ಬೆಂಗಳೂರಿನಲ್ಲಿ ಕನ್ನಡಿಗರು ನಿಂದಿಸಿದರೆಂದು ಕಿಡಿಕಿಡಿಯಾದ ಬಿಹಾರಿ: ಟ್ವಿಟ್ಟರ್‌ನಲ್ಲಿ ಪರ ವಿರೋಧ ಹೋರಾಟ

Published : Apr 14, 2023, 12:02 PM IST
 ಬೆಂಗಳೂರಿನಲ್ಲಿ ಕನ್ನಡಿಗರು ನಿಂದಿಸಿದರೆಂದು ಕಿಡಿಕಿಡಿಯಾದ ಬಿಹಾರಿ: ಟ್ವಿಟ್ಟರ್‌ನಲ್ಲಿ ಪರ ವಿರೋಧ ಹೋರಾಟ

ಸಾರಾಂಶ

ತಾನೊಬ್ಬ ಬಿಹಾರಿ ತನಗೆ ಕನ್ನಡ ಬರುತ್ತಿಲ್ಲ ಎಂದು ಬಿಹಾರ ಮೂಲದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕಿಕೊಂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ  ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ ವಿರೋಧದ ಅಲೆ ಕೇಳಿ ಬರುತ್ತಿದೆ.

