
ಕಾನ್ಪುರ: ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶ್ರೀಪ್ರಕಾಶ್ ಜೈಸ್ವಾಲ್ (81) ಶುಕ್ರವಾರ ನಿಧನರಾದರು.
ಶುಕ್ರವಾರ ಬೆಳಗ್ಗೆ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಕಾನ್ಪುರದ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ಜೈಸ್ವಾಲ್, ಕಾನ್ಪುರ ಕ್ಷೇತ್ರದಿಂದ 3 ಬಾರಿ ಸಂಸದರಾಗಿದ್ದರು. ಇವರು ಗೃಹ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರೂ ಆಗಿದ್ದರು. ಸಚಿವರಾಗಿದ್ದಾಗ ಕಲ್ಲಿದ್ದಲು ಹಗರಣದಲ್ಲಿ ಇವರ ಹೆಸರು ಕೇಳಿಬಂದಿತ್ತು.
ನವದೆಹಲಿ: ಪಾಕಿಸ್ತಾನವು ಅಪರಾಧ ಚಟುವಟಿಕೆಗಳಿಂದ ಕುಖ್ಯಾತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಯುಎಇ ಪಾಕ್ ಪ್ರಜೆಗಳಿಗೆ ವೀಸಾವನ್ನು ನಿರ್ಬಂಧಿಸಿದ್ದು, ಕೇವಲ ರಾಜತಾಂತ್ರಿಕ ವೀಸಾವನ್ನು ನೀಡುವುದಕ್ಕೆ ಮುಂದಾಗಿದೆ.ಯುಎಇನಲ್ಲಿ ಪಾಕಿಸ್ತಾನ ಮೂಲದ ಪ್ರಜೆಗಳು ಕೊಲೆ, ದರೋಡೆಯಂಥ ಅಪರಾಧ ಚಟುವಟಿಕೆ ಹಾಗೂ ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಾಕಿಗಳಿಗೆ ಯುಎಇ ವೀಸಾ ನಿರ್ಬಂಧಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಆದರೆ ಈ ಬಗ್ಗೆ ಯುಎಇ ಇದನ್ನು ಅಧಿಕೃತಪಡಿಸಿಲ್ಲ. ಅಲ್ಲದೆ, ಪಾಕ್ ಸರ್ಕಾರ ಕೂಡ ಇದು ನಿರಾಧಾರ ವರದಿ ಎಂದಿದೆ.ಈ ಹಿಂದೆ ಸೌದಿ ಅರೇಬಿಯಾ ಕೂಡ ಪಾಕಿಸ್ತಾನ ಪ್ರಜೆಗಳಿಗೆ ವೀಸಾವನ್ನು ನಿರ್ಬಂಧಿಸಿತ್ತು. ಪಾಕಿಸ್ತಾನದ ಪಾಸ್ಪೋರ್ಟ್ ವಿಶ್ವದಲ್ಲೇ ಕಡೆಯ ನಾಲ್ಕನೆ ಸ್ಥಾನದಲ್ಲಿದೆ.
ಕೋಲ್ಕತಾ/ಮೆಹ್ಸಾನಾ: ಚುನಾವಣಾ ಆಯೋಗ ನಡೆಸುತ್ತಿರುವ ಮತಪಟ್ಟಿ ವಿಶೇಷ ಪರಿಷ್ಕರಣೆಗೆ (ಎಸ್‌ಐಆರ್) ನಿಯೋಜನೆಗೊಂಡಿದ್ದ 2 ಬಿಎಲ್‌ಓ ಅಧಿಕಾರಿಗಳು ಗುಜರಾತ್ ಹಾಗೂ ಪ.ಬಂಗಾಳದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಮೃತಪಟ್ಟ ಬಿಎಲ್‌ಓಗಳ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಅವರ ಸಾವಿಗೆ ಎಸ್‌ಐಆರ್‌ನ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.ಗುಜರಾತ್‌ನ ಮೆಹ್ಸಾಣಾದಲ್ಲಿ ದಿನೇಶ್ ರಾವಲ್ (50) ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದು, ಗುರುವಾರ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಝಾಕಿರ್ ಹುಸೇನ್ ಎಂಬ ಶಿಕ್ಷಕರು ಹೃದಯನೋವು ಕಾಣಿಸಿಕೊಂಡು ಕುಸಿದು ಬಿದ್ದು ಗುರುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.ಇದರ ಬೆನ್ನಲ್ಲೇ ಟಿಎಂಸಿ ನಿಯೋಗವು ದೆಹಲಿಯ ಚುನಾವಣಾ ಆಯೋಗ ಪ್ರಧಾನ ಪೀಠದ ಮುಂದೆ ಹಾಜರಾಗಿ ಮುಖ್ಯ ಆಯುಕ್ತರಿಗೆ ಕೈಯಲ್ಲಿ ರಕ್ತದ ಕಲೆ ಇಟ್ಟುಕೊಂಡಿದ್ದೀರಿ ಎಂದು ಆರೋಪಿಸಿದೆ.
