Covid-19 : ಕೇರಳದಲ್ಲಿ 55,475 ಕೇಸು: ಸಾರ್ವಕಾಲಿಕ ಗರಿಷ್ಠ

By Kannadaprabha NewsFirst Published Jan 26, 2022, 5:30 AM IST
Highlights

ಒಂದೇ ದಿನದಲ್ಲಿ 55,475 ಪ್ರಕರಣ 
ಪಾಸಿಟಿವಿಟಿ ಶೇ.44ಕ್ಕೆ ಏರಿಕೆ
ಖ್ಯಾತ ಗಾಯಕಿ ಲತಾ ಮಂಗೇಷ್ಕರ್ ಆರೋಗ್ಯದಲ್ಲಿ ಚೇತರಿಕೆ

ತಿರುವನಂತಪುರ (ಜ.26): ಕೇರಳದಲ್ಲಿ (Kerala) ಮಂಗಳವಾರ ಒಂದೇ ದಿನ 55,475 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಈವರೆಗಿನ ಸಾರ್ವಕಾಲಿಕ ಗರಿಷ್ಠವಾಗಿದೆ. ಜ.20ರಂದು 46387 ಕೇಸು ದಾಖಲಾಗಿದ್ದೇ ಇದುವರೆಗಿನ ಗರಿಷ್ಠವಾಗಿತ್ತು. ಜೊತೆಗೆ ಮಂಗಳವಾರ 154 ಜನರ ಸಾವು ತೋರಿಸಲಾಗಿದೆ. ಈ ಪೈಕಿ 70 ಸಾವು ಈ ಹಿಂದಿನ ಕೆಲವು ದಿನಗಳಲ್ಲಿ ದಾಖಲಾಗಿದ್ದು ಎಂದು ಸರ್ಕಾರ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 1,21,281 ಮಾದರಿಗಳನ್ನು ಪರೀಕ್ಷಿಸಿದ್ದು, ಪಾಸಿಟಿವಿಟಿ ದರ ಶೇ.44 ರಷ್ಟಿದೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 2,85,365 ಸಕ್ರಿಯ ಕೋವಿಡ್‌ (Covid 19) ಪ್ರಕರಣಗಳು ಇದ್ದು ಅವರಲ್ಲಿ ಕೇವಲ ಶೇ. 3.8 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಂದರೆ ಕೇರಳದಲ್ಲಿ ಕೋವಿಡ್ -19 ಗಾಗಿ ಪರೀಕ್ಷಿಸಲಾದ ಇಬ್ಬರಲ್ಲಿ ಒಬ್ಬರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ 15.52 ಪ್ರತಿಶತದ ದೈನಂದಿನ ಧನಾತ್ಮಕ ದರಕ್ಕೆ ತೀವ್ರ ವ್ಯತಿರಿಕ್ತವಾಗಿದೆ. ಇದು 2020 ರಲ್ಲಿ ಸಾಂಕ್ರಾಮಿಕ ರೋಗ ಹರಡಿದ ನಂತರ ಒಂದೇ ದಿನದಲ್ಲಿ ರಾಜ್ಯದಿಂದ ವರದಿಯಾದ ಗರಿಷ್ಠ ಪ್ರಮಾಣದ ಕೇಸ್ ಗಳ ಸಂಖ್ಯೆ ಇದಾಗಿದೆ.

ಕೇರಳದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಠಿಣ ಕ್ರಮ ಜಾರಿ: ಕೇರಳದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಸರ್ಕಾರ ಇನ್ನಷ್ಟುಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದೆ. ಸತತ ಮೂರು ದಿನಗಳ ಕಾಲ ಶೇ.40ಕ್ಕೂ ಕಡಿಮೆ ಹಾಜರಾತಿಯಿರುವ ಶೈಕ್ಷಣಿಕ ಸಂಸ್ಥೆಗಳನ್ನು ಕ್ಲಸ್ಟರ್‌ಗಳಾಗಿ ಘೋಷಿಸಿ ಅವುಗಳನ್ನು 2 ವಾರ ಮುಚ್ಚಲು ಆದೇಶಿಸಲಾಗಿದೆ. ಜೊತೆಗೆ ಸೋಂಕು ಹಾಗೂ ಆಸ್ಪತ್ರೆಗೆ ದಾಖಲಾದವರ ಆಧಾರದ ಮೇಲೆ ಜಿಲ್ಲೆಗಳನ್ನು ವರ್ಗೀಕರಿಸಲು ನಿರ್ಧರಿಸಲಾಗಿದೆ.

* ‘ಎ’ ವರ್ಗದಲ್ಲಿ ಬರುವ ಜಿಲ್ಲೆಗಳಲ್ಲಿ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಮದುವೆ, ಅಂತ್ಯಸಂಸ್ಕಾರಕ್ಕೆ 50 ಜನರ ಮಿತಿ ಹೇರಲಾಗಿದೆ.

