ಸೋಂಕಿತರ ಸಂಖ್ಯೆ 4 ಲಕ್ಷ ಗಡಿಗೆ| ನಿನ್ನೆ 14516 ಮಂದಿಗೆ ಸೋಂಕು: ದೇಶದಲ್ಲೀಗ 3.95 ಲಕ್ಷ ವೈರಸ್‌ಪೀಡಿತರು| 375 ಮಂದಿ ಬಲಿ| ಕೇವಲ 20 ದಿನದಲ್ಲಿ 2 ಲಕ್ಷ ಮಂದಿಗೆ ಸೋಂಕು
ನವದೆಹಲಿ(ಜೂ.21): ಲಾಕ್‌ಡೌನ್ ಸಡಿಲಗೊಂಡ ಬಳಿಕ ಶರವೇಗದಲ್ಲಿ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆ ಹೊಸದೊಂದು ಮೈಲಿಗಲ್ಲು ನಿರ್ಮಿಸಲು ಸಜ್ಜಾಗಿದೆ. ಶನಿವಾರ ದೇಶದಲ್ಲಿ ಹೊಸದಾಗಿ 14,516 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,95,048ಕ್ಕೆ ಏರಿಕೆಯಾಗಿದೆ. ತನ್ಮೂಲಕ ವೈರಸ್‌ಪೀಡಿತರ ಸಂಖ್ಯೆ ದೇಶದಲ್ಲಿ 4 ಲಕ್ಷ ಗಡಿಯ ಸನಿಹಕ್ಕೆ ಬಂದಂತಾಗಿದೆ.
ಗಮನಾರ್ಹ ಸಂಗತಿಯೆಂದರೆ, 2 ಲಕ್ಷಕ್ಕೂ ಹೆಚ್ಚು ಅಧಿಕ ಪ್ರಕರಣಗಳು ಕೇವಲ ಜೂನ್ ಒಂದರಲ್ಲೇ ದಾಖಲಾಗಿದೆ. ಜೂ.1ರಿಂದ ಜೂ.20ರ ಅವಧಿಯಲ್ಲಿ 2,04,513 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದೇ ವೇಳೆ ಕೊರೋನಾಕ್ಕೆ ಮತ್ತೆ 375 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 12,948ಕ್ಕೆ ಏರಿಕೆಯಾಗಿದೆ. 24 ಗಂಟೆಯ ಅವಧಿಯಲ್ಲಿ 9,120 ರೋಗಿಗಳು ಗುಣಮುಖರಾಗುವುದರೊಂದಿಗೆ ಕೊರೋನಾದಿಂದ ಚೇತರಿಸಿಕೊಂಡವರ ಸಂಖ್ಯೆ 2,13,830ಕ್ಕೆ ಏರಿಕೆಯಾಗಿದೆ. ಈವರೆಗೆ ಶೇ.54.13ರಷ್ಟುರೋಗಿಗಳು ಗುಣಮುಖರಾಗಿದ್ದಾರೆ. ಹೀಗಾಗಿ ದೇಶದಲ್ಲಿ ಈಗ 1,68,269 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಮಧ್ಯೆ, ಜಾಗತಿಕ ಕೊರೋನಾ ಪ್ರಕರಣಗಳ ಲೆಕ್ಕ ಇಡುವ ವಲ್ಡೋರ್‍ಮೀಟರ್ ವೆಬ್‌ಸೈಟ್ ನೀಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 4 ಲಕ್ಷದ ಗಡಿ ದಾಟಿದೆ. ಅಮೆರಿಕ, ಬ್ರೆಜಿಲ್ ಮತ್ತು ರಷ್ಯಾ ಬಳಿಕ ಕೊರೋನಾದಿಂದ ಅತಿ ಹೆಚ್ಚು ಬಾಧಿತ ದೇಶ ಎನಿಸಿಕೊಂಡಿದೆ. 5.76 ಲಕ್ಷ ಪ್ರಕರಣಗಳೊಂದಿಗೆ ರಷ್ಯಾ 3ನೇ ಸ್ಥಾನದಲ್ಲಿದ್ದು, ಭಾರತ ಇದೇ ವೇಗದಲ್ಲಿ ಸಾಗಿದರೆ ಇನ್ನು 10 ದಿನದಲ್ಲಿ ರಷ್ಯಾವನ್ನು ಹಿಂದಿಕ್ಕುವ ಎಲ್ಲ ಸಾಧ್ಯತೆಗಳೂ ಇವೆ. 23 ಲಕ್ಷ ಪ್ರಕರಣಗಳೊಂದಿಗೆ ಅಮೆರಿಕ, 10 ಲಕ್ಷ ಸೋಂಕಿನೊಂದಿಗೆ ಬ್ರೆಜಿಲ್ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನದಲ್ಲಿವೆ.
ಅತಿ ಹೆಚ್ಚು ಸಾವು ಮಹಾರಾಷ್ಟ್ರದಲ್ಲೇ:
ಶನಿವಾರ ದಾಖಲಾದ 375 ಸಾವಿನ ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ 142 ಮಂದಿ, ದೆಹಲಿಯಲ್ಲಿ 66, ತಮಿಳುನಾಡಿನಲ್ಲಿ 41, ಗುಜರಾತಿನಲ್ಲಿ 27, ಉತ್ತರ ಪ್ರದೇಶದಲ್ಲಿ 23, ಪಶ್ಚಿಮ ಬಂಗಾಳದಲ್ಲಿ 11 ಮತ್ತು ಕರ್ನಾಟಕ, ರಾಜಸ್ಥಾನ ಮತ್ತು ಹರ್ಯಾಣದಲ್ಲಿ ತಲಾ 10 ಮಂದಿ ಮೃತರಾಗಿದ್ದಾರೆ.
ಇನ್ನು ರಾಜ್ಯವಾರು ಪ್ರಕರಣಗಳ ಪೈಕಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 124331ಕ್ಕೆ ಏರಿಕೆ ಆಗಿದ್ದು, 5893 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ 53116ಕ್ಕೆ ತಲುಪಿದ್ದು, 2035 ಮಂದಿ ಈವರೆಗೆ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ ಸೋಂಕಿತರ ಸಂಖ್ಯೆ 56845ಕ್ಕೆ ತಲುಪಿದೆ.
ರಾಜ್ಯದಲ್ಲಿ 8500 ದಾಟಿದ ಸೋಂಕಿತರ ಸಂಖ್ಯೆ
ಬೆಂಗಳೂರು: ಕರ್ನಾಟಕದಲ್ಲಿ ಶನಿವಾರ ಬರೋಬ್ಬರಿ 416 ಮಂದಿಗೆ ಕೊರೋನಾ ಸೋಂಕು ಹರಡಿದೆ. ಸೋಂಕಿತರ ಸಂಖ್ಯೆ 8,697ಕ್ಕೆ ಏರಿಕೆಯಾಗಿದ್ದು, ಶನಿವಾರವೂ ಮಹಾಮಾರಿಗೆ 10 ಮಂದಿ ಬಲಿಯಾಗಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಎರಡನೇ ಅತ್ಯಧಿಕ ಸಂಖ್ಯೆಯ (94) ಸೋಂಕು ದಾಖಲಾಗಿದ್ದು ಒಟ್ಟು ಸೋಂಕು ಸಾವಿರ ಗಡಿ ದಾಟಿ 1,076ಕ್ಕೆ ಏರಿಕೆಯಾಗಿದೆ.