Freebie Budget: ಬೇಕಾಬಿಟ್ಟಿ ಚುನಾವಣಾ ಭರವಸೆಗಳಿಗೆ ಸುಪ್ರೀಂ ಕಿಡಿ!

By Suvarna NewsFirst Published Jan 26, 2022, 7:28 AM IST
Highlights

*ಬಜೆಟ್‌ ಗಾತ್ರಕ್ಕಿಂತ ಇಂಥ ಭರವಸೆಗಳ ಮೊತ್ತದ ಗಾತ್ರವೇ ಅಧಿಕ
*ಇದನ್ನು ನಿಯಂತ್ರಿಸುವ ಬಗ್ಗೆ ಸರ್ಕಾರ, ಚು. ಆಯೋಗಕ್ಕೆ ನೋಟಿಸ್‌
*4 ವಾರದಲ್ಲಿ ಉತ್ತರ ಒದಗಿಸಲು ತಾಕೀತು
 

ನವದೆಹಲಿ (ಜ. 26): ಚುನಾವಣೆಯಲ್ಲಿ (Election) ಉಚಿತ ಕೊಡುಗೆಗಳ (Freebie) ಬೇಕಾಬಿಟ್ಟಿಭರವಸೆ ನೀಡುವ ರಾಜಕೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್‌ (Supreme Court), ‘ಇವುಗಳನ್ನು ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ 4 ವಾರದಲ್ಲಿ ಉತ್ತರಿಸಬೇಕು’ ಎಂದು ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿ ಮಾಡಿದೆ. ಇದಲ್ಲದೆ, ‘ಬಜೆಟ್‌ ಗಾತ್ರಕ್ಕಿಂತ ಇಂಥ ‘ಉಚಿತ ಕೊಡುಗೆ’ಗಳ ಭರವಸೆಗಳ ಮೊತ್ತದ ಗಾತ್ರವೇ ಹೆಚ್ಚಿರುತ್ತದೆ’ ಎಂದು ಚಾಟಿ ಬೀಸಿದೆ.

ಬೇಕಾಬಿಟ್ಟಿಭರವಸೆಗಳನ್ನು ನೀಡುವ ಪಕ್ಷಗಳ ಚಿಹ್ನೆ ಮುಟ್ಟುಗೋಲು ಹಾಕಿಕೊಳ್ಳಬೇಕು ಅಥವಾ ಅವುಗಳ ನೋಂದಣಿ ರದ್ದುಗೊಳಿಸಬೇಕು ಎಂದು ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ: Inherit Properties ವಿಲ್ ಬರೆಯದೇ ಮರಣ ಹೊಂದಿದ ತಂದೆ ಆಸ್ತಿ ಹಕ್ಕು ಮಗಳಿಗೆ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

‘ಕೇವಲ ರಾಜಕೀಯ ಲಾಭಕ್ಕಾಗಿ ಪಕ್ಷಗಳು ಇಂಥ ಭರವಸೆ ನೀಡುತ್ತವೆ. ಮಹಿಳೆಯರಿಗೆ ನಾವು ಗೆದ್ದರೆ ಮಾಸಿಕ 1000 ರು. ನೀಡುತ್ತೇವೆ ಎಂದು ಒಂದು ಪಕ್ಷ ಹೇಳಿದರೆ, ಇನ್ನೊಂದು ಪಕ್ಷ 2000 ರು. ಎನ್ನುತ್ತದೆ. ವಾಸ್ತವವಾಗಿ ಇದು ಸಾಧ್ಯವೇ ಇರುವುದಿಲ್ಲ. ಪಂಜಾಬನ್ನೇ ನೋಡಿ. ಆ ರಾಜ್ಯ ಸರ್ಕಾರದ ಸಾಲವೇ 1.82 ಲಕ್ಷ ಕೋಟಿ ರು. ಇದೆ. ಇಂಥ ಭರವಸೆಗಳ ನಿಯಂತ್ರಣಕ್ಕೆ ಇರುವ ಚುನಾವಣಾ ಆಯೋಗದ ನಿಯಮ ಹಲ್ಲಿಲ್ಲದ ಹಾವು. ಒಟ್ಟಾರೆ ಇಂಥ ಭರವಸೆಗಳಿಂದ ಜನರ ತೆರಿಗೆ ಹಣ ಪೋಲಾಗುತ್ತದೆ’ ಎಂದು ಅರ್ಜಿದಾರರ ಪರ ವಕೀಲ ವಿಕಾಸ್‌ ಸಿಂಗ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ರಾಜ್ಯದ ಬಜೆಟ್‌ ಗಾತ್ರಕ್ಕಿಂತ ಇಂಥ ಭರವಸೆಗಳ ಮೊತ್ತವೇ ಹೆಚ್ಚಿರುತ್ತದೆ. ಹೇಗಾದರೂ ಮಾಡಿ ಗೆಲುವು ಸಾಧಿಸಲು ಇಂಥ ಭರವಸೆಗಳನ್ನು ಪಕ್ಷಗಳು ನೀಡುತ್ತವೆ. ಈ ಬಗ್ಗೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗ ಏನು ಹೇಳುತ್ತೋ ನೋಡೋಣ. ಮುಂದಿನ ದಿನಗಳಲ್ಲಿ ಪಕ್ಷಗಳನ್ನೂ ಪ್ರಕರಣದಲ್ಲಿ ಸೇರಿಸಿಕೊಳ್ಳೋಣ’ ಎಂದು ಹೇಳಿ ವಿಚಾರಣೆ ಮುಂದೂಡಿತು.

