Suicide Case: ತಾಯಿ ಗರ್ಭ, ಸಮಾಧಿಯಲ್ಲಷ್ಟೇ ಹೆಣ್ಮಕ್ಕಳು ಸೇಫ್: 11ರ ಬಾಲೆಯ ಡೆತ್‌ನೋಟ್‌ನಲ್ಲಿ ಶಾಕಿಂಗ್ ಅಂಶ!

By Suvarna News  |  First Published Dec 20, 2021, 4:29 PM IST

* ಆತ್ಮಹತ್ಯೆಗೆ ಶರಣಾದ ಚೆನ್ನೈ ಬಾಲಕಿ

* ಸಾವಿಗೂ ಮುನ್ನ ಆತ್ಮಹತ್ಯೆ ಪತ್ರ ಬರೆದಿಟ್ಟ 11ರ ಬಾಲೆ

* ಡೆತ್‌ನೋಟ್‌ನಲ್ಲಿತ್ತು ಶಾಕಿಂಗ್ ಅಂಶ, ನೋವಿನ ಕತೆ


ಚೆನ್ನೈ(ಡಿ.20): 'Stop Sexual harassment', ಶಿಕ್ಷಕರಿರಲಿ, ಸಂಬಂಧಿಕರಾಗಿರಲಿ ಯಾರನ್ನೂ ನಂಬಬೇಡ. ಹೆಣ್ಣುಮಕ್ಕಳಿಗೆ ಈಗ ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾಗಿದೆ'. ಬಾಲಕಿಯೊಬ್ಬಳ ಡೆತ್‌ನೋಟ್‌ನಲ್ಲಿ ಕಂಡು ಬಂದ ಭಾವುಕಗೊಳಿಸುವ ಸಾಲುಗಳಿವು. ಚೆನ್ನೈನ ಹೊರವಲಯದ 11ನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡು, ಸದ್ಯ ಆಕೆ ಬರೆದ ಡೆತ್‌ನೋಟ್ ವೈರಲ್ ಆಗಿದೆ.

ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಚೆನ್ನೈನ ಹೊರವಲಯದಲ್ಲಿ ಗಂಡ-ಹೆಂಡತಿ ವಾಸವಾಗಿದ್ದಾರೆ. ಅವರ ಮಗಳು 11ನೇ ತರಗತಿಯಲ್ಲಿ ಓದುತ್ತಿದ್ದಳು. ಶನಿವಾರ ಬಾಲಕಿ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದಿದ್ದಾರೆ. ತನಿಖೆಯಲ್ಲಿ, ಪೊಲೀಸರು ಈ ಹುಡುಗಿಯ ಕೊಠಡಿಯಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಈ ಆತ್ಮಹತ್ಯೆ ಪತ್ರದಲ್ಲಿ ‘ತಾಯಿಯ ಗರ್ಭ ಮತ್ತು ಸಮಾಧಿ ಮಾತ್ರ ಸುರಕ್ಷಿತವಾಗಿ ಉಳಿದಿದೆ’ ಎಂದು ಬರೆಯದಿದ್ದಾಳೆ ಎನ್ನಲಾಗಿದೆ. 11ನೇ ತರಗತಿ ಓದುತ್ತಿರುವ ಈ ಬಾಲಕಿಯ ಈ ಪತ್ರ ಇದೀಗ ವೈರಲ್ ಆಗಿದೆ.

Tap to resize

Latest Videos

ಬಾಲಕಿ ಚಾವಣಿಗೆ ನೇಣು ಬಿಗಿದುಕೊಂಡಿರುವುದನ್ನು ಕಂಡು ಈ ಬಾಲಕಿಯ ಪೋಷಕರು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಅಲ್ಲಿಗೆ ಬಂದು ಬಾಲಕಿಯ ಕೊಠಡಿಯನ್ನು ಶೋಧಿಸಿದ್ದು, ಈ ವೇಳೆ ಪೊಲೀಸರ ಕೈಗೆ ಆತ್ಮಹತ್ಯೆ ಪತ್ರ ಲಭಿಸಿದೆ.

