
ಸೂರತ್: ವಾರಕ್ಕೊಮ್ಮೆ ರಜೆ ಕೋರಿ ಹಾಗೂ ದಿನಕ್ಕೆ 12 ಗಂಟೆಗಳ ಕೆಲಸದ ಅವಧಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸುಮಾರು 200 ಜವಳಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುವ ಘಟನೆ ಗುಜರಾತ್‌ನ ಸೂರತ್‌ನಲ್ಲಿ ವರದಿಯಾಗಿದೆ.
ಇಲ್ಲಿನ ಜವಳಿ ಕೇಂದ್ರಗಳಲ್ಲಿ ಕಾರ್ಮಿಕರು ಯಾವುದೇ ಖಚಿತವಾದ ವಾರದ ರಜೆ ಇಲ್ಲದೆ ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ದಿನಗಳಂದೂ ಅವರಿಗೆ ರಜೆ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದರ ವಿರುದ್ಧ ಮೊದಲು ಆಗಸ್ಟ್‌ನಲ್ಲಿ ಅಮ್ರೋಲಿಯಲ್ಲಿ ಕಾರ್ಮಿಕರು ಪ್ರತಿಭಟನೆಗಳನ್ನು ಪ್ರಾರಂಭಿಸಿದರು. ನಂತರ ಅದು ಅಂಜನಾ ಇಂಡಸ್ಟ್ರಿಯಲ್ ಎಸ್ಟೇಟ್, ಕತರ್ಗಮ್, ಸಚಿನ್ ಜಿಐಡಿಸಿ, ಪಿಪೋದರ ಮತ್ತು ಕಡೋದರ ಸೇರಿದಂತೆ ಇದರ ಕೈಗಾರಿಕಾ ಪ್ರದೇಶಗಳಲ್ಲೂ ಭುಗಿಲೆದ್ದಿತು. ಪ್ರತಿಭಟನಾಕಾರರಲ್ಲಿ ಬಿಹಾರ, ಉತ್ತರ ಪ್ರದೇಶ ಹಾಗೂ ಒಡಿಶಾದ ವಲಸೆ ಕಾರ್ಮಿಕರು ಸೇರಿದ್ದರು.
ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಸುಮಾರು 200 ಜವಳಿ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ‘ದಿನನಿತ್ಯ 12 ಗಂಟೆಗಳ ಸುದೀರ್ಘ ಕೆಲಸದ ಅವಧಿಯ ಹೊರತಾಗಿಯೂ ನಮಗೆ ಕನಿಷ್ಠ ವಾರದ ರಜೆಯನ್ನೂ ನೀಡುತ್ತಿಲ್ಲ. ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಹಬ್ಬದ ದಿನಗಳಂದೂ ರಜೆ ನೀಡದೆ ಶೋಷಣೆ ಮಾಡಲಾಗುತ್ತಿದೆ. ನಾವು ಏನು ಮನುಷ್ಯರಲ್ಲವೇ?’ ಎಂದು ಕಾರ್ಮಿಕರು ಕಣ್ಣೀರಿಟ್ಟಿದ್ದಾರೆ.
ಇನ್ನೊಂದೆಡೆ, ಕಾರ್ಮಿಕರ ಈ ಬೇಡಿಕೆಯನ್ನು ಪೂರೈಸುವುದು ಆರ್ಥಿಕವಾಗಿ ಕಾರ್ಯಸಾಧುವಲ್ಲ ಹಾಗೂ ಇದರಿಂದ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಉದ್ಯಮದ ಆಡಳಿತ ಮಂಡಳಿಯು ವಜಾ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಆದರೆ, ವಿಶ್ರಾಂತಿಯಿಲ್ಲದೆ ನಿರಂತರ ದುಡಿಸಿಕೊಳ್ಳುವುದು ಕಾರ್ಮಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಉದ್ಯೋಗಿಗಳ ವಜಾ ಖಂಡಿಸಿ ಕಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