸಿದ್ದಾರೆ ಎಂದು ಬ್ರಿಟನ್‌ನ ಗಿನ್ನೆಸ್ ವಲ್ಡ್ ರೆಕಾರ್ಡ್ಸ್‌ನ ತೀರ್ಪುಗಾರ ಪ್ರವೀಣ್ ಪಟೇಲ್ ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರ ದೂರದೃಷ್ಟಿಯ ಫಲವಾಗಿ ಎಐನ ಜವಾಬ್ದಾರಿಯುತ ಬಳಕೆಗಾಗಿನ ಪ್ರತಿಜ್ಞೆಗಾಗಿ ನಾವು ಶಾಲೆಗಳು, ಕಾಲೇಜುಗಳನ್ನು ತಲುಪಲು ಸಾಧ್ಯವಾಯಿತು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎಐ ಶೃಂಗಸಭೆಯಲ್ಲಿ ಭಾಗಿಯಾಗಲು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್ ಅವರು ತಾವು ಹಾಗೂ ಪ್ರಧಾನಿ ಮೋದಿ ಕೈಗಳನ್ನು ಹೃದಯದ ಆಕಾರದಲ್ಲಿಟ್ಟುಕೊಂಡಿರುವ ಎಐ ನಿರ್ಮಿತ ಫೋಟೋ ಹಂಚಿಕೊಂಡಿದ್ದು, ‘ಗೆಳೆಯರಿಬ್ಬರು ಒಟ್ಟಾದಾಗ ನಾವೀನ್ಯತೆ ಹಿಂಬಾಲಿಸುತ್ತದೆ’ ಎಂದು ಬರೆದುಕೊಂಡಿದ್ದಾರೆ.
ನವದೆಹಲಿ: ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಎಐ ತಂತ್ರಜ್ಞಾನ ಇದೀಗ ಭಾರತೀಯ ಸೇನೆಗೂ ಲಗ್ಗೆಯಿಟ್ಟಿದೆ. ಎಐ ನೆರವಿನಿಂದ ಸೇನೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಚೀನಾ ಅತಿಕ್ರಮಣವನ್ನು ವಿಫಲಗೊಳಿಸಿತ್ತು ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್‌ನ ಕಮಾಂಡರ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ಇದನ್ನು ತಿಳಿಸಿದ್ದಾರೆ.
‘ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ ಕೆಲವು ಕಡಿಮೆ ವೆಚ್ಚದ ಎಐ ಸಾಧನಗಳು ವಿವಾದಿತ ವಲಯದಲ್ಲಿ ಚೀನಾದ ಜಮಾವಣೆಗೂ ಮುನ್ನವೇ ನಮಗೆ ಮಾಹಿತಿ ನೀಡಿತ್ತು. ಅಲ್ಲಿ ಚೀನಾ ಅತಿಕ್ರಮಣಕ್ಕಾಗಿ ತನ್ನ ನೆಲೆಗಳನ್ನು ಸ್ಥಾಪಿಸುತ್ತಿರುವ ಬಗ್ಗೆ ನಮಗೆ ಎಚ್ಚರಿಕೆ ನೀಡಿತ್ತು. ಆಗ ನಮಗೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅವರ ನಡೆಯನ್ನು ಊಹಿಸಲು ಸಾಧ್ಯವಾಗಿ ಅವರ ಯೋಜನೆಯನ್ನು ವಿಫಲಗೊಳಿಸಿದ್ದೆವು’ ಎಂದಿದ್ದಾರೆ.
