ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ಖದೀಮರು

By Anusha KbFirst Published Dec 19, 2022, 4:17 PM IST
Highlights

ಇತ್ತೀಚೆಗೆ ದುಬಾರಿ ಜಾತಿ ನಾಯಿಗಳ ಮೇಲೆ ಜನರ ವ್ಯಾಮೋಹ ಹೆಚ್ಚಿದ್ದು, ಇದರ ಪರಿಣಾಮ ಸಿನಿಮೀಯ ಘಟನೆಯೊಂದು ನಡೆದಿದೆ. ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ವಿಚಿತ್ರ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

ಗ್ರೇಟರ್ ನೋಯ್ಡಾ: ಇತ್ತೀಚೆಗೆ ದುಬಾರಿ ಜಾತಿ ನಾಯಿಗಳ ಮೇಲೆ ಜನರ ವ್ಯಾಮೋಹ ಹೆಚ್ಚಿದ್ದು, ಇದರ ಪರಿಣಾಮ ಸಿನಿಮೀಯ ಘಟನೆಯೊಂದು ನಡೆದಿದೆ. ನಾಯಿಗಾಗಿ ನಾಯಿ ಮಾಲೀಕನನ್ನೇ ಕಿಡ್ನ್ಯಾಪ್ ಮಾಡಿದ ವಿಚಿತ್ರ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ದುಬಾರಿ ಬೆಲೆಯ ನಾಯಿಯ ಮೇಲೆ ಕಣ್ಣು ಹಾಕಿದ್ದ ಖದೀಮರು ಅದಕ್ಕಾಗಿ ನಾಯಿ ಮಾಲೀಕನ ಸಹೋದರನನ್ನೇ ಕಿಡ್ನ್ಯಾಪ್ ಮಾಡಿದ್ದಾರೆ. ಸಹೋದರನನ್ನು ಕಿಡ್ನ್ಯಾಪ್ ಮಾಡಿದ ಬಳಿಕ ಸಹೋದರ ಜೀವ ಸಹಿತ ಬೇಕಾದರೆ ತಮ್ಮ ಬಳಿ ಇರುವ ದುಬಾರಿ ಶ್ವಾನವನ್ನು ತೆಗೆದುಕೊಂಡು ಬರುವಂತೆ ಕಿಡ್ನ್ಯಾಪ್ ಮಾಡಿದವನ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದಾರೆ. 

ಗ್ರೇಟರ್ ನೋಯ್ಡಾದ ಅಲ್ಪಾ 2 (Alpha 2) ಎಂಬಲ್ಲಿ ವಾಸ ಮಾಡುತ್ತಿದ್ದ ರಾಹುಲ್ ಪ್ರತಾಪ್ ಎಂಬುವವರೇ ಕಿಡ್ನ್ಯಾಪ್ ಆದ ವ್ಯಕ್ತಿ. ಇವರ ಸಹೋದರ ಶುಭಂ ಎರಡು ದುಬಾರಿ ಬೆಲೆಯ ಶ್ವಾನಗಳನ್ನು ಸಾಕಿದ್ದರು. ರಾಟ್ ವಿಲ್ಲರ್ (Rottweiler) ಹಾಗೂ ಡಾಗ್ ಅರ್ಜೆಂಟಿನೋ (argentino) ಆ ಎರಡು ದುಬಾರಿ ಶ್ವಾನಗಳಾಗಿದ್ದು, ಇದರಲ್ಲಿ ಶ್ವಾನ ಅರ್ಜೆಂಟಿನೋವನ್ನು ಆರು ತಿಂಗಳ ಹಿಂದೆ 1.5 ಲಕ್ಷ ಹಣ ನೀಡಿ ಖರೀದಿಸಿದ್ದರು. ಈ ಶ್ವಾನದ ಮೇಲೆ ಖದೀಮರು ಕಣ್ಣು ಹಾಕಿದ್ದರು.  ನನ್ನ ಸಹೋದರ ರಾಹುಲ್ (30) ಅಲ್ಪಾ 2 ನಲ್ಲಿ ವಾಸ ಮಾಡುತ್ತಿದ್ದು, ಶ್ವಾನಗಳ ಸಾಕಾಣೆಗೆ ನನಗೆ ಕೆಲಸಕ್ಕೆ ನೆರವಾಗುತ್ತಿದ್ದ. ಅಲ್ಲದೇ ಆಗಾಗ ತನ್ನ ನಿವಾಸದ ಬಳಿ ಈ ದುಬಾರಿ ಶ್ವಾನಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಎಂದು ಶುಭಂ ಹೇಳಿದ್ದಾರೆ.  ರಾಹುಲ್ ಚಲನವಲನಗಳನ್ನು ಗಮನಿಸಿದ ಖದೀಮರು ಆತನನ್ನು ನಾಯಿಗಾಗಿ ಕಿಡ್ನ್ಯಾಪ್ ಮಾಡುವ ಪ್ಲಾನ್ ಮಾಡಿದ್ದಾರೆ.