EVM ಸಾಂವಿಧಾನಿಕ ಮಾನ್ಯತೆ ಪ್ರಶ್ನಿಸಿ ಅರ್ಜಿ: ಪಂಚರಾಜ್ಯಗಳ ಚುನಾವಣೆಗೆ (UP Elections) ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಚುನಾವಣೆಗಳಲ್ಲಿ ಮತಪತ್ರಗಳ ಬದಲಾಗಿ ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ) ಬಳಕೆಯ ಸಾಂವಿಧಾನಿಕ ಮಾನ್ಯತೆಯನ್ನೇ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ನ್ಯಾ ಎನ್‌.ವಿ.ರಮಣ (N V Ramana) ಅವರನ್ನೊಳಗೊಂಡ ನ್ಯಾಯಪೀಠ ಅಂಗೀಕರಿಸಿದೆ.

ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳಲ್ಲಿ ಶೀಘ್ರವೇ ಚುನಾವಣೆ ನಡೆಯಲಿದೆ. ಹೀಗಾಗಿ ಈ ಅರ್ಜಿಯ ತುರ್ತು ವಿಚಾರಣೆ ಅಗತ್ಯವಿದೆ ಎಂಬ ಅರ್ಜಿದಾರ ಎಂ.ಎಲ್‌.ಶರ್ಮಾ (M.L.Sharma) ಮನವಿಯನ್ನು ಸ್ವೀಕರಿಸಿದ ಎನ್‌.ವಿ.ರಮಣ ಅವರನ್ನೊಳಗೊಂಡ ನ್ಯಾಯಪೀಠ, ಅರ್ಜಿಯನ್ನು ಬೇರೊಂದು ಪೀಠ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ ಎಂದು ಹೇಳಿದರು.

ಇದನ್ನೂ ಓದಿ:  Hate Speech: ಸುಪ್ರೀಂ ಮೆಟ್ಟಿಲೇರಿದ ಹಿಂದೂ ಸಂಘಟನೆ, ಮುಸ್ಲಿಂ ನಾಯಕರ ಬಂಧನಕ್ಕೆ ಆಗ್ರಹ!

ವಾದ ಏನು?: ಚುನಾವಣೆಗಳಲ್ಲಿ ಮತಪತ್ರಗಳ ಬದಲಾಗಿ ಇವಿಎಂ (EVM) ಬಳಕೆಯನ್ನು ಜನಪ್ರತಿನಿಧಿಗಳ ಕಾಯ್ದೆ 61ಎಗೆ ಮೂಲಕ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೆ ಈ ಕುರಿತ ತಿದ್ದುಪಡಿಗೆ ಸಂಸತ್ತಿನ ಅನುಮೋದನೆ ಪಡೆದುಕೊಂಡಿಲ್ಲ. ಹೀಗಾಗಿ ಅದನ್ನು ಜನರ ಮೇಲೆ ಹೇರುವಂತಿಲ್ಲ. ಹೀಗಾಗಿ ಇವಿಎಂ ಬಳಕೆಗೆ ಅವಕಾಶ ಕಲ್ಪಿಸಿರುವ ಕಾಯ್ದೆಯನ್ನು ರದ್ದುಗೊಳಿಸಬೇಕು, ಅದನ್ನು ಅಕ್ರಮ ಮತ್ತು ಅಸಾಂವಿಧಾನಿಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿಯಲ್ಲಿ ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯಾಗಿ ಮಾಡಲಾಗಿದೆ. 

click me!