ಆಪರೇಷನ್‌ ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ

Published : Sep 03, 2026, 07:23 AM IST
ram mandir trust first ceo air marshal jitendra mishra

ಸಾರಾಂಶ

ಅಯೋಧ್ಯೆ ರಾಮಮಂದಿರದ ಮೊದಲ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) 'ಆಪರೇಷನ್‌ ಸಿಂದೂರ' ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ ಆಯ್ಕೆಯಾಗಿದ್ದಾರೆ. 5585 ಆಕಾಂಕ್ಷಿಗಳನ್ನು ಹಿಂದಿಕ್ಕಿ ಆಯ್ಕೆಯಾಗಿದ್ದಾರೆ.

ಅಯೋಧ್ಯೆ: ಹಿಂದೂಗಳ 500 ವರ್ಷಗಳ ತಪಸ್ಸಿನ ಫಲವಾಗಿ ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದ ಮೊದಲ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಗಿ ಬೆಂಗಳೂರಲ್ಲಿ ಪೈಲಟ್‌ ತರಬೇತಿ ಪಡೆದಿದ್ದ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರಾ (62) ಅವರನ್ನು ಆಯ್ಕೆ ಮಾಡಲಾಗಿದೆ. ಜತೆಗೆ ಟ್ರಸ್ಟ್‌ನ ಮಾಜಿ ಖಜಾಂಚಿ ಗೋವಿಂದ ಗಿರಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಮಹೇಶ್‌ ಭಾಗ್‌ಚಂದ್ಕಾ ಅವರನ್ನು ಖಜಾಂಚಿಯಾಗಿ ನೇಮಿಸಲಾಗಿದೆ.

ಜಮ್ಮು-ಕಾಶ್ಮೀರದ ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ‘ಆಪರೇಷನ್‌ ಸಿಂದೂರ’ ಕಾರ್ಯಾಚರಣೆಯ ನೇತೃತ್ವವನ್ನು ಪಶ್ಚಿಮ ಏರ್‌ ಕಮಾಂಡ್‌ ಮುಖ್ಯಸ್ಥರಾಗಿ ಜೀತೇಂದ್ರ ಅವರು ಹೊತ್ತುಕೊಂಡಿದ್ದರು ಎಂಬುದು ಗಮನಾರ್ಹ.

ರಾಮಮಂದಿರದ ದೇಣಿಗೆ ಕಳವು ಹಗರಣ ಭಾರೀ ಮುಜುಗರ ಸೃಷ್ಟಿಸಿದ ಬೆನ್ನಲ್ಲೇ, ಪ್ರತಿ ವರ್ಷ ಕೋಟ್ಯಂತರ ಭಕ್ತರ ಭೇಟಿಗೆ ಸಾಕ್ಷಿಯಾಗುವ ದೇಗುಲದ ಉಸ್ತುವಾರಿ ನೋಡಿಕೊಳ್ಳಲು ಸಿಇಒ ನೇಮಕಕ್ಕೆ ನಿರ್ಧರಿಸಲಾಗಿತ್ತು. ಅದರಂತೆ 5585 ಹುದ್ದೆ ಆಕಾಂಕ್ಷಿಗಳ ಪೈಕಿ ಅಂತಿಮವಾಗಿ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ಯಾರಿವರು ಮಿಶ್ರಾ?

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯವರಾದ ಮಿಶ್ರಾ, 1986ರ ಡಿ.6ರಂದು ಭಾರತೀಯ ವಾಯುಪಡೆಗೆ ಸೇರ್ಪಡೆಯಾದರು. 2026ರ ಏ.30ರಂದು ನಿವೃತ್ತರಾಗುವವರೆಗೂ 39 ವರ್ಷಗಳಿಗೂ ಹೆಚ್ಚು ಕಾಲ ವಾಯುಪಡೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕಳೆದ ವರ್ಷ ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್‌ ಸಿಂದೂರ ನಡೆಸಿದ ಸಮಯದಲ್ಲಿ ವೆಸ್ಟರ್ನ್‌ ಏರ್‌ ಕಮಾಂಡ್‌ನ ಮುಖ್ಯಸ್ಥರಾಗಿದ್ದರು. ಆಗ ವಾಯುಪಡೆಯ ಬಹುಮುಖ್ಯ ಕಮಾಂಡ್‌ನ ನೇತೃತ್ವ ವಹಿಸಿ, ಚತುರ ಯುದ್ಧತಂತ್ರದ ಮೂಲಕ ದೇಶರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಈ ವೇಳೆ ಅವರು ತೋರಿದ ಅತ್ಯುನ್ನತ ಸೇವೆ ಮತ್ತು ಸಾಹಸಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಪ್ರಮುಖ ಸೇನಾ ಗೌರವವಾದ ಸರ್ವೋತ್ತಮ ಯುದ್ಧ ಸೇವಾ ಪದಕ ನೀಡಿ ಗೌರವಿಸಿದ್ದರು. ಇದಲ್ಲದೆ ತಮ್ಮ ವೃತ್ತಿ ಜೀವನದಲ್ಲಿ ಅತಿ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಕ್ಕೂ ಮಿಶ್ರಾ ಪಾತ್ರರಾಗಿದ್ದಾರೆ.

ಮಿಶ್ರಾಗೆ ಏಕೆ ಹೊಣೆ?