ಡಿಸೆಂಬರ್ 14ರ ಬುಧವಾರ ಗ್ರೇಟರ್ ನೋಯ್ಡಾದ ಅಲ್ಫಾ2ನಲ್ಲಿ ವಾಸ ಮಾಡುತ್ತಿದ್ದ ರಾಹುಲ್‌ ನಿವಾಸದ ಬಳಿ ಬಂದ ಪರಿಚಯದವನಾದ ವಿಶಾಲ್ ಕುಮಾರ್( Vishal kumar), ತನ್ನ ಇಬ್ಬರು ಗೆಳೆಯರಾದ ಲಲಿತ್ (Lalit) ಹಾಗೂ ಮೋಟಿ (Moti) ಎಂಬುವವರೊಂದಿಗೆ ರಾಹುಲ್‌ನನ್ನು ಭೇಟಿ ಮಾಡಿದ್ದಾರೆ. ಅಲ್ಲಿ ರಾಹುಲ್‌ನಿಂದ ಒತ್ತಡಪೂರ್ವಕವಾಗಿ ಶ್ವಾನವನ್ನು ಕಿತ್ತುಕೊಂಡು ಹೋಗಲು ಮುಂದಾಗಿದ್ದು ಆದರೆ ಇದು ಸಾಧ್ಯವಾಗಿಲ್ಲ. ನಂತರ ಮೂವರು ಶ್ವಾನವನ್ನು ಅಲ್ಲಿ ಬಿಟ್ಟು ರಾಹುಲ್‌ನನ್ನು ಅಲ್ಲಿಂದ ಎಳೆದುಕೊಂಡು ಹೋಗಿದ್ದಾರೆ. ನಂತರ ಅಪಹರಣಕಾರರು ರಾಹುಲ್ ಸಹೋದರ ಶುಭಂಗೆ ಕರೆ ಮಾಡಿ ರಾಹುಲ್ ಜೀವಂತವಾಗಿ ಬೇಕಿದ್ದಲ್ಲಿ ತಮ್ಮ ದುಬಾರಿ ಶ್ವಾನದೊಂದಿಗೆ ಬರುವಂತೆ ಹೇಳಿದ್ದಾರೆ. 

ಕೂಡಲೇ ಶುಭಂ(Shubham) ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪೊಲೀಸರು ತಂಡಗಳನ್ನು ರಚಿಸಿ ಶಂಕಿತರ ಹುಡುಕಾಟದ ಕಾರ್ಯಾಚರಣೆಗೆ ಇಳಿದಿದ್ದಾರೆ. ಅಲ್ಲದೇ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದು ಪೊಲೀಸರು ದೂರವಾಣಿ ಮೂಲಕವೇ ಅವರನ್ನು ವಿಚಾರಣೆ ನಡೆಸಿದಾಗ ಡಿಸೆಂಬರ್ 15 ರಂದು ರಾಹುಲ್‌ನನ್ನು ಬಿಟ್ಟು ಕಳುಹಿಸಿದ್ದಾರೆ. ಅಲಿಗರ್‌ನ ನಿರ್ಜನ ಪ್ರದೇಶವೊಂದರಲ್ಲಿ ರಾಹುಲ್‌ನನ್ನು ಹಾಗೂ ಆತನ ಮೊಬೈಲ್ ಬಿಟ್ಟು ಖದೀಮರು ಪರಾರಿಯಾಗಿದ್ದರು. ನಂತರ ರಾಹುಲ್ ಶುಭಂಗೆ ಕರೆ ಮಾಡಿದ್ದು, ಅಲ್ಲಿಗೆ ಬಂದ ಶುಭಂ ರಾಹುಲ್‌ನನ್ನು(Rahul) ಕರೆದುಕೊಂಡು ಮನೆಗೆ ಹೋಗಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಹುಡುಕಾಟದಲ್ಲಿ ಪೊಲೀಸ್ ತಂಡ ನಿರತವಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಅಂಜನಿ ಕುಮಾರ್ (Anjani Kumar) ಅವರು ಘಟನೆ ಬಗ್ಗೆ ಖಚಿತಪಡಿಸಿದ್ದಾರೆ.  ಒಟ್ಟಿನಲ್ಲಿ ಈ ಪ್ರಕರಣ ಈ ಕಾಲದಲ್ಲಿ ನಾಯಿಗಿರುವ ಬೆಲೆ ಮನುಷ್ಯನಿಗೆ ಇಲ್ಲ ಎಂಬುದಕ್ಕೆ ಪುರಾವೆ ಒದಗಿಸುತ್ತಿದೆ.
 

click me!