
ನವದೆಹಲಿ: ವಿಮಾನಯಾನಕ್ಕೆ ಬಳಸುವ ತೈಲವನ್ನು(aviation turbine fuel) ದೆಹಲಿಯ ವಿಮಾನ ನಿಲ್ದಾಣಕ್ಕೆ ಸಾಗಿಸುತ್ತಿದ್ದ ಟ್ಯಾಂಕರ್‌ಗಳಿಂದ ಈ ಮಾರ್ಗಮಧ್ಯೆ ಕಳ್ಳತನ ಮಾಡುತ್ತಿದ್ದ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಮಾರ್ಗಮಧ್ಯೆ ಹೀಗೆ ಟ್ಯಾಂಕರ್‌ಗಳಿಂದ ಈ ದುಬಾರಿ ಏವಿಯೇಷನ್ ಟರ್ಬೈನ್ ಇಂಧನವನ್ನು ಇಳಿಸುತ್ತಿದ್ದ ಖದೀಮರು ಬಳಿಕ ಅದನ್ನು ಟರ್ಪಂಟೈನ್ ಎಣ್ಣೆ ಎಂದು ಮಾರಾಟ ಮಾಡುತ್ತಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 1.62 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ವರದಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಅಕ್ರಮ ದಂಧೆ ಸರ್ಕಾರಕ್ಕೆ 1.62 ಕೋಟಿ ನಷ್ಟ
ಕಳೆದ ಮೂರು ವರ್ಷಗಳಿಂದ ಈ ಅಕ್ರಮ ದಂಧೆ ನಡೆಯುತ್ತಿತ್ತು. ಭಾನುವಾರ ಈ ದಂಧೆಯ ಬಗ್ಗೆ ದೊರೆತ ಸುಳಿವಿನಿಂದ ಈ ಕೃತ್ಯ ಬೆಳಕಿಗೆ ಬಂದಿದ್ದು, ಆರು ಜನರನ್ನು ವಶಕ್ಕೆ ಪಡೆದು ಇನ್ನಿಬ್ಬರನ್ನು ಬಂಧಿಸಲಾಗಿದೆ. ಈ ಅಕ್ರಮ ದಂಧೆಯಿಂದ ಸರ್ಕಾರಕ್ಕೆ ಸುಮಾರು 1.62 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಸುಮಾರು 5 ಸಾವಿರ ಲೀಟರ್ ಇಂಧನ ಪ್ರತಿದಿನವೂ ಕಳವಾಗಿದ್ದಿರಬಹುದು ಎಂದು ಅಂದಾಜಿಸಲಾಗಿದೆ.
ಜಿಪಿಎಸ್ ಟ್ಯ್ರಾಕಿಂಗ್ ಡೇಟಾವನ್ನೇ ತಿದ್ದಿ ಕಿತಾಪತಿ
ಈ ವಾಯುಯಾನಕ್ಕೆ ಬಳಸಲಾಗುವ ಟರ್ಬೈನ್ ಆಯಿಲ್ ಅನ್ನು ಮೂಲತಃ ಬಹದ್ದೂರ್‌ಗಢದಲ್ಲಿರುವ ಎಚ್‌ಪಿಸಿಎಲ್‌ನ ಅಸೋಡಾ ಡಿಪೋದಿಂದ (HPCL's Asoda Depot) ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Indira Gandhi international airport) ಕಳುಹಿಸಲಾಗುತ್ತಿತ್ತು. ಆದರೆ ಅಲ್ಲಿಂದ ಇಂಧನ ತುಂಬಿಸಿ ಹೊರಬರುತ್ತಿದ್ದ ಟ್ಯಾಂಕರನ್ನು ಚಾಲಕರು, ಸಾಗಣೆದಾರರು ಮತ್ತು ಗೋಡೌನ್ ಮಾಲೀಕರು ಪರಸ್ಪರ ಒಪ್ಪಂದ ಮಾಡಿಕೊಂಡು, ಜಿಪಿಎಸ್ ಟ್ರ್ಯಾಕಿಂಗ್ ಡೇಟಾವನ್ನು ಚಾಣಾಕ್ಷತನದಿಂದ ನಿರ್ವಹಿಸಿ, ಟ್ಯಾಂಕರ್‌ಗಳನ್ನು ಮುಂಡ್ಕಾದಲ್ಲಿ ಗುಪ್ತ ಸ್ಥಳಕ್ಕೆ ತಿರುಗಿಸುತ್ತಿದ್ದರು ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಆದಿತ್ಯ ಗೌತಮ್ ಮಾಧ್ಯಮಗಳಿಗೆ ಮಾಹಿತಿ ಹೇಳಿದ್ದಾರೆ.
