20 ದಿನಗಳಲ್ಲಿ 3ನೇ ಸೈಕ್ಲೋನ್‌: ದೇಶದ 4 ರಾಜ್ಯಗಳಿಗೆ ಹೈ ಅಲರ್ಟ್, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ!

Published : Nov 16, 2026, 08:15 AM IST
Cyclone

ಸಾರಾಂಶ

ಅರ್ನಬ್‌, ಮುರಸು ಬಳಿಕ ಬಂಗಾಳ ಕೊಲ್ಲಿಯಲ್ಲಿ 20 ದಿನಗಳ ಅಂತರದಲ್ಲಿ ‘ಅಕ್ವನ್‌’ (ದುಷ್ಟಶಕ್ತಿ) ಹೆಸರಿನ 3ನೇ ಚಂಡಮಾರುತ ಸೃಷ್ಟಿಯಾಗುತ್ತಿದೆ. ತ.ನಾಡು, ಆಂಧ್ರ, ಒಡಿಶಾ, ಬಂಗಾಳದಲ್ಲಿ ಕಟ್ಟೆಚ್ಚರ ಸಾರಲಾಗಿದೆ. ನ.17ರಿಂದ 5 ದಿನ ಭಾರಿ ಮಳೆ ಸಂಭವ. ಈಗಾಗಲೇ ಕೆಲವು ಕಡೆ ವರ್ಷಧಾರೆ ಶುರು

ಕೋಲ್ಕತಾ: ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ‘ಅಕ್ವನ್‌’ ಚಂಡಮಾರುತ ಮಂಗಳವಾರ ತೀವ್ರ ಸ್ವರೂಪ ಪಡೆಯಲಿದ್ದು, ಪ.ಬಂಗಾಳ, ಒಡಿಶಾ, ಆಂಧ್ರಪ್ರದೇಶ, ಪುದುಚೇರಿ ಹಾಗೂ ತಮಿಳುನಾಡು ಕರಾವಳಿಗಳಲ್ಲಿ ಕಟ್ಟೆಚ್ಚರ ಸಾರಲಾಗಿದೆ. ಇದು ನ.17ರಿಂದ ನ.19ರ ಅವಧಿಯಲ್ಲಿ ತೀವ್ರ ಸ್ವರೂಪ ಪಡೆದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ.

ವಾಯುಭಾರ ಕುಸಿತದಿಂದಾಗಿ ಭಾನುವಾರವೇ ತಮಿಳುನಾಡಿನ ಚೆಂಗಲ್ಪಟ್ಟು, ಚೆನ್ನೈ, ಕಾಂಚೀಪುರಂ, ಕನ್ಯಾಕುಮಾರಿ ಮೊದಲಾದೆಡೆ ಮಳೆ ಸುರಿಯುತ್ತಿದೆ. ಆಂಧ್ರ, ಒಡಿಶಾ, ಬಂಗಾಳದಲ್ಲೂ ಇದೇ ವಾತಾವರಣ ಇದೆ.

ಬಂಗಾಳಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು, ನ,16ರ ಸಂಜೆಯ ವೇಳೆಗೆ ‘ಚಂಡಮಾರುತ’ವಾಗಿ ಬದಲಾಗುವ ಸಾಧ್ಯತೆಯಿದೆ. ನ.17ರಂದು ‘ತೀವ್ರ ಚಂಡಮಾರುತ’ವಾಗಿ ಮತ್ತು. ನ.19ರ ವೇಳೆಗೆ ‘ಅತಿ ತೀವ್ರ ಚಂಡಮಾರುತ’ವಾಗಿ ಬಲಗೊಳ್ಳುವ ಮುನ್ಸೂಚನೆ ಇದೆ. ಆಂಧ್ರ ಕರಾವಳಿಗೆ ಇದು 19ರ ಸುಮಾರಿಗೆ ಅಪ್ಪಳಿಸುವ ಸಾಧ್ಯತೆ ಇದೆ. ನ,19ರಿಂದ 21ರವರೆಗೆ ಮಳೆ ತೀವ್ರ ಸ್ವರೂಪಿಯಾಗಿರಲಿದೆ ಎಂದು ಹವಾಮಾನ ಮೂಲಗಳು ಹೇಳಿವೆ.

ಕರ್ನಾಟಕ್ಕೂ ಎಚ್ಚರಿಕೆ

ಇನ್ನು ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವೈಪ್ಯರಿತ್ಯದ ಪರಿಣಾಮ ನವೆಂಬರ್ 18 ಮತ್ತು 19 ರಂದು ನೆರೆಯ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿ ಮತ್ತು ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ನವೆಂಬರ್ 16 ರ ವೇಳೆಗೆ ಚಂಡಮಾರುತವಾಗಿ ಬದಲಾಗಿ ಭಾರತದ ಪೂರ್ವ ಕರಾವಳಿಯ ಕಡೆಗೆ ಚಲಿಸುವ ನಿರೀಕ್ಷೆಯಿದೆ. ಎರಡು ದಿನಗಳ ನಂತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನವೆಂಬರ್ 19 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವೆಂಬರ್ 15 ರಿಂದ 18 ರವರೆಗೆ ಆತ್ಮೀಯ ಬಂಗಾಳಕೊಲ್ಲಿಯಲ್ಲಿ ಮತ್ತು ನವೆಂಬರ್ 16 ರಿಂದ 19 ರವರೆಗೆ ಮಧ್ಯ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಶನಿವಾರವೇ ಎಚ್ಚರಿಕೆ ನೀಡಿದ್ದ ಇಲಾಖೆ

ಅರ್ನಬ್‌ ಮತ್ತು ಮುರುಸು ಬಳಿಕ ಇದೀಗ ‘ಅಕ್ವನ್‌’ (ದುಷ್ಟಶಕ್ತಿ) ಹೆಸರಿನ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ಸೋಮವಾರ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ.

ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ಇದು ಸೋಮವಾರ ಚಂಡಮಾರುತವಾಗಿ ಪರಿವರ್ತನೆಗೊಂಡು, ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ನ.17ರಿಂದ ಮುಂದಿನ 2 ದಿನಗಳವರೆಗೆ, ಗಂಟೆಗೆ 80 ಕಿ.ಮೀ. ವೇಗದ ಬಿರುಗಾಳಿ ಬೀಸುವ ನಿರೀಕ್ಷೆಯಿದೆ. ಸಮುದ್ರದ ಪ್ರಕ್ಷುಬ್ಧ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸೋಮವಾರದೊಳಗೆ ತೀರಕ್ಕೆ ಮರಳುವಂತೆ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಇಲಾಖೆ ಸಲಹೆ ನೀಡಿದೆ. ಅಲ್ಲದೆ, ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಸೆಂಬರ್‌ 2ನೇ ವಾರ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭ? ಕ್ಷೇತ್ರ ಮರುವಿಂಗಡಣಾ ಬಿಲ್ ಮಂಡನೆ?
ಪಾಕ್‌ ಉಗ್ರನ ಪ್ರೀತಿಯ ಬಲೆಗೆ ಬಿದ್ದು ರೈಲು ಹಳಿ ಸ್ಫೋಟಿಸಿದ 21ರ ಭಾರತೀಯ ಯುವತಿ !