ಜೀತೇಂದ್ರ ಮಿಶ್ರಾ ಸೇನೆಯಲ್ಲಿ 39 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಅತ್ಯಂತ ಕ್ಲಿಷ್ಟ ಪರಿಸ್ಥಿತಿ ಎದುರಿಸುವ, ದೊಡ್ಡ ಮಟ್ಟದ ಜನಸಮೂಹ ನಿರ್ವಹಣೆಯ ಅನುಭವ ಹೊಂದಿದ್ದಾರೆ. ಹೀಗಾಗಿ ಅವರ ಅನುಭವ ರಾಮಮಂದಿರ ಆಡಳಿತದಲ್ಲಿ ಶಿಸ್ತು, ಭಕ್ತರ ನಿರ್ವಹಣೆ, ಮೂಲಸೌಕರ್ಯ ವಿಸ್ತರಣೆ, ರಾಮಮಂದಿರ ಮತ್ತು ಭಕ್ತರಿಗೆ ಹೆಚ್ಚಿನ ಭದ್ರತೆ ನೀಡಲು ನೆರವಾಗಲಿದೆ ಎಂಬ ಲೆಕ್ಕಾಚಾರವಿದೆ.

ಬೆಂಗಳೂರಲ್ಲಿ ವ್ಯಾಸಂಗ

ಜೀತೇಂದ್ರ ಮಿಶ್ರಾ ಬೆಂಗಳೂರಿನ ಏರ್‌ಫೋರ್ಸ್ ಟೆಸ್ಟ್ ಪೈಲಟ್ಸ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿದ್ದರು. ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಅಮೆರಿಕದ ಏರ್ ಕಮಾಂಡ್ ಆ್ಯಂಡ್ ಸ್ಟಾಫ್ ಕಾಲೇಜು ಮತ್ತು ಬ್ರಿಟನ್‌ನ ರಾಯಲ್ ಕಾಲೇಜ್ ಆಫ್ ಡಿಫೆನ್ಸ್ ಸ್ಟಡೀಸ್‌ನಲ್ಲಿಯೂ ಶಿಕ್ಷಣ ಪೂರೈಸಿದ್ದರು.

ಚಂಪತ್‌ ಸ್ಥಾನಕ್ಕೆ ಗಿರಿ:

ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಚಂಪತ್‌ ರಾಯ್‌ ರಾಜೀನಾಮೆ ನೀಡಿದ್ದರು. ಇದೀಗ ಅವರ ಸ್ಥಾನಕ್ಕೆ ಈ ಹಿಂದೆ ಖಜಾಂಚಿಯಾಗಿದ್ದ ಗೋವಿಂದ ಗಿರಿ ಅವರನ್ನು ನೇಮಿಸಲಾಗಿದೆ. ಮಹೇಶ್‌ ಭಾಗ್‌ಚಂದ್ಕಾ ನೂತನ ಖಜಾಂಚಿಯಾಗಿ ಆಯ್ಕೆಯಾಗಿದ್ದರೆ, ಇನ್ನು ಕೋರ್ಟಲ್ಲಿ ಬಾಲರಾಮನ ಪರ ವಾದ ಮಂಡಿಸಿದ್ದ ಅಯೋಧ್ಯೆಯ ವಕೀಲ ಮದನ್ ಮೋಹನ್ ಪಾಂಡೆ ಮತ್ತು ಶಿಕೋಹಾಬಾದ್‌ನ ಶಿಕ್ಷಣ ತಜ್ಞ ಡಾ. ನಿರ್ಮಲಾ ಯಾದವ್ ಅವರನ್ನು ಹೊಸ ಟ್ರಸ್ಟಿಗಳನ್ನಾಗಿ ನೇಮಿಸಲಾಗಿದೆ.

ಮತ್ತೊಂದು ಕರ್ನಾಟಕ ನಂಟು

ಅಯೋಧ್ಯೆ ಮಂದಿರದ ಬಾಲರಾಮನ ವಿಗ್ರಹಕ್ಕೆ ಬಳಸಿದ ಶಿಲೆಯನ್ನು ಕರ್ನಾಟಕದಿಂದ ಕೊಂಡೊಯ್ಯಲಾಗಿತ್ತು. ಬಾಲರಾಮನ ವಿಗ್ರಹ ಕೆತ್ತಿದ್ದು ಕೂಡ ಮೈಸೂರಿನ ಅರುಣ್‌ ಯೋಗಿರಾಜ್‌, ದೇಗುಲದ ನಿರ್ಮಾಣದ ಉಸ್ತುವಾರಿ ಹೊತ್ತಿದ್ದು ಕನ್ನಡಿಗ ಗೋಪಾಲ್‌ ರಾವ್‌ ನಾಗರಕಟ್ಟೆ, ಇನ್ನು ರಾಮಮಂದಿರ ಟ್ರಸ್ಟ್‌ನಲ್ಲಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸದಸ್ಯರಾಗಿದ್ದಾರೆ. ಅದರ ಜೊತೆಗೆ ಬೆಂಗಳೂರಿನ ನಂಟು ಹೊಂದಿರುವ ಮಿಶ್ರಾ, ದೇಗುಲದ ಮೊದಲ ಸಿಇಒ ಆಗಿ ಹೊರಹೊಮ್ಮಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಆಪರೇಷನ್‌ ಸಿಂದೂರ ವೀರ, ಬೆಂಗಳೂರಿನ ಮಾಜಿ ವಿದ್ಯಾರ್ಥಿ ರಾಮಮಂದಿರದ CEO ಜೀತೇಂದ್ರ ಮಿಶ್ರಾ
ಗಂಡನ ಆದಾಯ ಮೀರಿ ಪತ್ನಿಗೆ ಜೀವನಾಂಶ ನೀಡಲಾಗದು: ದೆಹಲಿ ಕೋರ್ಟ್ ಮಹತ್ವದ ಅಭಿಪ್ರಾಯ