
ಮುಂಬೈ: 'ಮಾಡಿದ ಪಾಪ ತಟ್ಟಿಯೇ ತಟ್ಟುತ್ತದೆ. ಅದಕ್ಕೆ ಪ್ರಾಯಶ್ಚಿತ ಇದ್ದೇ ಇದೆ' ಎಂಬ ಮಾತಿದೆ. ಮಹಾರಾಷ್ಟ್ರದ ಥಾಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಪಿ ಹೇಳಿದ ವಿಷಯ ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಿಶಾಲ್ ಕದಮ್ (43) ಹಾಗೂ ಪ್ರಭು ಕರ್ಕಡೆ (24) ಇಬ್ಬರು ಸ್ನೇಹಿತರು. ಕರ್ಕಡೆಯ ಮೋಥಗಾಂವ್‌ನ ಮನೆಯಲ್ಲಿ ಇತ್ತೀಚೆಗೆ ಪಾರ್ಟಿ ಮಾಡಿದ್ದರು. ಇಬ್ಬರು ಸ್ನೇಹಿತರು ಒಟ್ಟಿಗೆ ಕುಡಿದು ತಿಂದು ತೇಗುತ್ತಿದ್ದರು. ಈ ವೇಳೆ ಇಬ್ಬರ ಮಧ್ಯೆ ಯಾವುದೋ ಸಣ್ಣ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದೆ. ಎಣ್ಣೆ ಅಮಲಿನಲ್ಲಿ ಈ ಗಲಾಟೆ ವಿಕೋಪಕ್ಕೆ ಹೋಗಿ ಕರ್ಕಡೆ ಕದಮ್‌ನನ್ನು ಮುಗಿಸಿಯೇ ಬಿಟ್ಟಿದ್ದ!
ಕದಮ್ ಪ್ರಾಣ ಹೋಗಿರೋದು ಗೊತ್ತಾಗುತ್ತಿದ್ದಂತೆಯೇ ಕರ್ಕಡೆ ಗಾಬರಿ ಆಗಿದ್ದಾನೆ. ಇದರಿಂದ ಪಾರಾಗಲು ಮನೆ ಮಾಲೀಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮನೆ ಮಾಲೀಕ ಸಂದೇಶ್ ಮ್ಹಾತ್ರೆಯನ್ನ ಅಲ್ಲಿಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಬಂದ ಮ್ಹಾತ್ರೆ, ಪೊಲೀಸರಿಗೆ ಮಾಹಿತಿ ನೀಡೋದು ಬೇಡ. ನೀನು ಇನ್ನೂ 24 ವರ್ಷದ ಹುಡುಗ. ನಿನ್ನ ಬದುಕು ಹಾಳಾಗಿ ಹೋಗುತ್ತದೆ. ಮದುವೆ ಬೇರೆ ಆಗಬೇಕು ಎಂದಿದ್ದಾನೆ. ಜೊತೆಗೆ ಕದಮ್‌ನ ದೇಹ ವಿಲೇವಾರಿ ಮಾಡಲು ಸಹಾಯ ಕೂಡ ಮಾಡಿದ್ದಾನೆ. ನಂತರ ಇಬ್ಬರು ಸೇರಿ ಕದಮ್‌ನ ದೇಹವನ್ನು ಒಂದು ಚೀಲದಲ್ಲಿ ತುಂಬಿದ್ದಾರೆ. ಬಳಿಕ ಅದನ್ನು ನಿರ್ಜನ ಸ್ಥಳಕ್ಕೆ ಸಾಗಿಸಿದ್ದಾರೆ. ಹೇಗೋ ಪ್ರಕರಣದಿಂದ ಗೆದ್ದ ಎಂಬ ಭಾವನೆಯಿಂದ ಅಲ್ಲಿಂದ ಹೊರಬಂದಿದ್ದಾರೆ.
ಆರೋಪಿ ಕರ್ಕಡೆಗೆ ಪಾಪ ಪ್ರಜ್ಞೆ ಕಾಡಲು ಶುರುವಾಗಿತ್ತು. ಜೀವ ತೆಗೆದ ದಿನದಿಂದ ಆತ ಸೊರಗಲು ಶುರುಮಾಡಿದ್ದ. ರಾತ್ರಿಯೆಲ್ಲ ನಿದ್ದಿಯಿಲ್ಲದೇ ನರಳಾಡಿದ. ಸುಮಾರು 20 ದಿನಗಳ ಕಾಲ ನಿದ್ರೆ ಬರದೆ ಕಷ್ಟಪಟ್ಟ. ಹಾಗೋ ಹೀಗೋ ನಿದ್ದೆಗೆ ಜಾರಿದಾಗ ಸ್ನೇಹಿತ ಕದಮ್ ಕನಸಲ್ಲಿ ಬಂದು ಕಾಟ ಕೊಡಲು ಶುರು ಮಾಡಿದ್ದನಂತೆ. ಕನಸಿನಲ್ಲಿ ಪದೇ ಪದೇ ಬಂದು ಎಚ್ಚರಗೊಳ್ಳುವಂತೆ ಮಾಡಲು ಶುರು ಮಾಡಿದ್ದ ಎನ್ನಲಾಗಿದೆ. ಈ ಘಟನೆಯಿಂದ ನಾನು ಪಾರೋಗೋದು ಕಷ್ಟ. ಪೊಲೀಸರಿಗೆ ಶರಣಾಗೋದೇ ಬೆಸ್ಟ್ ಎಂದು ಠಾಣೆಯತ್ತ ಓಡೋಡಿ ಬಂದಿದ್ದಾನೆ.
ಆರೋಪಿ ಪೊಲೀಸರಿಗೆ ಬಂದು ಶರಣಾಗುತ್ತಿದ್ದಂತೆಯೇ ಪೊಲೀಸರಿಗೆ ಅನುಮಾನ ಶುರುವಾಗಿದೆ. ಯಾಕೆ ಹೀಗೆ ಮಾಡಿದ ಎಂದು ಪ್ರಕರಣದ ಬಗ್ಗೆ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಕದಮ್‌ನ ಜೀವ ತೆಗೆದ ನಂತರ ತನ್ನ ಕನಸಿನಲ್ಲಿ ನಡೆಯುತ್ತಿದ್ದ ಪ್ರಸಂಗಗಳ ಬಗ್ಗೆ ಆರೋಪಿ ಕರ್ಕಡೆ ವಿವರಿಸಿದ್ದಾನೆ. ಇದರಿಂದ ಪೊಲೀಸರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಪ್ರಕರಣವು ಡೊಂಬಿವ್ಲಿ ಪಶ್ಚಿಮದ ಮೋಥಗಾಂವ್ ಪ್ರದೇಶದಲ್ಲಿ ನಡೆದಿದೆ. ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಐಡಿಯಾ ಕೊಟ್ಟು ಸಹಕಾರ ನೀಡಿದ ಮನೆಯ ಮಾಲೀಕ ಸಂದೇಶ್ ಮ್ಹಾತ್ರೆ ಕೂಡ ಈಗ ಜೈಲು ಪಾಲಾಗಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