
ಚೆನ್ನೈ (ಮೇ.04) ತಮಿಳುನಾಡು ರಾಜಕೀಯ ಇತಿಹಾಸದಲ್ಲಿ ನಟ ವಿಜಯ್ ಜೊಸೆಫ್ ಮೂಡಿಸಿದ ಸಂಚಲನ, ಸೃಷ್ಟಿಸಿದ ಇತಿಹಾಸ ಒಂದೆರೆಡಲ್ಲ. ಒಂದು ಪಕ್ಷ ಸ್ಥಾಪಿಸಿ ಯುವ ಸಮೂಹವನ್ನು ಸೆಳೆಯುತ್ತಾ, ರಾಜ್ಯದ ರಾಜಕಾರಣವನ್ನೇ ಬುಡಮೇಲು ಮಾಡಿದ ಅತ್ಯಂತ ಅಪರೂಪದ ರಾಜಕೀಯ ಬೆಳವಣಿಗೆ ಇದು. 109 ಸ್ಥಾನಗಳಲ್ಲಿ ಟಿವಿಕೆ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಇಟ್ಟಿದೆ. ವಿಜಯ್ ಕಳೆದೆರಡು ವರ್ಷದಲ್ಲಿ ಎದುರಿಸಿದ ಸವಾಲು ಅಷ್ಟಿಷ್ಟಲ್ಲ. ವಿಜಯ್ ಸ್ಥಾನದಲ್ಲಿ ಇನ್ಯಾರೇ ಇದ್ದರೂ ಅವರ ರಾಜಕೀಯ ಜೀವನವೇ ಅಂತ್ಯಗೊಳ್ಳುತ್ತಿತ್ತು. ಆದರೆ ವಿಜಯ್ ಎಲ್ಲವನ್ನು ಎದುರಿಸಿ ಸರ್ಕಾರ ರಚಿಸುವತ್ತ ಹೆಜ್ಜೆ ಇಟ್ಟಿದ್ದಾರೆ.
2026ರ ತಮಿಳುನಾಡು ಚುನಾವಣೆಗೆ ಯಾವುದೇ ಮೈತ್ರಿ ಮಾಡಿಕೊಳ್ಳದೇ ಎದುರಿಸುವುದಾಗಿ ಘೋಷಿಸಿ ಅತೀ ದೊಡ್ಡ ರ್ಯಾಲಿ ಸಂಘಟಿಸುತ್ತಿದ್ದ ನಟ ವಿಜಯ್ ಟಿವಿಕೆ ಪಕ್ಷಕ್ಕೆ ಕರೂರ್‌ನಲ್ಲಿ ನಡೆದ ಕಾಲ್ತುಳಿತ ತೀವ್ರ ಹಿನ್ನಡೆ ತಂದಿತ್ತು. ರಾಜಕೀಯ ರ್ಯಾಲಿಯಲ್ಲಿ ನಡೆದ ಅತೀ ದೊಡ್ಡ ದುರಂತ ಇದು. ಈ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟರೆ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ವಿವಾದ ತೀವ್ರಗೊಂಡಿತ್ತು. ಡಿಎಂಕೆ, ಟಿವಿಕೆ ನಡುವೆ ಜಟಾಪಟಿಯೂ ಹೆಚ್ಚಾಗಿತ್ತು.