ಬೆಂಗಳೂರು: ತಾನೊಬ್ಬ ಬಿಹಾರಿ ತನಗೆ ಕನ್ನಡ ಬರುತ್ತಿಲ್ಲ ಎಂದು ಬಿಹಾರ ಮೂಲದ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕಿಕೊಂಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ  ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪರ ವಿರೋಧದ ಅಲೆ ಕೇಳಿ ಬರುತ್ತಿದೆ. ಈ ಯುವಕನ ವೀಡಿಯೋವನ್ನು  ಸಾವಿರಾರು ಜನ ಉತ್ತರ ಭಾರತೀಯರು ಶೇರ್ ಮಾಡಿಕೊಂಡಿದ್ದು,  ಭಾಷಾ ದ್ವೇಷಕ್ಕೆ ಕಿಡಿ ಹಚ್ಚುವಂತೆ ಮಾಡಿದೆ. ಅಲ್ಲದೇ ಆತ ವಿಡಿಯೋದಲ್ಲಿ ಕನ್ನಡಿಗರನ್ನು ನಿಂದಿಸಿದ್ದಾನೆ ಎಂದು ಕನ್ನಡ ಪರ ಸಂಘಟನೆಗಳು ಕೂಡ ಆತನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಹೀಗೆ ವೀಡಿಯೋ ಮಾಡಿ ಹಾಕಿರುವ ಯುವಕ ಉಪಹಾರ ಮಳಿಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾನೊಬ್ಬ ಯುಟ್ಯೂರ್ ಎಂದು ಹೇಳಿಕೊಂಡಿದ್ದಾನೆ. ವೀಡಿಯೋದಲ್ಲಿ ಹೇಳಿರುವಂತೆ ಆತ ಬಿಹಾರದ ಮುಜಾಫರ್‌ಪುರ ಜಿಲ್ಲೆಯವನಾಗಿದ್ದು, ನಾನಿಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿ ಹಿಂದಿ ಜನರಿಗೆ ಇದೇ ಸಮಸ್ಯೆಯಾಗುತ್ತಿದೆ. ಇಲ್ಲಿ ಇವರು ನನಗೆ ಸೇರಿದಂತೆ ಹಿಂದಿ ಭಾಷೆಯನ್ನು ಮಾತನಾಡುವವರಿಗೆ ಬೈಯುತ್ತಾರೆ ನಿಂದಿಸುತ್ತಾರೆ ಎಂದು ಹೇಳುತ್ತಲೇ ಈತ ಕೆಟ್ಟ ಭಾಷೆಯಲ್ಲಿ ಕನ್ನಡಿಗರನ್ನು ನಿಂದಿಸಿದ್ದಾನೆ. ನಾವು ಹಿಂದಿಯವರು ಎಲ್ಲರಿಗೂ ಆಹಾರ ತಯಾರಿಸಿ ನೀಡುತ್ತೇವೆ. ಇವರು ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ನಾವು ಕೆಲಸ ಮಾಡುವಲ್ಲೆಲ್ಲಾ ನಮ್ಮ ತಾಯಿ ತಂಗಿಯ ಹೆಸರೇಳಿಕೊಂಡು ನಿಂದಿಸುತ್ತಾರೆ.  ನಾವು ಶ್ರಮಪಟ್ಟು ದುಡಿಯುತ್ತೇವೆ. ನಮ್ಮನೇಕೆ ನಿಂದಿಸುತ್ತಾರೆ ನಾವು ಎಲ್ಲರಿಗೂ ಚೆಂದದ ಆಹಾರ ತಯಾರಿಸಿ ನೀಡುತ್ತೇವೆ. ಬಿಹಾರಿಗೆ ನಿಂದಿಸುವುದಾದರೆ ಬನ್ನಿ ನಿಂದಿಸಿ, ಯಾರೆಲ್ಲಾ ತಾಯಿ ಹಾಲು ಕುಡಿದಿರುವಿರೋ ಅವರೆಲ್ಲಾ ಬನ್ನಿ ಎಂದು ಆತ ಕರೆದಿದ್ದಾನೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ವಾಸ್ತವ ಅರಿಯದ ಅನೇಕರು ಈ ವಿಡಿಯೋಗೆ ಇದೊಂದು ಆಘಾತಕಾರಿ ವಿಚಾರ,  ಹೀಗಾಗಬಾರದಿತ್ತು  ಕನ್ನಡಿಗರು ಎಲ್ಲೆಡೆ ಕನ್ನಡ ಬೇಕು ಎನ್ನುವುದು ಸರಿಯಲ್ಲ ಎಂದೆಲ್ಲಾ ಹೇಳಿ  ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರತಿಕ್ರಿಯಿಸಿದ್ದು,  ವಿಡಿಯೋ ಮಾಡಿದ ಬಿಹಾರದ (Bihar) ಯುವಕನನ್ನು ನಿತೀಶ್‌ಕುಮಾರ್ ಯಾದವ್ (Nithish kumar) ಎಂದು ಗುರುತಿಸಲಾಗಿದ್ದು, ಆತ ಉಪಹಾರ ಗೃಹವೊಂದರಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಹಕರೊಂದಿಗಿನ ಗಲಾಟೆಯ ಮಧ್ಯೆ ಆತ ಭಾಷೆಯನ್ನು ಮಧ್ಯೆ ತಂದಿದ್ದಾನೆ ಎಂದಿದ್ದಾರೆ. ಇತ್ತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಿಂದಿ ಪರ ಹಾಗೂ ಕನ್ನಡ ಪರ ಇರುವ ಗುಂಪುಗಳ ಮಧ್ಯೆ ಸಮರ ಶುರುವಾಗುವಂತೆ ಮಾಡಿದೆ.  ರಾಜ್ಯದಲ್ಲಿ ಭಾಷಾ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪವನ್ನು ಕೆಲವರು ಮಾಡಿದ್ದಾರೆ. ಆದರೆ ಪೊಲೀಸರ ತನಿಖೆ ವೇಳೆ ಇದೊಂದು ಆಹಾರಕ್ಕೆ ಸಂಬಂಧಿಸಿದ ಹಾಗೂ ಹರಿದ ನೋಟಿಗೆ ಸಂಬಂಧಿಸಿದ ಗಲಾಟೆ ಎಂಬುದನ್ನು ಖಚಿತಪಡಿಸಿದ್ದಾರೆ. 

ಈ ಹಿಂದೆ ದಕ್ಷಿಣ ಭಾರತದಲ್ಲಿ ಅದರಲ್ಲೂ ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಮಾಡಲಾಗಿದೆ ಎಂಬಂತೆ ಬಿಂಬಿಸುವ ನಕಲಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಕೋಲಾಹಲ ಸೃಷ್ಟಿಸಿತ್ತು. ಈ ಘಟನೆ ನಡೆದು ತಿಂಗಳ ನಂತರ ಈ ಭಾಷಾ ತಾರತಮ್ಯ ಮಾಡಲಾಗುತ್ತಿದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ಬಳಿಕ ಯುವಕ ತನ್ನ ಊರಿಗೆ ವಾಪಸ್ ಹೋಗಿದ್ದು,  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತನಿಂದ ಹೆಚ್ಚಿನ ಮಾಹಿತಿ ಪಡೆಯಲಾಗುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿದ್ದಾರೆ. ಸುಬ್ರಮಣ್ಯನಗರ ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಗಲಾಟೆಯೂ ಭಾಷಾ ವಿಚಾರಕ್ಕೆ ನಡೆದಿಲ್ಲ, ಕೆಟ್ಟ ಆಹಾರಕ್ಕೆ ಸಂಬಂಧಿಸಿದಂತೆ ನಡೆದಿದೆ. ವಿಡಿಯೋದಲ್ಲಿ ಹುಡುಗಿಯರು ಆತನನ್ನು ನಿಂದಿಸಿರುವುದಾಗಿ ಆತ ಹೇಳಿದ್ದಾನೆ. 

