
ನವದೆಹಲಿ: ದೆಹಲಿ, ಬೆಂಗಳೂರು ಸೇರಿ ದೇಶದ ಹಲವು ಏರ್ಪೋರ್ಟ್‌ಗಳಲ್ಲಿ ಕಳೆದ 1 ವರ್ಷದಲ್ಲಿ ವಿಮಾನಗಳ ಜಿಪಿಎಸ್ ಸ್ಪೂಫಿಂಗ್ (ಜಿಪಿಎಸ್ ಮೂಲಕ ನಕಲಿ ಉಪಗ್ರಹ ಸಂಕೇತ ರವಾನೆ) ಹಾಗೂ ‘ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ’ಯಲ್ಲಿ (ಜಿಎಸ್‌ಎಸ್‌ಎಸ್) ಮಧ್ಯಪ್ರವೇಶ ಮಾಡಿದ ಹಲವು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ಮೂಲಕ ವಿಮಾನಗಳನ್ನು ದಿಕ್ಕುತಪ್ಪಿಸುವ ಯತ್ನ ನಡೆದಿದ್ದು ಸಾಬೀತಾಗಿದೆ.
ಸಂಸದ ಎಸ್.ನಿರಂಜನ್ ರೆಡ್ಡಿ ಅವರು ಕೇಳಿದ್ದ ಪ್ರಶ್ನೆಗೆ ಸಂಬಂಧಿಸಿ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರ ನೀಡಿದ್ದು, ಹಲವು ಮಹತ್ವದ ಅಂಶಗಳಿವೆ.
‘ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ನ.23ರಿಂದ ಜಿಪಿಎಸ್ ಜಾಮಿಂಗ್ ಅಥವಾ ಸ್ಪೂಫಿಂಗ್ ಕುರಿತು ವರದಿ ಮಾಡುವುದು ಕಡ್ಡಾಯ ಮಾಡಿದೆ. ಆ ಬಳಿಕ ದೆಹಲಿ ಮಾತ್ರವಲ್ಲದೆ, ಬೆಂಗಳೂರು, ಅಮೃತಸರ, ಮುಂಬೈ, ಹೈದರಾಬಾದ್, ಕೋಲ್ಕತಾ, ಚೆನ್ನೈ ವಿಮಾನ ನಿಲ್ದಾಣಗಳಲ್ಲೂ ಇಂಥ ಪ್ರಕರಣಗಳು ನಿಯಮಿತವಾಗಿ ವರದಿಯಾಗಿವೆ. ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 10ರಲ್ಲಿ ವಿಮಾನ ಇಳಿಯುವ ವೇಳೆ ಜಿಪಿಎಸ್ ಸ್ಪೂಫಿಂಗ್ ಘಟನೆ ವರದಿಯಾಗಿತ್ತು. ಆ ಬಳಿಕ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗಿದೆ. ದೆಹಲಿ ವಿಮಾನ ನಿಲ್ದಾಣದ ಇತರೆ ರನ್‌ವೇಗಳು ಅಥವಾ ನೆಲ ಆಧಾರಿತ ನೇವಿಗೇಷನ್ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ’ ಎಂದಿದ್ದಾರೆ.
ಜಿಪಿಎಸ್ ವ್ಯವಸ್ಥೆ ಬಳಸುವ ವಿಮಾನಗಳಿಗೆ ತಪ್ಪು ಉಪಗ್ರಹ ಸಂಕೇತಗಳನ್ನು ರವಾನಿಸಿ ಗೊಂದಲ ಸೃಷ್ಟಿಸುವ, ಈ ಮೂಲಕ ಅವುಗಳ ದಿಕ್ಕು ತಪ್ಪಿಸುವ ಪ್ರಯತ್ನ ಇದಾಗಿದೆ. ಇದೊಂದು ಸೈಬರ್ ದಾಳಿಯಂದೇ ಪರಿಗಣಿಸಲಾಗಿದ್ದು, ಶತ್ರುರಾಷ್ಟ್ರಗಳು ಉದ್ದೇಶಪೂರ್ವಕವಾಗಿ ಈ ರೀತಿಯ ತಂತ್ರ ಸೃಷ್ಟಿಸಿ ಆತಂಕ ಮೂಡಿಸಿರುವ ಶಂಕೆ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