ಹೊಸ ಭೂಕಂಪ ಮ್ಯಾಪ್ ಸಿದ್ಧ: ಇಡೀ ಹಿಮಾಲಯ ಈಗ ಡೇಂಜರ್ ಝೋನ್‌ನಲ್ಲಿ
ನವದೆಹಲಿ: ಭಾರತವು ರಾಷ್ಟ್ರೀಯ ಸೆಸಿಮಿಕ್ ಝೋನೇಷನ್ ಮ್ಯಾಪ್(ಭೂಕಂಪ ವಲಯದ ಮ್ಯಾಪ್)ನಲ್ಲಿ ಭೂಕಂಪ ಡಿಸೈನ್ ಕೋಡ್‌ನಡಿ ಮಹತ್ವದ ಬದಲಾವಣೆ ಮಾಡಿದ್ದು, ಇದೇ ಮೊದಲ ಬಾರಿ ಸಂಪೂರ್ಣ ಹಿಮಾಲಯ ಕ್ಷೇತ್ರವನ್ನು ಹೊಸದಾಗಿ ರಚಿಸಲಾಗಿರುವ ಆರನೇ ವಲಯ (ಅತೀ ಹೆಚ್ಚು ರಿಸ್ಕ್ ಝೋನ್)ಕ್ಕೆ ಸೇರ್ಪಡೆ ಮಾಡಲಾಗಿದೆ.
ಮ್ಯಾಪ್‌ನಲ್ಲಿನ ಬದಲಾವಣೆ ಬಳಿಕ ದೇಶದ ಶೇ.61ರಷ್ಟು ಭಾಗ(ಈ ಹಿಂದೆ ಶೇ.59ರಷ್ಟಿತ್ತು) ಈಗ ಭೂಕಂಪಕ್ಕೆ ತುತ್ತಾಗುವ ಮಧ್ಯಮ ಮತ್ತು ಹೆಚ್ಚಿನ ಅಪಾಯಕಾರಿ ವಲಯದಡಿ ಬಂದಿದೆ. ಈ ಹೊಸ ಮ್ಯಾಪ್‌ನಿಂದಾಗಿ ಕಟ್ಟಡಗಳು, ಮೂಲಸೌಲಭ್ಯಗಳು ಹಾಗೂ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರಪ್ರದೇಶಗಳು ಭವಿಷ್ಯದಲ್ಲಿ ಎದುರಾಗಬಹುದಾದ ಭೂಕಂಪಗಳನ್ನು ಎದುರಿಸಲು ಹೇಗೆ ಸಿದ್ಧತೆ ಮಾಡಿಕೊಳ್ಳಬೇಕೆಂಬ ಬಗ್ಗೆ ಮಾರ್ಗದರ್ಶನ ಮಾಡಲಿದೆ
ಈ ಹಿಂದಿನ ಮ್ಯಾಪ್ ಅನ್ನು 2002ರಲ್ಲಿ ರಚಿಸಲಾಗಿತ್ತು, 2016ರಲ್ಲಿ ಮ್ಯಾಪ್‌ನಲ್ಲಿ ಕೊಂಚ ಅಪ್ಡೇಟ್ ಮಾಡಲಾಗಿತ್ತು. ಆದರೆ ಇದೀಗ ರಚಿಸಲಾಗಿರುವ ಮ್ಯಾಪ್ ಹೆಚ್ಚು ನಿಖರ ಮತ್ತು ವೈಜ್ಞಾನಿಕವಾಗಿದೆ. ಈ ಹಿಂದೆ ದೇಶದ ಶೇ.59ರಷ್ಟು ಭಾಗ ಮಧ್ಯಮ ಮತ್ತು ಹೆಚ್ಚಿನ ಅಪಾಯಕಾರಿ ವಲಯದಲ್ಲಿತ್ತು. ಆದರೆ, ಇದೀಗ ಅದು ಶೇ.61ಕ್ಕೆ ಏರಿಕೆಯಾಗಿದೆ. ಹೊಸ ನಕ್ಷೆ ಪ್ರಕಾರ ದೇಶದ ಶೇ.75ರಷ್ಚು ಜನಸಂಖ್ಯೆ ಹೆಚ್ಚಿನ ಅಪಾಯಕಾರಿ ವಲಯದ ವ್ಯಾಪ್ತಿಯಡಿ ಬರಲಿದೆ.