ಪೊಲೀಸರ ಪ್ರಕಾರ ಏಪ್ರಿಲ್ 7 ರಂದು ಘಟನೆ ನಡೆದಿದ್ದು, ಇದು ವಾಸ್ತವವಾಗಿ ಭಾಷಾ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಆಗಿರಲೇ ಇಲ್ಲ.  ಮಹಿಳೆಯರು ಹಾಗೂ ನಿತೀಶ್ ಯಾದವ್ ಮಧ್ಯೆ ಸಂವಹನ ಸಮಸ್ಯೆಯಾಗಿದೆ.  ಮಹಿಳೆಯರು ಆ ಉಪಹಾರ ಗೃಹಕ್ಕೆ ಭೇಟಿ ನೀಡಿ ರೈಸ್ ಐಟಂ ಕೇಳಿದ್ದಾರೆ. ಆದರೆ ಅಲ್ಲಿ ಅವರು ಆಹಾರವನ್ನು ಇಷ್ಟಪಟ್ಟಿಲ್ಲ. ಅಲ್ಲದೇ ಆತನಿಗೆ ಹರಿದ ನೂರು ರೂಪಾಯಿ ನೋಟು ನೀಡಿದ್ದಾರೆ. ಆದರೆ ಅದನ್ನು ಯಾದವ್‌ ಸ್ವೀಕರಿಸದೇ ಇದ್ದಾಗ ಇಬ್ಬರ ಮಹಿಳೆಯರು ಹಾಗೂ ಈತನ ಮಧ್ಯೆ ಮಾತಿನ ಚಕಮಕಿ ನಡೆದಿದೆ.  ವಿವಾದ ಮತ್ತಷ್ಟು ಹೆಚ್ಚಾಗಿದ್ದು, ಇತ್ತ ಮಹಿಳೆಯರಿಗೆ ಹಿಂದಿ ಅರ್ಥವಾಗಿಲ್ಲ. ಅತ್ತ ಆತನಿಗೆ ಕನ್ನಡ ಅರ್ಥವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. 

ಯಾದವ್‌ ಉದ್ದೇಶಪೂರ್ವಕವಾಗಿ ಇಲ್ಲಿ ಭಾಷೆಯನ್ನು ಮಧ್ಯೆ ತಂದು ಗಲಾಟೆಯನ್ನು ದೊಡ್ಡದು ಮಾಡಿದ್ದಾನೆ. ಘಟನೆ ನಡೆಯುವ ವೇಳೆ ಹೊಟೇಲ್ ಮಾಲೀಕನೂ ಅಲ್ಲಿದ್ದ. ಘಟನೆಯ ನಂತರ ಯಾದವ್ ಮರಳಿ ಆತನ ಊರಿಗೆ ಹೋಗಿದ್ದು, ಯಾವುದೇ ದೂರು ದಾಖಲಾಗಿಲ್ಲ ಎಂದಿದ್ದಾರೆ.  ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಯಾದವ್,  ಮನೆಗೆ ವಾಪಸ್ ತೆರಳಿದ ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌ಲೋಡ್ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. 

ಆದರೆ ಆತ ವಿಡಿಯೋದಲ್ಲಿ ಕನ್ನಡಿಗರನ್ನು ನಿಂದಿಸಿದ್ದಾನೆ ಎಂದು ಕನ್ನಡಪರ ಸಂಘಟನೆಗಳು ಆತನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.  ರೂಪೇಶ್ ರಾಜಣ್ಣ  ಹಾಗೂ ಕೆಲ ಸಂಘಟನೆಗಳ ಮುಖಂಡರು ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ಮನವಿ ಮಾಡಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!