ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣಕ್ಕೆ 7 ತಿಂಗಳ ಮೃತ ಭ್ರೂಣವೊಂದು ಪಾರ್ಸೆಲ್ ಮೂಲಕ ತಲುಪಿ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.
ಉತ್ತರ ಪ್ರದೇಶ: ಇಲ್ಲಿನ ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣಕ್ಕೆ 7 ತಿಂಗಳ ಮೃತ ಭ್ರೂಣವೊಂದು ಪಾರ್ಸೆಲ್ ಮೂಲಕ ತಲುಪಿ ವಿಮಾನ ನಿಲ್ದಾಣದ ಸಿಬ್ಬಂದಿಯನ್ನು ಆತಂಕಕ್ಕೀಡು ಮಾಡಿದ ಘಟನೆ ನಡೆದಿದೆ.
ಈ ಭ್ರೂಣವನ್ನು ಲಕ್ನೋದಿಂದ ಮುಂಬೈಗೆ ವೈದ್ಯಕೀಯ ತಪಾಸಣೆಗಾಗಿ ವಿಮಾನದ ಮೂಲಕ ಕಳುಹಿಸಲು ನಿರ್ಧರಿಸಲಾಗಿತ್ತು. ಆದರೆ ಪಾರ್ಸೆಲ್ ಕಳುಹಿಸಿದವರು ಇದು ಭ್ರೂಣ ಎಂದು ಮಾಹಿತಿ ನೀಡದ ಹಿನ್ನೆಲೆಯಲ್ಲಿ ಈ ಎಡವಟ್ಟು ಆಗಿದ್ದು ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಗೊಂದಲಕ್ಕೆ ಕಾರಣವಾಗಿತ್ತು. ಲಕ್ನೋ ನಗರದಲ್ಲಿರುವ ಐವಿಎಫ್ ಕೇಂದ್ರವೊಂದು ಇದನ್ನು ಕೊರಿಯರ್ ಕಂಪನಿ ಮೂಲಕ ಮುಂಬೈನಲ್ಲಿರುವ ಲ್ಯಾಬೋರೆಟರಿಗೆ ತಪಾಸಣೆಗಾಗಿ ಕಳುಹಿಸಿತ್ತು. ಆದರೆ ಇದರಲ್ಲಿ ಇರುವುದು ಭ್ರೂಣ ಎಂಬುದನ್ನು ಕೊರಿಯರ್ ಸಂಸ್ಥೆಗೆ ಐವಿಎಫ್ ಕೇಂದ್ರವೂ ಮಾಹಿತಿ ನೀಡಿರಲಿಲ್ಲ ಹೀಗಾಗಿ ಕೊರಿಯರ್ ಕಂಪನಿಯೂ ಅದನ್ನು ಶೀಘ್ರವಾಗಿ ತಲುಪಿಸುವುದಕ್ಕಾಗಿ ವಿಮಾನದ ಮೂಲಕ ಕಳುಹಿಸುವುದಕ್ಕೆ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿದೆ.
ಅಲ್ಲಿ ಕಾರ್ಗೋಗಳ ತಪಾಸಣೆ ವೇಳೆ ಕವರ್ ಮಾಡಿದ ಬಾಕ್ಸ್‌ನಲ್ಲಿ ಭ್ರೂಣ ಇರುವುದು ತಿಳಿದು ಬಂದು ಕೆಲ ಕಾಲ ಗೊಂದಲ ಉಂಟಾಗಿದೆ. ಕೂಡಲೇ ಕೊರಿಯರ್ ಸಂಸ್ಥೆಗೆ ವಿಮಾನ ನಿಲ್ದಾಣದಿಂದ ಕರೆ ಹೋಗಿದ್ದು, ಕೂಡಲೇ ಬರುವಂತೆ ಸೂಚಿಸಲಾಗಿದೆ. ನಂತರ ಅವರ ಜೊತೆಯೇ ಅದನ್ನು ವಾಪಸ್ ಕೊಟ್ಟು ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೊರಿಯರ್ ಸಂಸ್ಥೆಯ ಪ್ರತಿನಿಧಿ, ಈ ಕೊರಿಯರನ್ನು ಮರಳಿ ಐವಿಎಫ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರು ಭ್ರೂಣ ಇರುವುದರ ಬಗ್ಗೆ ಮೊದಲೇ ಯಾವುದೇ ಮಾಹಿತಿ ನೀಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ತಜ್ಞರ ಪ್ರಕಾರ, ಮೃತ ಭ್ರೂಣದ ಮಾದರಿಯನ್ನು ವಾಯು ಸಾರಿಗೆಯಲ್ಲಿ ಸಾಗಣೆಗೆ ಮೊದಲು ಅದನ್ನು ಮೊದಲು ಸರಿಯಾಗಿ ಸಂರಕ್ಷಣೆ ಮಾಡಬೇಕು, ಇಲ್ಲದಿದ್ದರೆ ಅದು ಸಾಗಣೆಯ ಸಮಯದಲ್ಲಿ ಹಾನಿಗೊಳಗಾಗುವ ಸಾಧ್ಯತೆ ಇರುತ್ತದೆ. ಪ್ರಮುಖವಾಗಿ ಹಾರಾಟದ ಸಮಯದಲ್ಲಿ ಒತ್ತಡ ಮತ್ತು ತಾಪಮಾನದಲ್ಲಿನ ಏರಿಳಿತಗಳಿಂದ ಉಂಟಾಗುವ ತ್ವರಿತ ಕೊಳೆಯುವಿಕೆಯಿಂದಾಗಿ, ದ್ರವದ ಸೋರಿಕೆಗೆ ಕಾರಣವಾಗಬಹುದು.