* ‘ಬಿ’ ವರ್ಗದ ಜಿಲ್ಲೆಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ. ಮದುವೆ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರ ಮಿತಿ ಹೇರಲಾಗಿದೆ.

* ‘ಸಿ’ ವರ್ಗದ ಜಿಲ್ಲೆಯಲ್ಲಿ ‘ಬಿ’ ವರ್ಗದ ಎಲ್ಲ ನಿರ್ಬಂಧಗಳು ಸೇರಿದಂತೆ ಸಿನಿಮಾ ಮಂದಿರ, ಸ್ನಾನಕೊಳ, ಜಿಮ್‌ಗಳ ಮೇಲೂ ನಿರ್ಬಂಧವಿದೆ.

Fake Covid Certificate: ನಕಲಿ ಕೋವಿಡ್ ರಿಪೋರ್ಟ್ ಪತ್ತೆ: ನಾಲ್ವರ ವಿರುದ್ಧ ಪ್ರಕರಣ
ಲತಾ ಮಂಗೇಶ್ಕರ್‌ ಅರೋಗ್ಯ ಚೇತರಿಕೆ, ಐಸಿಯುನಲ್ಲೇ ಚಿಕಿತ್ಸೆ

ಮುಂಬೈ: ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ರ (lata mangeshkar)ಆರೋಗ್ಯದಲ್ಲಿ ಸ್ಪಲ್ಪ ಚೇತರಿಕೆ ಕಂಡು ಬಂದರೂ ಸದ್ಯ ಅವರನ್ನು ಐಸಿಯುದಲ್ಲೇ (ICU)ಇರಿಸಲಾಗಿದೆ ಎಂದು ಅವರ ಕುಟುಂಬಸ್ಥರು ಮಂಗಳವಾರ ತಿಳಿಸಿದ್ದಾರೆ. 92 ವರ್ಷದ ಲತಾರನ್ನು ಕೋವಿಡ್‌ ಸೋಂಕು ಮತ್ತು ನ್ಯುಮೋನಿಯಾ ಹಿನ್ನೆಲೆ ಮುಂಬೈಯ (Mumbai)ಬ್ರಿಜ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ಜ.8 ರಂದು ದಾಖಲಿಸಲಾಗಿತ್ತು. ಲತಾ ಅವರ ಆರೋಗ್ಯದಲ್ಲಿ ಸ್ಪಲ್ಪ ಚೇತರಿಕೆ ಕಂಡುಬಂದಿದೆ. ಹೀಗಾಗಿ ಅವರ ಕುರಿತು ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ಕುಟುಂಬದವರು ಟ್ವೀಟ್‌ ಮಾಡಿದ್ದಾರೆ.

ಯುಎಇ ತೊರೆದು ಹಾಳೆಪ್ಲೇಟ್ ಉದ್ಯಮ ಸ್ಥಾಪಿಸಿದ ಕಾಸರಗೋಡಿನ ದಂಪತಿ : ಬರ್ತಿದೆ ತಿಂಗಳಿಗೆ ಲಕ್ಷ ಲಕ್ಷ ಆದಾಯ
ಪರಂ, ಕರುಣಾಕರರೆಡ್ಡಿಗೆ ಪಾಸಿಟಿವ್‌

ಬೆಂಗಳೂರು: ಹರಪನಹಳ್ಳಿ ಬಿಜೆಪಿ ಶಾಸಕ ಜಿ. ಕರುಣಾಕರ ರೆಡ್ಡಿ, ಕೊರಟಗೆರೆ ಕಾಂಗ್ರೆಸ್‌ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಕರುಣಾಕರ್‌ ರೆಡ್ಡಿ ಬಳ್ಳಾರಿಯ ನಿವಾಸದಲ್ಲಿ ಹೋಮ್‌ ಐಸೋಲೇಷನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ. 26ರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹರಪನಹಳ್ಳಿಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಮಾಜಿ ಡಿಸಿಎಂ ಜಿ.ಪರಮೇಶ್ವರ್‌ ಅವರಿಗೆ ಜ್ವರದ ಯಾವುದೇ ಲಕ್ಷಣಗಳಿಲ್ಲದಿದ್ದರೂ ಮಂಗಳವಾರ ತಮ್ಮದೇ ಸಿದ್ದಾರ್ಥ ಮೆಡಿಕಲ್‌ ಕಾಲೇಜಿನಲ್ಲಿ ತಪಾಸಣೆ ಮಾಡಿಸಿದಾಗ ಸೋಂಕು ದೃಢಪಟ್ಟಿದೆ. ಕಳೆದೆರೆಡು ದಿನಗಳಿಂದ ತುಮಕೂರು ನಗರದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

click me!