ಅಲ್ಲದೇ ವಿಮಾನ ನಿಲ್ದಾಣದಲ್ಲಿ ಗೊತ್ತುಪಡಿಸಿದ ಡಿಪೋದಲ್ಲಿ ಮಾತ್ರ ತೆರೆಯಲು ಉದ್ದೇಶಿಸಲಾದ ಟ್ಯಾಂಕರ್‌ಗಳ ಭದ್ರತಾ ಬೀಗಗಳನ್ನುಆರೋಪಿಗಳು ನಕಲಿ ಮಾಸ್ಟರ್ ಕೀಗಳನ್ನು ಬಳಸಿ ತೆರೆದಿದ್ದರು. ಜೊತೆಗೆ ಟ್ಯಾಂಕರ್‌ನಲ್ಲಿ ಸರಿಯಾದ ವಿತರಣಾ ರೀಡಿಂಗ್‌ಗಳನ್ನು(roper delivery readings)ನಕಲು ಮಾಡಲು ನಕಲಿ ಡಿಪ್ ರಾಡ್‌ಗಳನ್ನು ಬಳಸಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಮಿನರಲ್ ಟರ್ಪಂಟೈನ್ ಆಯಿಲ್ ಎಂದು ಮಾರಾಟ
ಹೀಗೆ ಟ್ಯಾಂಕರ್‌ಗಳಿಂದ ಕಳ್ಳತನ ಮಾಡಿ ಇಳಿಸಿದ ಟ್ಯಾಂಕರ್‌ಗಳನ್ನು ಮಿನರಲ್ ಟರ್ಪಂಟೈನ್ ಆಯಿಲ್ (MTO) ಎಂದು ಹೇಳಿ ಮಾರಾಟ ಮಾಡುತ್ತಿದ್ದರು. ಇದನ್ನು ಸಾಮಾನ್ಯವಾಗಿ ಶಾಯಿ ಮತ್ತು ಬಣ್ಣದ ಉದ್ಯಮದಲ್ಲಿ ಬಳಸಲಾಗುತ್ತದೆ. ಪೊಲೀಸರು ಘಟನಾ ಸ್ಥಳದಿಂದ ತಲಾ 24,000 ಲೀಟರ್ ಎಟಿಎಫ್ ಸಾಗಿಸುತ್ತಿದ್ದ ಮೂರು ತೈಲ ಟ್ಯಾಂಕರ್‌ಗಳು, ಸೈಫನಿಂಗ್ ಪೈಪ್‌ಗಳು, ಡ್ರಮ್‌ಗಳು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪೊಲೀಸರು ದಾಳಿ ನಡೆಸಿದಾಗ, ಟ್ಯಾಂಕರ್‌ಗಳ ಜೊತೆಗೆ, ಕದ್ದ ಇಂಧನವನ್ನು ಸಾಗಿಸಲು ಸಿದ್ಧಪಡಿಸಿದ ನಿಲ್ಲಿಸಿದ ಎರಡು ಪಿಕಪ್ ಟ್ರಕ್‌ಗಳು, 1.05 ಲಕ್ಷ ರೂ. ನಗದು, ಆರು ಡಿಪ್ ರಾಡ್‌ಗಳು(dip rods), ಖೋಟಾ ರಾಡ್‌ಗಳು ಸೇರಿದಂತೆ, ಸೈಫನಿಂಗ್ ಉಪಕರಣಗಳು, ಒಂಬತ್ತು ಖಾಲಿ ಡ್ರಮ್‌ಗಳು ಮತ್ತು ಮೂರು ನಕಲಿ ಮಾಸ್ಟರ್ ಕೀಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಟಿಎಫ್ ಮತ್ತು ವಾಹನಗಳನ್ನು ಸೂಕ್ತ ದಾಖಲೆಗಳ ನಂತರ ಸಂಬಂಧಪಟ್ಟ ತೈಲ ಕಂಪನಿಗಳ ಸುರಕ್ಷಿತ ವಶಕ್ಕೆ ನೀಡಲಾಗಿದೆ.
ಬಂಧಿತರಲ್ಲಿ ಗೋದಾಮು ಮಾಲೀಕ ಮತ್ತು ಮಾಜಿ ಟ್ಯಾಂಕರ್ ಚಾಲಕ ಗಯಾ ಪ್ರಸಾದ್ ಯಾದವ್ (43) ಕೂಡ ಸೇರಿದ್ದಾರೆ. ಅವರು ಲೀಟರ್‌ಗೆ 30 ರೂ.ಗೆ ಇಂಧನ ಖರೀದಿಸಿ 50 ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ವರದಿಯಾಗಿದೆ.
ಎಟಿಎಫ್‌ನ ನಿಯಮಿತ ಖರೀದಿದಾರ ರಾಜ್‌ಕುಮಾರ್ ಚೌಧರಿ (53), ಎಂಟು ಟ್ರಕ್‌ಗಳ ಮಾಲೀಕ ಅಶ್ಪಾಲ್ ಸಿಂಗ್ ಭುಲ್ಲರ್ (53), ಚಾಲಕರಾದ ರಾಮ್ ಭರೋಸ್ ಯಾದವ್ (44), ಅಂಜಯ್ ರಾಯ್ (41), ಮತ್ತು ಸುಬೋಧ್ ಕುಮಾರ್ ಯಾದವ್ (32) ಹಾಗೂ ಪರ್ವೀನ್ ಕುಮಾರ್ ಯಾದವ್ (25) ಬಂಧಿತ ಆರೋಪಿಗಳು. ಟ್ರಕ್ ಚಾಲಕರಿಗೆ ಪ್ರತಿ ಟ್ರಿಪ್‌ಗೆ 1,500 ರೂಪಾಯಿ ನೀಡಲಾಗುತ್ತಿತ್ತು. ಆರೋಪಿಗಳ ವಿರುದ್ಧ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