
ಲಂಡನ್: ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಹಣಕಾಸು ಅಕ್ರಮಕ್ಕೆ ಸಂಬಂಧಿಸಿದಂತೆ ದೇಶಭ್ರಷ್ಟನಾಗಿ ಬ್ರಿಟನ್‌ನಲ್ಲಿ ನೆಲೆಸಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅಧಿಕೃತವಾಗಿ ಬ್ರಿಟಿಷ್ ಪೌರತ್ವವನ್ನು ಪಡೆದುಕೊಂಡಿದ್ದಾರೆ. 2010ರಲ್ಲಿ ಭಾರತವನ್ನು ತೊರೆದ ಸುಮಾರು 16 ವರ್ಷಗಳ ನಂತರ ಅವರಿಗೆ ಈ ಪೌರತ್ವ ಲಭಿಸಿದೆ.
ಶನಿವಾರ ಆಕ್ಸ್‌ಫರ್ಡ್ ಯೂನಿಯನ್ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಮತ್ತು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಅವರು ಈ ವಿಚಾರವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ.
’ಬ್ರಿಟನ್ ಹಲವು ವರ್ಷಗಳಿಂದ ನನ್ನ ಮನೆಯಾಗಿದೆ. ಬ್ರಿಟಿಷ್ ಪ್ರಜೆಯಾಗುವುದು ಒಂದು ಗೌರವ ಮತ್ತು ಜವಾಬ್ದಾರಿ’ ಎಂದಿರುವ ಅವರು, ಇದೇ ದಿನದಂದು ತಾವು ಭಾರತೀಯ ಪೌರತ್ವವನ್ನು ತ್ಯಜಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಬ್ರಿಟನ್ ದೊರೆ ಕಿಂಗ್ ಚಾರ್ಲ್ಸ್ III ಅವರ ಜನ್ಮದಿನದಂದೇ ಈ ಪೌರತ್ವದ ಸಂಭ್ರಮವನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಿಕೊಂಡಿರುವುದು ತಮಗೆ ಅತ್ಯಂತ ಹೆಮ್ಮೆಯ ಕ್ಷಣ ಎಂದು ಅವರು ಬಣ್ಣಿಸಿದ್ದಾರೆ. ಜೊತೆಗೆ ನನ್ನ ಜೀವನದ ಪ್ರಯಾಣವು ವಿಭಿನ್ನ ಸಂಸ್ಕೃತಿಗಳು ಮತ್ತು ಅನುಭವಗಳಿಂದ ರೂಪಿಸಲ್ಪಟ್ಟಿದೆ ಮತ್ತು ನಾನು ಹೆಮ್ಮೆಯಿಂದ ಮನೆ ಎಂದು ಕರೆಯುವ ದೇಶಕ್ಕೆ (ಬ್ರಿಟನ್) ಸಕಾರಾತ್ಮಕವಾಗಿ ಕೊಡುಗೆ ನೀಡುವುದನ್ನು ಮುಂದುವರಿಸಲು ನಾನು ಎದುರು ನೋಡುತ್ತಿದ್ದೇನೆ.
ಐಪಿಎಲ್‌ನಲ್ಲಿನ ಹಣಕಾಸಿನ ಅಕ್ರಮಗಳ ತನಿಖೆಯ ನಡುವೆ ಲಲಿತ್ ಮೋದಿ 2010ರಲ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಸಿದ್ದರು. ಈ ಹಿಂದೆ 2025ರಲ್ಲಿ ಅವರು ಪೆಸಿಫಿಕ್ ದ್ವೀಪ ರಾಷ್ಟ್ರವಾದ ವನವಾಟು ಪೌರತ್ವವನ್ನು ಪಡೆಯಲು ಪ್ರಯತ್ನಿಸಿದ್ದರು. ಆದರೆ ಆ ದೇಶದ ಪ್ರಧಾನಿ ಮಧ್ಯಪ್ರವೇಶಿಸಿ ಲಲಿತ್ ಪೌರತ್ವವನ್ನು ರದ್ದುಗೊಳಿಸಲು ಆದೇಶಿಸಿದ್ದರು.
ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ಬ್ರಿಟನ್ ಪೌರತ್ವ ಪಡೆದಿರುವುದರಿಂದ ಭಾರತದಲ್ಲಿ ಅವರ ವಿರುದ್ಧ ನಡೆಯುತ್ತಿರುವ ಕಾನೂನು ತನಿಖೆಗಳು ರದ್ದಾಗುವುದಿಲ್ಲ. ಆದರೆ, ಅವರನ್ನು ಭಾರತಕ್ಕೆ ಕರೆತರುವ ಹಸ್ತಾಂತರ ಪ್ರಕ್ರಿಯೆಯು ಮತ್ತಷ್ಟು ಸವಾಲಿನದ್ದಾಗುವ ಸಾಧ್ಯತೆಯಿದೆ.
ಬ್ರಿಟಿಷ್ ಪೌರತ್ವ ಹೊಂದಿರುವ ವ್ಯಕ್ತಿಯನ್ನು ವಿದೇಶಕ್ಕೆ ಹಸ್ತಾಂತರಿಸುವಾಗ ಬ್ರಿಟನ್ ನ್ಯಾಯಾಲಯಗಳು ಕಠಿಣ ಕಾನೂನು ಮಾನದಂಡಗಳನ್ನು ಅನುಸರಿಸುತ್ತವೆ. ಭಾರತ ಮತ್ತು ಬ್ರಿಟನ್ ನಡುವೆ ಹಸ್ತಾಂತರ ಒಪ್ಪಂದವಿದ್ದರೂ, ಬ್ರಿಟಿಷ್ ಪ್ರಜೆಗೆ ಸಿಗುವ ಹೆಚ್ಚುವರಿ ಕಾನೂನು ರಕ್ಷಣೆಗಳಿಂದಾಗಿ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