
ಕಳೆದ ತಿಂಗಳು ಅಂದರೆ ಜುಲೈನಲ್ಲಿ ಮುಂಬೈನಲ್ಲಿ ಕ್ಲಿನಿಕ್‌ವೊಂದರ ರಿಸೆಪ್ಷನಿಷ್ಟ್ ಮೇಲೆ ಯುವಕನೋರ್ವ ಹಲ್ಲೆ ಮಾಡಿದ ಭಯಾನಕ ವೀಡಿಯೋವೊಂದು ವೈರಲ್ ಆಗಿತ್ತು. ಈ ವೀಡಿಯೋ ವೈರಲ್ ಆದ ನಂತರ ಯುವಕನನ್ನು ಪೊಲೀಸರು ಬಂಧಿಸಿದ್ದರು. ಆದರೆ ಈಗ ಈ ಘಟನೆಯ ಸಂಪೂರ್ಣ ವೀಡಿಯೋ ವೈರಲ್ ಆಗಿದ್ದು, ಆ ರಿಸೆಪ್ಷನಿಷ್ಟ್ ಯುವತಿಯ ಆ ಯುವಕನ ತಾಯಿಗೆ ಮೊದಲು ಕೆನ್ನೆಗೆ ಬಾರಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಈ ವೀಡಿಯೋ ಈಗ ಈ ಪೂರ್ತಿ ವೀಡಿಯೋ ಮತ್ತೆ ವೈರಲ್ ಆಗ್ತಿದ್ದು, ಆಗ ರಿಸೆಪ್ಷನಿಸ್ಟ್‌ಗೆ ಹಲ್ಲೆ ಮಾಡಿದ ಯುವಕನನ್ನು ಬೈದವರು ಈಗ ಅದೇ ಯುವಕನನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಅಂದು ಆಗಿದ್ದೇನು ಅಂತ ಒಮ್ಮೆ ನೋಡೋಣ...
ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ಸುಳ್ಳು ಸತ್ಯವೂ ಆಗಬಹುದು ಸತ್ಯವೂ ಸುಳ್ಳು ಆಗಬಹುದು. ಸುಳ್ಳನ್ನೇ ಸತ್ಯ ಮಾಡಲು ಹೋಗಿ ಈಗ ತಗಲಾಕಿಕೊಂಡ ರಾಜ್ಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ಈಗ ಹೆಚ್ಚೇನೂ ಹೇಳಬೇಕಾಗಿಲ್ಲ, ಆದರೆ ಅಂತಿಮವಾಗಿ ಗೆಲ್ಲುವುದು ಮಾತ್ರ ಸತ್ಯವೇ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಅದೇ ರೀತಿ ಇಲ್ಲೊಂದು ಪ್ರಕರಣದಲ್ಲಿ ವೀಡಿಯೋವನ್ನು ಅರ್ಧವಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡಲಾಗಿತ್ತು. ಆ ವೀಡಿಯೋದಲ್ಲಿ ಯುವಕನೋರ್ವ ರಿಸೆಪ್ಷನ್ ಆಗಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ನೆಲಕ್ಕೆ ಕುಕ್ಕಿ ಹಿಗ್ಗಾಮುಗ್ಗಾ ಥಳಿಸಿದ ದೃಶ್ಯವಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆತನನ್ನು ಬಂಧಿಸಿದ್ದರು.