ಪ್ರಕರಣ ಸಂಬಂಧ ಬಾಲಕಿಯ ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇತ್ತೀಚಿನ ದಿನಗಳಲ್ಲಿ ಈ ಹುಡುಗಿ ತನ್ನ ಸ್ನೇಹಿತರಿಂದ ದೂರವಿರುತ್ತಿದ್ದಳು ಎಂಬ ಮಾಹಿತಿ ಲಭಿಸಿದೆ. ಹುಡುಗಿ ಮೌನವಾಗಿರಲು ಪ್ರಾರಂಭಿಸಿದ್ದಳು. ಆದರೆ ಬಾಲಕಿ ಬರೆದಿದ್ದಾಳೆ ಎನ್ನಲಾದ ಸೂಸೈಡ್ ನೋಟ್ ಹೃದಯ ವಿದ್ರಾವಕವಾಗಿದೆ. ಈ ಪತ್ರದಲ್ಲಿ ಬಾಲಕಿ ಕಳೆದ ಕೆಲ ದಿನಗಳಿಂದ ಅನುಭವಿಸಿದ ನೋವನ್ನು ಹೇಳಿಕೊಂಡಿದ್ದಾಳೆ.

'ನನಗೆ ಕೆಟ್ಟ ಕನಸು ಬೀಳುತ್ತಿದ್ದವು, ನಿದ್ದೆ ಬರುತ್ತಿರಲಿಲ್ಲ'

Stop Sexual Harrasment' ಈ ವಾಕ್ಯದೊಂದಿಗೆ ಆರಮಭವಾಗುವ ಈ ಡೆತ್‌ನೋಟ್‌ನಲ್ಲಿ, ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಾಲಕಿ ಪತ್ರದಲ್ಲಿ ಬರೆದಿದ್ದಾಳೆ. ಯಾರಿಂದಲೂ ಸಾಂತ್ವನ ಹೇಳಲು ಸಾಧ್ಯವಾಗದಷ್ಟು ನೋವಿನಲ್ಲಿದ್ದೇನೆ ಎಂದು ಬಾಲಕಿ ಬರೆದುಕೊಂಡಿದ್ದಾಳೆ. ಈಗ ಓದು ಬರಹದ ಕ್ಷಮತೆ ಕಳೆದುಕೊಂಡಿರುವ ನನಗೆ ಕೆಟ್ಟ ಕನಸು ಬೀಳುತ್ತಿವೆ, ಇದು ನನ್ನ ನಿದ್ದೆಯನ್ನು ಕಸಿದಿತ್ತು ಎಂದೂ ಉಲ್ಲೇಖಿಸಿದ್ದಾಳೆ. 

ಏಕೈಕ ಸುರಕ್ಷಿತ ಸ್ಥಳ ತಾಯಿಯ ಗರ್ಭ ಮತ್ತು ಸ್ಮಶಾನ

"ಪ್ರತಿಯೊಬ್ಬ ಪೋಷಕರು ತಮ್ಮ ಪುತ್ರರಿಗೆ ಹೆಣ್ಣುಮಕ್ಕಳನ್ನು ಗೌರವಿಸುವುದನ್ನು ಕಲಿಸಬೇಕು. ಸಂಬಂಧಿಕರು ಅಥವಾ ಶಿಕ್ಷಕರನ್ನು ನಂಬಬೇಡಿ. ಸುರಕ್ಷಿತ ಸ್ಥಳವೆಂದರೆ ತಾಯಿಯ ಗರ್ಭ ಮತ್ತು ಸ್ಮಶಾನ" ಎಂದು ಬಾಲಕಿ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದಾಳೆ. ಅಲ್ಲದೇ ಇನ್ಮುಂದೆ ಶಾಲೆಯೂ ಹೆಣ್ಣು ಮಕ್ಕಳಿಗೆ ಸುರಕ್ಷಿತವಲ್ಲ ಎಂದೂ ಈ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. 

ಪ್ರಕರಣದ ತನಿಖೆಗಾಗಿ ಮಾಂಗಾಡು ಪೊಲೀಸರು 4 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ತಂಡ ಬಾಲಕಿಯ ಫೋನ್ ವಿವರ ಸೇರಿದಂತೆ ಹಲವು ವಿಷಯಗಳ ಕುರಿತು ತನಿಖೆ ನಡೆಸುತ್ತಿದೆ. ಈ ಸಂಖ್ಯೆಗೆ ಪದೇ ಪದೇ ಕರೆ ಮಾಡಿದವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕಿ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವುದನ್ನು ಇದುವರೆಗೂ ಪೊಲೀಸರಿಗೆ ಹೇಳಲು ಸಾಧ್ಯವಾಗಿಲ್ಲ.

click me!