ಈ ಮ್ಯಾಪ್ ಪ್ರಕಾರ ಮಧ್ಯ ಹಿಮಾಲಯದ ದೊಡ್ಡ ಭಾಗ 200 ವರ್ಷಗಳಲ್ಲಿ ಮೇಲ್ಮೆ ಕಂಪನಕ್ಕೆ ಸಾಕ್ಷಿಯಾಗಿಲ್ಲ. ಇದರರ್ಥ ಈ ಕ್ಷೇತ್ರದಲ್ಲಿ ಭಾರೀ ಪ್ರಮಾಣದ ಒತ್ತಡ ಶೇಖರಣೆಯಾಗಿದ್ದು, ಭವಿಷ್ಯದಲ್ಲಿ ವಿನಾಶಕಾರಿ ಭೂಕಂಪಕ್ಕೆ ಅದು ದಾರಿ ಮಾಡಿಕೊಡಬಹುದು. ಈ ಆತಂಕವನ್ನು ಅರಿತುಕೊಂಡು ಹೊಸ ಮ್ಯಾಪ್ ರಚಿಸಲಾಗಿದೆ. ಹೀಗಾಗಿ ಇಡೀ ಹಿಮಾಲಯ ಪ್ರದೇಶವನ್ನು ಅತ್ಯಂತ ಹೆಚ್ಚಿನ ಅಪಾಯಕಾರಿ ವಲಯಕ್ಕೆ ಸೇರ್ಪಡೆ ಮಾಡಲಾಗಿದೆ.ಈ ಹೊಸ ಮ್ಯಾಪ್ ಅನ್ನು ಪಿಎಸ್‌ಎಚ್‌ಎ(ಸಂಭವನೀಯ ಭೂಕಂಪದ ಅಪಾಯದ ಮೌಲ್ಯಮಾಪನ) ತಂತ್ರಗಾರಿಕೆಯನ್ನು ಬಳಸಿಕೊಂಡು ರಚಿಸಲಾಗಿದೆ.
ಉದಯನಿಧಿ ಜನ್ಮದಿನದಲ್ಲಿ ಅರೆಬೆತ್ತಲೆ ತರುಣಿಯರ ಡಾನ್ಸ್!
ಚೆನ್ನೈ: ಡಿಎಂಕೆ ಪ್ರಮುಖ ನಾಯಕ ಹಾಗೂ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಜನ್ಮದಿನ ನಿಮಿತ್ತ ನಡೆದ ಸಭೆಯೊಂದರಲ್ಲಿ ಅರೆಬೆತ್ತಲೆ ನರ್ತಕಿಯರು ನರ್ತಿಸಿದ್ದು ಟೀಕೆಗೆ ಗುರಿಯಾಗಿದೆನಗರದಲ್ಲಿ ಗುರುವಾರ ಉದಯನಿಧಿ ಜನ್ಮದಿನ ಸಂಭ್ರಮಕ್ಕಾಗಿ ಡಿಎಂಕೆ ಆಯೋಜಿಸಿದ್ದ ಸಮಾರಂಭದಲ್ಲಿ ಡಿಎಂಕೆ ಸಚಿವ ಕೆ.ಆರ್.ಪೆರಿಯಕರುಪ್ಪನ್, ಪಕ್ಷದ ಇತರ ಸದಸ್ಯರ ಮುಂದೆ ತುಂಡುಡುಗೆ ತೊಟ್ಟ ಲಲನೆಯರು ನೃತ್ಯ ಮಾಡುತ್ತಿರುವ ದೃಶ್ಯವೊಂದು ಜಾಲತಾಣದಲ್ಲಿ ಹಡಿದಾಡುತ್ತಿದೆ.
ಅರ್ಧ ಬಟ್ಟೆ ಧರಿಸಿದ ನಾರಿಯರು ಸಚಿವರ ಸನಿಹಕ್ಕೆ ಬಂದು ನೃತ್ಯ ಮಾಡುತ್ತಿದ್ದರು. ಸಚಿವ, ಇತರ ಡಿಎಂಕೆ ಸದಸ್ಯರು ಇದನ್ನು ಸುಮ್ಮನೇ ನೋಡಿ ಆಸ್ವಾದಿಸುತ್ತಿರುವುದು ದೃಶ್ಯದಲ್ಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