ಆದರೆ ಆತ ಹಾಗೆ ಭೀಕರವಾಗಿ ಹಲ್ಲೆ ಮಾಡುವುದಕ್ಕೂ ಮೊದಲು ಆತನ ತಾಯಿಗೆ ಆ ರಿಸೆಪ್ಷನಿಷ್ಟ್ ಕೆನ್ನೆಗೆ ಬಾರಿಸಿದ್ದಳು. ಈ ದೃಶ್ಯವೂ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಆದರೆ ಇದನ್ನು ಅರ್ಧದಿಂದ ಕಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿತ್ತು. ಆದರೆ ಈಗ ಸಂಪೂರ್ಣ ವಿಡಿಯೋ ವೈರಲ್ ಆಗಿದ್ದು, ಆ 25ರ ಹರೆಯದ ಯುವಕ ಕೇವಲ ಕಾಯಿರಿ ಎಂದು ಹೇಳಿದ್ದಕ್ಕೆ ಹೊಡೆದಿಲ್ಲ, ತನ್ನ ತಾಯಿಯ ಕೆನ್ನೆಗೆ ಬಾರಿಸಿದ್ದಕ್ಕೆ ರಿಸೆಪ್ಷನಿಸ್ಟ್ ಮೇಲೆ ಕೆರಳಿ ಹೋಗಿದ್ದಾನೆ ಎಂಬುದು ಸಾಬೀತಾಗಿದೆ. ಆದರೆ ಅಷ್ಟು ಭೀಕರವಾಗಿ ಆತ ಆ ಹುಡುಗಿಯ ಮೇಲೆ ಹಲ್ಲೆ ಮಾಡಿದ್ದು ಮಾತ್ರ ತಪ್ಪೇ ಆದರೆ ಅಂದು ಏನಾಗಿತ್ತು ಅಂತ ನೋಡೋಣ.
ಅಂದು ಅಂದರೆ ಜುಲೈ 23 ರಂದು ಕ್ಲಿನಿಕ್ಕೊಂದರಲ್ಲಿ ಯುವತಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ 25ರ ಹರೆಯದ ಯುವಕನನ್ನು ಡೊಂಬಿವ್ಲಿಯ ಮನ್ಪಡಾ ಪೊಲೀಸರು ಬಂಧಿಸಿದ್ದರು. ಹಲ್ಲೆಗೊಳಗಾದ ಯುವತಿ ಸೋನಾಲಿ ಕಲಾಸರ್ ಕಲ್ಯಾಣ್‌ನ ಪಿಸಾವಲಿ ಗ್ರಾಮದ ನಿವಾಸಿಯಾಗಿದ್ದು, ನಂದಿವಲಿಯಲ್ಲಿರುವ ಡಾ ಅನಿಕೇತ್ ಪಲಾಂಡೆ ಅವರ ಶ್ರೀ ಬಾಲ್ಚಿಕಿತ್ಸಾಲಯದಲ್ಲಿ ರಿಸೆಪ್ಷನ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆಯ ಮೇಲೆ ಹಲ್ಲೆಯಾದ ವೀಡಿಯೋ ವೈರಲ್ ಆಗ್ತಿದ್ದಂತೆ ಎಂಎನ್‌ಎಸ್, ಯುಬಿಟಿ ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು. ನಂತರ ಸ್ಥಳೀಯ ಮನ್ಪಾಡಾ ಪೊಲೀಸರು ಹಲ್ಲೆ ಮಾಡಿದ ಆರೋಪಿ ಗೋಕುಲ್ ಝಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದೂರುದಾರರ ಪ್ರಕಾರ, ಜುಲೈ 21ರ ಸೋಮವಾರ ಸಂಜೆ 6 ಗಂಟೆಗೆ ಆರೋಪಿ ಆಸ್ಪತ್ರೆಗೆ ಬಂದಿದ್ದ ಆ ಸಮಯದಲ್ಲಿ, ವೈದ್ಯರು ಕ್ಲಿನಿಕ್‌ಗೆ ಬಂದಿರಲಿಲ್ಲ, ಮತ್ತು 4 ರಿಂದ 5 