ಜಯಾ ಆಪ್ತೆ ಶಶಿಕಲಾ 300 ಕೋಟಿ ಆಸ್ತಿ ಜಪ್ತಿ| ಚೆನ್ನೈನಲ್ಲಿ ಕಟ್ಟಿಸುತ್ತಿದ್ದ ಬಂಗಲೆ ಕೂಡ ಜಪ್ತಿ! ಜೈಲಿಂದ ಬಿಡುಗಡೆ ಬಳಿಕ ನೆಲೆಸಲು ಕಟ್ಟಿಸುತ್ತಿದ್ದರು
ಚೆನ್ನೈ(ಸೆ.02): ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ, ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾರ ಆಪ್ತೆ ವಿ.ಕೆ. ಶಶಿಕಲಾಗೆ ಸೇರಿದ 300 ಕೋಟಿ ರು.ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಒಟ್ಟು ವಶಪಡಿಸಿಕೊಂಡ 65 ಆಸ್ತಿಗಳ ಪಟ್ಟಿಯಲ್ಲಿ ಜಯಲಲಿತಾ ವಾಸವಿದ್ದ ವೇದನಿಲಯಂ ಎದುರಿನ ವಿಶಾಲ ಜಾಗ ಮತ್ತು ಅಲ್ಲಿ ನಿರ್ಮಿಸುತ್ತಿದ್ದ ಬೃಹತ್ ಬಂಗಲೆ ಕೂಡ ಸೇರಿದೆ. 4 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಬಿಡುಗಡೆಯಾದ ಬಳಿಕ ಈ ಬಂಗಲೆಯಲ್ಲಿ ಉಳಿದುಕೊಳ್ಳಲು ಶಶಿಕಲಾ ನಿರ್ಧರಿಸಿದ್ದರು. ಆದರೆ ಆ ಬಂಗಲೆ ಮತ್ತು ಜಾಗ ಇದೀಗ ಅವರ ಕೈತಪ್ಪಿದೆ. ಬೇನಾಮಿ ವಹಿವಾಟು (ತಡೆ) ಕಾಯ್ದೆಯಡಿ ಆಸ್ತಿ ವಶಪಡಿಸಿಕೊಳ್ಳಲಾಗಿದೆ.
2017ರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಮಿಳುನಾಡು ಮತ್ತು ಪುದುಚೇರಿಯಲ್ಲಿ ಶಶಿಕಲಾ, ಅವರ ಪತಿ ನಟರಾಜನ್ ಮತ್ತು ಅವರ ಬಂಧುಗಳಿಗೆ ಸೇರಿದ ನೂರಾರು ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 1430 ಕೋಟಿ ರು. ಆದಾಯ ತೆರಿಗೆ ವಂಚನೆ ಪತ್ತೆಯಾಗಿತ್ತು. ಜೊತೆಗೆ 7 ಕೋಟಿ ರು. ನಗದು ಮತ್ತು 5 ಕೋಟಿ ರು.ಮೌಲ್ಯದ ಆಭರಣಗಳು ಪತ್ತೆಯಾಗಿದ್ದವು. ಆ ಪ್ರಕರಣ ಸಂಬಂಧ ಈ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ.