ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.| ‘ಫ್ಯಾಬಿಫ್ಲೂ’ ಹೆಸರಲ್ಲಿ ಗ್ಲೆನ್‌ಮಾರ್ಕ್ ಬಿಡುಗಡೆ| ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತಂತೆ ವೈರಾಣು
ನವದೆಹಲಿ(ಜೂ.21): ಸೌಮ್ಯ ಮತ್ತು ಸಾಧಾರಣ ಸ್ವರೂಪದ ಕೊರೋನಾ ಸೋಂಕಿನಿಂದ ಬಳಲುತ್ತಿರುವವರ ಚಿಕಿತ್ಸೆಗೆ ಗ್ಲೆನ್‌ಮಾರ್ಕ್ ಕಂಪನಿ ಫಾವಿಪಿರವಿರ್ ಮಾತ್ರೆಯನ್ನು ‘ಫ್ಯಾಬಿಫ್ಲೂ’ ಬ್ರ್ಯಾಂಡ್ ಹೆಸರಿನಲ್ಲಿ ಶನಿವಾರ ಬಿಡುಗಡೆ ಮಾಡಿದೆ. 200 ಎಂಜಿಯ ಒಂದು ಮಾತ್ರೆಗೆ 103 ರು. ಬೆಲೆ ನಿಗದಿಪಡಿಸಲಾಗಿದೆ.
4 ಲಕ್ಷ ಗಡಿಗೆ ಸೋಂಕಿತರ ಸಂಖ್ಯೆ: ಕೇವಲ 20 ದಿನದಲ್ಲಿ 2 ಲಕ್ಷ ಮಂದಿಗೆ ಸೋಂಕು!
34 ಮಾತ್ರೆಗಳು ಇರುವ ಒಂದು ಸ್ಟ್ರಿಪ್‌ಗೆ 3500 ರು. ಬೆಲೆ ಇದೆ. ಭಾರತದಲ್ಲಿ ಕೊರೋನಾ ಚಿಕಿತ್ಸೆಗೆ ಅನುಮತಿ ಪಡೆದಿರುವ ಬಾಯಿ ಮೂಲಕ ಸೇವಿಸಲಾಗುವ ಮೊದಲ ಔಷಧ ಇದಾಗಿದೆ. ವೈದ್ಯರ ಸೂಚನೆ ಅನುಸಾರ ಈ ಮಾತ್ರೆಯನ್ನು ತೆಗೆದುಕೊಳ್ಳಬೇಕು. ಸೋಂಕಿತರು ಮೊದಲ ದಿನ 1800 ಎಂಜಿಯಷ್ಟುಮಾತ್ರೆಯನ್ನು ಎರಡು ಬಾರಿ, ಎರಡನೇ ದಿನದಿಂದ 14ದಿನದವರೆಗೆ 800 ಎಂಜಿಯಂತೆ ನಿತ್ಯ ಎರಡು ಬಾರಿ ಸೇವಿಸಬೇಕು. ನಾಲ್ಕು ದಿನದೊಳಗೆ ದೇಹದಲ್ಲಿನ ವೈರಸ್ ಪ್ರಮಾಣವನ್ನು ಇದು ಇಳಿಸಲಿದೆ ಎಂದು ಕಂಪನಿ ತಿಳಿಸಿದೆ.
ಸೌಮ್ಯ ಹಾಗೂ ಸಾಧಾರಣ ಕೊರೋನಾ ಲಕ್ಷಣಗಳನ್ನು ಹೊಂದಿರುವ ಮಧುಮೇಹ, ಹೃದ್ರೋಗದಂತಹ ಆರೋಗ್ಯ ಸಮಸ್ಯೆವುಳ್ಳ ರೋಗಿಗಳು ಕೂಡ ತೆಗೆದುಕೊಳ್ಳಬಹುದು. ಕ್ಲಿನಿಕಲ್ ಪ್ರಯೋಗದ ವೇಳೆ ಈ ಮಾತ್ರೆಯಿಂದ ಶೇ.88ರಷ್ಟುಚೇತರಿಕೆ ಪ್ರಮಾಣ ಕಂಡುಬಂದಿದೆ ಎಂದು ಕಂಪನಿ ತಿಳಿಸಿದೆ.
ಗರ್ಭಿಣಿಯರಿಗೆ ಮಾರಕವಾಗುತ್ತಿದೆ ಕೊರೋನಾ ಸೋಂಕು!
ಫಾವಿಪಿರವಿರ್ ಮಾತ್ರೆಯನ್ನು ದೇಶದಲ್ಲಿ ಕೊರೋನಾ ರೋಗಿಗಳ ಚಿಕಿತ್ಸೆಗೆ ಬಳಸಲು ಭಾರತೀಯ ಔಷಧ ಮಹಾನಿರ್ದೇಶಕರು ಶುಕ್ರವಾರವಷ್ಟೇ ಗ್ಲೆನ್‌ಮಾರ್ಕ್ ಕಂಪನಿಗೆ ಅನುಮತಿ ನೀಡಿದ್ದರು.