ರೋಗಿಗಳು ವೈದ್ಯರಿಗಾಗಿ ಕಾಯುತ್ತಿದ್ದರು. ನಂತರ ಸಂಜೆ 6.35 ಕ್ಕೆ ವೈದ್ಯರು ಕ್ಲಿನಿಕ್‌ಗೆ ಬಂದರು. ಆ ಸಮಯದಲ್ಲಿ, ಕೆಲವು ವೈದ್ಯಕೀಯ ಪ್ರತಿನಿಧಿಗಳು ವೈದ್ಯರನ್ನು ಭೇಟಿ ಮಾಡಲು ಹೋದರು. ಇದೇ ಸಮಯದಲ್ಲಿ ಮಹಿಳೆ ಮತ್ತು ಪುರುಷ ಮಗುವಿನೊಂದಿಗೆ ಚಿಕಿತ್ಸಾಲಯಕ್ಕೆ ತಪಾಸಣೆಗಾಗಿ ಬಂದರು. ಅವರ ಸಂಬಂಧಿಯಾಗಿದ್ದ ಝಾ ಕೂಡ ಅವರೊಂದಿಗೆ ಇದ್ದರು. ಆದರೆ ವೈದ್ಯರು ಎಷ್ಟು ಹೊತ್ತಾದರೂ ಬಾರದೇ ಇತರರ ಜೊತೆ ಮಾತುಕತೆಯಲ್ಲಿ ತೊಡಗಿದ್ದರಿಂದ ಕೋಪಗೊಂಡ ಗೋಕುಲ್, ಅಲ್ಲಿ ವೈದ್ಯರ ಕ್ಯಾಬಿನ್‌ಗೆ ನುಗ್ಗಲು ಯತ್ನಿಸಿದ್ದಾನೆ. ಈ ವೇಳೆ ರಿಸೆಪ್ಷನಿಷ್ಟ್ ಸ್ವಲ್ಪ ಹೊತ್ತು ಕಾಯುವಂತೆ ಹೇಳಿದ್ದಾಳೆ. ಆಗ ಹೊರಹೋದ ಆತ ಮತ್ತೆ ಬಂದು ರಿಸೆಪ್ಷನಿಸ್ಟ್ ಯುವತಿ ಸೋನಾಲಿ ಮೇಲೆ ಹಲ್ಲೆ ಮಾಡಿದ ಎಂದು ಅಂದು ವರದಿಯಾಗಿತ್ತು.
ಆದರೆ ಈಗ ವೈರಲ್ ಆದ ವೀಡಿಯೋದಲ್ಲಿ ರಿಸೆಪ್ಷನಿಸ್ಟ್ ಯುವತಿಯೇ ಮೊದಲಿಗೆ ಆತನ ತಾಯಿಯ ಕೆನ್ನೆಗೆ ಬಾರಿಸಿರುವುದು ಕಂಡು ಬಂದಿದೆ. ಇದನ್ನು ನೋಡಿ ಕೂಡಲೇ ಒಳಗೆ ನುಗ್ಗಿದ ಆತ ಯುವತಿ ಸೋನಾಲಿಗೆ ಒದ್ದಿದ್ದಲ್ಲದೇ ಆಕೆಯನ್ನು ಗುಬ್ಬಚ್ಚಿ ಹಿಡಿದಂತೆ ಹಿಚುಕಿ ಕೂದಲನ್ನು ಎಳೆದು ಥಳಿಸಿದ್ದಾನೆ. ಬಳಿಕ ಅಲ್ಲಿದ್ದವರೆಲ್ಲರೂ ಸೇರಿ ಆತನ ಕೈನಿಂದ ಯುವತಿಯನ್ನು ಬಿಡಿಸಿದ್ದಾರೆ. ಈ ವೀಡಿಯೋ ಈಗ ಮತ್ತೆ ವೈರಲ್ ಆಗ್ತಿದ್ದು, ಯುವತಿಗೆ ಕರ್ಮ ರಿಟರ್ನ್ಸ್ ಎಂದಿದ್ದಾರೆ ಹಾಗೂ ಯುವಕನಿಗೆ ಶಭಾಷ್ ಮಗನೇ ಎನ್ನುತ್ತಿದ್ದಾರೆ. ಈ ಘಟನೆ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಅಮ್ಮನ ಕಣ್ತಪ್ಪಿಸಿ ಶಾಲೆಗೆ ಬಂದ ಮರಿಯಾನೆ: ಅರಣ್ಯ ಇಲಾಖೆಯಿಂದ ತಾಯಿ ಜೊತೆ ಸೇರಿಸುವ ಯತ್ನ
ಇದನ್ನೂ ಓದಿ: ತೂಗಿರೆ ರಂಗನ ತೂಗಿರೆ ಕೃಷ್ಣನ: ಉಡುಪಿಯಲ್ಲಿ ಕೃಷ್ಣನ ತೊಟ್ಟಿಲು ತೂಗಿದ ಸ್ಪೀಕರ್ ಯು.ಟಿ ಖಾದರ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