ರಾಜಕೀಯ ಜೀವನದಲ್ಲಿ ಕಾಣಿಸಿಕೊಂಡ ವ್ಯಕ್ತಿ ನೈತಿಕವಾಗಿ, ಚಾರಿತ್ರಿಕವಾಗಿ ನಾಯಕನಾಗಿ ಗುರುತಿಸಿಕೊಂಡಿರಬೇಕು. ಇಲ್ಲದಿದ್ದರೆ ಜನರು ತಿರಸ್ಕರಿಸುತ್ತಾರೆ. ಕರೂರು ಕಾಲ್ತುಳಿತ ಘಟನೆ ಸಾವರಿಸಿಕೊಳ್ಳುತ್ತಿದ್ದಂತೆ ಪತ್ನಿ ಗಂಭೀರ ಆರೋಪ ಮಾಡಿದ್ದರು. ಪತಿ ವಿಜಯ್‌ಗೆ ನಟಿ ಜೊತೆ ಸಂಬಂಧವಿದೆ ಎಂದು ಡಿವೋರ್ಸ್ ನೋಟಿಸ್ ಕಳುಹಿಸಿದ್ದರು. ಇದು ವಿಜಯ್ ವೈಯುಕ್ತಿಕ ವಿಷಯವಾದರೂ ರಾಜಕೀಯದಲ್ಲೇ ಇಂತಹ ವಿಷಯಗಳೇ ಅತ್ಯಂತ ಪ್ರಮುಖವಾಗುತ್ತದೆ.
ನಟಿ ತ್ರಿಶಾ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ ಆನ್ನೋ ಊಹಾಹಪೋಹಗಳ ನಡುವೆ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಪತ್ನಿ ಆರೋಪಕ್ಕೆ ಪುಷ್ಠಿ ಸಿಕ್ಕಿತ್ತು. ರಾಜಕೀಯ ಮುಖಂಡರು ಇದೇ ವಿಚಾರ ಮುಂದಿಟ್ಟು ಟೀಕೆ ಆರಂಭಿಸಿದ್ದರು. ಪತ್ನಿಯನ್ನೇ ನೋಡಿಕೊಳ್ಳದೇ ನಟಿ ಜೊತೆಗಿರುವ ನಾಯಕ, ರಾಜ್ಯದ ಹೆಣ್ಣುಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು.
ಇದರ ನಡುವೆ ವಿಜಯ್ ಜನನಾಯಗನ್ ಸಿನಿಮಾಗೆ ಹಲವು ಅಡ್ಡಿ ಆತಂಕಗಳು ಎದುರಾಗಿತ್ತು. ಕೋಟಿ ಕೋಟಿ ಹೂಡಿಕೆ ಸಿನಿಮಾ ರಿಲೀಸ್ ಆಗಲು ರಾಜಕೀಯ ಅಡ್ಡಿ ಆತಂಗಳು ಎದುರಾಗಿತ್ತು. ಬಿಡುಗಡೆಗೂ ಮೊದಲೇ ಚಿತ್ರ ಲೀಕ್ ಆಗಿ ಕೋಲಾಹಲ ಸೃಷ್ಟಿಸಿತ್ತು. ಇದರ ಜೊತೆ ವಿಜಯ್ ಪುತ್ರ ಅಪ್ಪನ ಅನ್‌ಫಾಲೋ ಮಾಡಿ ವೈಯುಕ್ತಿಕ ಜೀವನದಲ್ಲಿ ಭಾರಿ ತಳಮಳ ಎದುರಿಸಿದ್ದರು. ಇತ್ತ ವಿಜಯ್ ರಾಜಕೀಯ ನಡೆಗೆ ಎಲ್ಲೆಡೆಗಳಿಂದ ಟೀಕೆಗಳು ಎದುರಾಗಿತ್ತು.
ಈ ಸಮಸ್ಯೆಗಳ ನಡುವೆ ವಿಜಯ್ ತನ್ನ ಪಕ್ಷವನ್ನು ತಮಿಳುನಾಡಿನಲ್ಲಿ ಅಧಿಕಾರಕ್ಕೆ ತಂದಿದ್ದಾರೆ. ಡಿಎಂಕೆ, ಎಐಡಿಎಂಕೆ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಘಟಾನುಘಟಿ ಪಕ್ಷಗಳನ್ನೇ ಹಿಂದಿಕ್ಕಿದ ವಿಜಯ್ ಟಿವಿಕೆ ಪಕ್ಷ ಇದೀಗ ದೇಶದ ಇತಿಹಾಸದಲ್ಲಿ ಹೊಸ ಚರಿತ್ರೆ ಬರೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