ನವದೆಹಲಿ: ‘ಎಐ ಶೃಂಗಸಭೆ ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನ’ ಎಂದು ಕರೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಲ್ಲಿ ಚೀನಾದ ಉತ್ಪನ್ನಗಳನ್ನು ಭಾರತೀಯ ಉತ್ಪನ್ನ ಎಂದು ಬಿಂಬಿಸಿ ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಟ್ವೀಟ್ ಮಾಡಿರುವ ಅವರು, ‘ಭಾರತದ ಪ್ರತಿಭೆ ಮತ್ತು ದತ್ತಾಂಶವನ್ನು ಬಳಸಿಕೊಳ್ಳುವ ಬದಲು, ಚೀನಾ ಉತ್ಪನ್ನ ಬಳಸಿಕೊಳ್ಳಲಾಗುತ್ತಿದೆ. ಎಐ ಶೃಂಗಸಭೆಯು ಅಸ್ತವ್ಯಸ್ತವಾದ ಪಿಆರ್ ಪ್ರದರ್ಶನವಾಗಿದೆ. ಭಾರತೀಯ ದತ್ತಾಂಶ ಮಾರಾಟಕ್ಕೆ, ಚೀನೀ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ’ ಎಂದಿದ್ದಾರೆ.
ನೋಯ್ಡಾದ ಗಲ್ಗೋಟಿಯಾಸ್ ವಿವಿ ಎಐ ಶೃಂಗಸಭೆಯ ಎಕ್ಸ್‌ಪೋದಲ್ಲಿ ‘ಒರಾಯನ್’ ಎಂದು ಲೇಬಲ್ ಮಾಡಲಾದ ಚೀನಾದ ರೋಬೋಟಿಕ್ ನಾಯಿಯನ್ನು ತನ್ನದೆಂದು ಪ್ರದರ್ಶಿಸಿದೆ ಎಂಬ ವಿವಾದದ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
ನವದೆಹಲಿ: ಚೀನಾ ರೋಬೋ ಡಾಗ್ ಅನ್ನು ತನ್ನದೆಂದು ಹೇಳಿ ಎಐ ಶೃಂಗಸಭೆಯಲ್ಲಿ ಭಾರೀ ಮುಜುಗರ ಅನುಭವಿಸಿರುವ ನೋಯ್ಡಾದ ಗಲ್ಗೋಟಿಯಾ ವಿಶ್ವವಿದ್ಯಾಲಯ ಇಂತಹ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ತಾನೇ ನಿರ್ಮಿಸಿದ್ದೆಂದು ಹೇಳಿಕೊಂಡಿರುವ ಡ್ರೋನ್ ಕೂಡ ಅದರ ಸ್ವಂತದ್ದಲ್ಲ ಎಂದು ತಿಳಿದುಬಂದಿದೆ.
ಎಕ್ಸ್‌ಪೋದಲ್ಲಿ ಪ್ರದರ್ಶನಕ್ಕಿಟ್ಟಿದ್ದ ಸಾಸರ್ ಡ್ರೋನ್‌ಅನ್ನು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸೇರಿಕೊಂಡು ತಯಾರಿಸಿದ್ದು ಎಂದು ಅಧ್ಯಾಪಕಿ ನೇಹಾ ಸಿಂಗ್ ಹೇಳಿದ್ದರು. ಜತೆಗೆ, ಇದು ದೇಶದ ಮೊದಲ ಇಂತಹ ವ್ಯವಸ್ಥೆ ಎಂದೂ ಪರಿಚಯಿಸಿದ್ದರು. ಆದರೆ ಅಸಲಿಗೆ ಇದು ದಕ್ಷಿಣ ಕೊರಿಯಾದ ಕಂಪನಿಯೊಂದು ಅಭಿವೃದ್ಧಿಪಡಿಸಿರುವ ಡ್ರೋನ್ ಆಗಿದ್ದು, ಸ್ಟ್ರೈಕರ್ ವಿ3 ಎಆರ್‌ಎಫ್ ಹೆಸರಿನ ಇದು ಭಾರತದಲ್ಲಿ 40,000 ರು.ಗೆ ಲಭ್ಯವಿದೆ ಎನ್ನಲಾಗುತ್ತಿದೆ. ಪರಿಣಾಮ, ಅದರ ಸ್ಟಾಲ್‌ನಲ್ಲಿದ್ದ ಎಲ್ಲಾ ವಸ್ತುಗಳನ್ನು ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